ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವ್ಯಾಪಾರ ಕೊರತೆ ಅಂತರ 10 ತಿಂಗಳ ಗರಿಷ್ಠ

Published : 17 ಸೆಪ್ಟೆಂಬರ್ 2024, 16:43 IST
Last Updated : 17 ಸೆಪ್ಟೆಂಬರ್ 2024, 16:43 IST
ಫಾಲೋ ಮಾಡಿ
Comments

ನವದೆಹಲಿ: ಆಗಸ್ಟ್‌ ತಿಂಗಳಿನಲ್ಲಿ ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಾಗಿದ್ದು, ವಿದೇಶಿ ವ್ಯಾಪಾರದ ಕೊರತೆ ಅಂತರವು 10 ತಿಂಗಳ ಗರಿಷ್ಠ ಮಟ್ಟಕ್ಕೆ ದಾಖಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ವ್ಯಾಪಾರ ಕೊರತೆ ಅಂತರವು ₹2.48 ಲಕ್ಷ ಕೋಟಿ ಆಗಿದೆ. ಆರ್ಥಿಕ ಹಿಂಜರಿಕೆಯಿಂದಾಗಿ ಯುರೋಪ್‌ನ ಹಲವು ದೇಶಗಳಿಂದ ಬೇಡಿಕೆ ಕುಸಿದಿರುವ ಪರಿಣಾಮ ರಫ್ತು ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಿದೆ.

ಆಮದು ಮತ್ತು ರಫ್ತು ವಹಿವಾಟಿನ ನಡುವಣ ವ್ಯತ್ಯಾಸವನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.

ಆಗಸ್ಟ್‌ನಲ್ಲಿ ₹2.90 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ. ಆದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತಿನಲ್ಲಿ ಶೇ 9.32ರಷ್ಟು ಇಳಿಕೆಯಾಗಿದೆ. 

ಆಮದು ಪ್ರಮಾಣವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 3.3ರಷ್ಟು ಹೆಚ್ಚಳವಾಗಿದೆ. ಒಟ್ಟು ₹5.39 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ.

‘ಪೆಟ್ರೋಲಿಯಂ, ಹರಳು ಮತ್ತು ಚಿನ್ನಾಭರಣ ಸಾಗಣೆ ಮೌಲ್ಯದಲ್ಲಿ ಇಳಿಕೆಯಾಗಿದೆ. ಇದೇ ರಫ್ತು ಪ್ರಮಾಣದಲ್ಲಿ ಇಳಿಕೆಗೆ ಕಾರಣವಾಗಿದೆ’ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ತಿಳಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಇದರಿಂದ ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನಲ್ಲಿ ಕಡಿಮೆಯಾಗಿದೆ. ರಷ್ಯಾದಲ್ಲಿ ವಜ್ರಗಳ ಸಂಗ್ರಹಣೆಗೆ ನಿರ್ಬಂಧ ಹೇರಲಾಗಿದೆ. ಇದು ಹರಳು ಮತ್ತು ಚಿನ್ನಾಭರಣಗಳ ರಫ್ತಿನ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT