ಭಾನುವಾರ, ಜೂಲೈ 5, 2020
27 °C

ಎಸ್‌ಬಿಐ ಸಂಶೋಧನಾ ವರದಿ: 4ನೇ ತ್ರೈಮಾಸಿಕ ಜಿಡಿಪಿ ಶೇ 1.2

ಪಿಟಿಐ Updated:

ಅಕ್ಷರ ಗಾತ್ರ : | |

ಎಸ್‌ಬಿಐ

ಮುಂಬೈ: ಹಿಂದಿನ ಹಣಕಾಸು ವರ್ಷದ (2019–20) ಕೊನೆಯ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರವು ಶೇ 1.2ರಷ್ಟು ಇರಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿ ತಿಳಿಸಿದೆ.

ಚೀನಾದಿಂದ ಆಮದಾಗುವ ಕಚ್ಚಾ ಸರಕುಗಳನ್ನೆ ನೆಚ್ಚಿಕೊಂಡಿರುವ ಉದ್ದಿಮೆಗಳಲ್ಲಿ ಜನವರಿ-ಮಾರ್ಚ್‌ ಅವಧಿಯಲ್ಲಿ ತಯಾರಿಕಾ ಚಟುವಟಿಕೆಗಳು ಮಂದಗತಿಯಲ್ಲಿದ್ದವು. ಮಾರ್ಚ್‌ ಕೊನೇ ವಾರದಲ್ಲಿ ಲಾಕ್‌ಡೌನ್‌ ಕಾರಣಕ್ಕೆ ದೇಶದಾದ್ಯಂತ ವಾಣಿಜ್ಯ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿದ್ದವು. ಹೀಗಾಗಿ ವೃದ್ಧಿ ದರ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ ಎಂದು ವರದಿ ತಿಳಿಸಿದೆ.

2019–20ರ ಹಣಕಾಸು ವರ್ಷದ ಒಟ್ಟಾರೆ ಆರ್ಥಿಕ ವೃದ್ಧಿ ದರ ಶೇ 4.2ರಷ್ಟು ಇರಲಿದೆ. 2020–21ನೇ ಹಣಕಾಸು ವರ್ಷದ ಜಿಡಿಪಿಯು (–) ಶೇ 6.8ರಷ್ಟು ಋಣಾತ್ಮಕ ಪ್ರಗತಿ ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.

ಶುಕ್ರವಾರ ಸರ್ಕಾರದ ಅಂಕಿ ಅಂಶ: 4ನೇ ತ್ರೈಮಾಸಿಕದ ವೃದ್ಧಿ ದರ ಕುರಿತ ಸರ್ಕಾರದ ಅಧಿಕೃತ ಅಂಕಿ ಅಂಶಗಳನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಇದೇ ಶುಕ್ರವಾರ ಪ್ರಕಟಿಸಲಿದೆ.

ಹಿಂದಿನ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಏಳು ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ (ಶೇ 4.7) ಇಳಿದಿತ್ತು.

ಮಾರ್ಚ್‌ ಕೊನೆಯ ಏಳು ದಿನಗಳಲ್ಲಿನ ದಿಗ್ಬಂಧನದ ಕಾರಣಕ್ಕೆ ಆರ್ಥಿಕತೆಗೆ ₹ 1.4 ಲಕ್ಷ ಕೋಟಿ ಮೊತ್ತದ ನಷ್ಟ ಉಂಟಾಗಿದೆ. ಇದರಿಂದ ವಾರ್ಷಿಕ ವೃದ್ಧಿ ದರವು ಈ ಮೊದಲಿನ ನಿರೀಕ್ಷೆಗಿಂತ (ಶೇ 5) ಕಡಿಮೆ (ಶೇ 4.2) ಇರಲಿದೆ.

ಜಿಡಿಪಿ ನಷ್ಟಕ್ಕೆ ಕೋವಿಡ್‌ ಕೊಡುಗೆ

ಪ್ರಸಕ್ತ ಹಣಕಾಸು ವರ್ಷದಲ್ಲಿನ ವೃದ್ಧಿ ದರವು (–) ಶೇ 6.8ರಷ್ಟು ಇರಲಿದೆ. ವೃದ್ಧಿ ದರದಲ್ಲಿನ ಭಾರಿ ನಷ್ಟಕ್ಕೆ ದೇಶದ ದೊಡ್ಡ ಜಿಲ್ಲೆಗಳೇ ಅತ್ಯಧಿಕ ಸಂಖ್ಯೆಯಲ್ಲಿ ಇರುವ ಕೋವಿಡ್‌ ಬಾಧಿತ ಕೆಂಪು ವಲಯದ ಕೊಡುಗೆಯು ಶೇ 50ರಷ್ಟಿದೆ. ಆರ್ಥಿಕ ನಷ್ಟಕ್ಕೆ ಕಿತ್ತಲೆ ಮತ್ತು ಕೆಂಪು ವಲಯದ ಕೊಡುಗೆ ಶೇ 90ರಷ್ಟಿದೆ.

ಜಿಡಿಪಿ ನಷ್ಟದಲ್ಲಿ ಮುಂಚೂಣಿ 10 ರಾಜ್ಯಗಳ ಕೊಡುಗೆ ಶೇ 75ರಷ್ಟಿದೆ. ಇದರಲ್ಲಿ ಮಹಾರಾಷ್ಟ್ರ (ಶೇ 15.6), ತಮಿಳುನಾಡು (ಶೇ 9.4) ಮತ್ತು ಗುಜರಾತ್‌ (ಶೇ 8.6) ರಷ್ಟಿದೆ. ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆಯೂ ಈ ಮೂರು ರಾಜ್ಯಗಳಲ್ಲಿ ಹೆಚ್ಚಿಗೆ ಇದೆ.

ಜೂನ್‌ ಕೊನೇ ವಾರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂದೂ ವರದಿಯಲ್ಲಿ ಅಂದಾಜಿಸಲಾಗಿದೆ.

ಸದ್ಯಕ್ಕೆ ಪ್ರತಿ 7 ದಿನಕ್ಕೆ ವರದಿಯಾಗುತ್ತಿರುವ ಪ್ರಕರಣಗಳ ಸರಾಸರಿ ಲೆಕ್ಕ ಆಧರಿಸಿ ಹೇಳುವುದಾದರೆ, ಜೂನ್‌ ತಿಂಗಳಾಂತ್ಯಕ್ಕೆ ಹೊಸ ಪ್ರಕರಣಗಳ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಆಗಸ್ಟ್‌ ಆರಂಭದಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಕುಸಿಯಲಿದೆ. ಸೆಪ್ಟೆಂಬರ್‌ ಮಧ್ಯ ಭಾಗದಲ್ಲಿ ಕ್ರಮೇಣ ಕಡಿಮೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತ್ರೈಮಾಸಿಕ ಜಿಡಿಪಿ ಪ್ರಗತಿ (%)

ಜನವರಿ–ಮಾರ್ಚ್ 1.2
ಅಕ್ಟೋಬರ್‌–ಡಿಸೆಂಬರ್ 4.7
ಜುಲೈ–ಸೆಪ್ಟೆಂಬರ್ ‌  5.6
ಏಪ್ರಿಲ್‌–ಜೂನ್ 5.1

ಹಣಕಾಸು ವರ್ಷ; ಜಿಡಿಪಿ ಪ್ರಗತಿ (%)

 2019–20; 4.2

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು