ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚಿದ ಬೇಡಿಕೆ: ತಯಾರಿಕಾ ವಲಯದ ಚಟುವಟಿಕೆ ಏರಿಕೆ

ಹೆಚ್ಚಿದ ಬೇಡಿಕೆ, ರಫ್ತಿನಿಂದಾಗಿ ಸೂಚ್ಯಂಕ ಹೆಚ್ಚಳ: ಎಸ್‌ ಆ್ಯಂಡ್‌ ಪಿ ಗ್ಲೋಬಲ್‌
Published 1 ಜುಲೈ 2024, 15:50 IST
Last Updated 1 ಜುಲೈ 2024, 15:50 IST
ಅಕ್ಷರ ಗಾತ್ರ

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆ ಜೂನ್‌ ತಿಂಗಳಲ್ಲಿ ಏರಿಕೆಯಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆ ಸೋಮವಾರ ತಿಳಿಸಿದೆ.

ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್ ಸೂಚ್ಯಂಕದ (ಪಿಎಂಐ) ವರದಿ ಪ್ರಕಾರ ಮೇ ತಿಂಗಳಲ್ಲಿ 57.5ರಷ್ಟಿದ್ದ ಸೂಚ್ಯಂಕವು, ಜೂನ್‌ನಲ್ಲಿ 58.3ಕ್ಕೆ ಏರಿಕೆಯಾಗಿದೆ.

ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. 50ಕ್ಕಿಂತಲೂ ಕೆಳಗಿನ ಮಟ್ಟದಲ್ಲಿ ದಾಖಲಾದರೆ ನಕಾರಾತ್ಮಕವೆಂದು ಪರಿಗಣಿಸಲಾಗುತ್ತದೆ.

ಬೇಡಿಕೆ, ರಫ್ತು ಪ್ರಮಾಣದ ಹೆಚ್ಚಳ ಮತ್ತು ಜಾಹೀರಾತುಗಳಿಂದಾಗಿ ಮಾರಾಟದಲ್ಲಿ ಏರಿಕೆಯಾಗಿದೆ. ಹೊಸ ಆರ್ಡರ್‌ಗಳ ಹೆಚ್ಚಳದಿಂದ, ಸಂಸ್ಥೆಗಳು ನೇಮಕಾತಿಯನ್ನು ಹೆಚ್ಚಿಸಿವೆ ಎಂದು ವರದಿ ಹೇಳಿದೆ.

ತಯಾರಿಕಾ ವಲಯದ ಚಟುವಟಿಕೆಗಳ ಏರಿಕೆಯ ಕಾರಣದಿಂದ ಈ ವಲಯದಲ್ಲಿ ನೇಮಕಾತಿಯೂ ಹೆಚ್ಚಾಗಿದೆ. ಹಿಂದಿನ 19 ವರ್ಷಗಳ ಹೋಲಿಕೆಯಲ್ಲಿ ಜೂನ್‌ನಲ್ಲೇ ಗರಿಷ್ಠ ಮಟ್ಟದ ನೇಮಕಾತಿ ನಡೆದಿದೆ. ಜತೆಗೆ ತಯಾರಿಕಾ ವಲಯದ ಕಚ್ಚಾವಸ್ತುಗಳ ಖರೀದಿ ಪ್ರಮಾಣವೂ ಏರಿಕೆಯಾಗಿದೆ ಎಂದು ಎಚ್‌ಎಸ್‌ಬಿಸಿಯ ಗ್ಲೋಬಲ್ ಅರ್ಥಶಾಸ್ತ್ರಜ್ಞ ಮೈತ್ರೇಯಿ ದಾಸ್ ಹೇಳಿದ್ದಾರೆ.

ಜೂನ್‌ನಲ್ಲಿ ಸಿಬ್ಬಂದಿ ವೆಚ್ಚವು ಏರಿಕೆಯಾಗಿದೆ. ಸರಕು ಮತ್ತು ಸಾರಿಗೆ ವೆಚ್ಚದ ಏರಿಕೆಯು ಕಾರ್ಯಾಚರಣೆಯ ವೆಚ್ಚದ ಒಟ್ಟಾರೆ ಹೆಚ್ಚಳಕ್ಕೆ ಕಾರಣವಾಯಿತು. ಉತ್ಪಾದನಾ ವೆಚ್ಚವು ಇಳಿಕೆಯಾಗಿಲ್ಲ. ಇದು ಗರಿಷ್ಠ ಮಟ್ಟದಲ್ಲಿದೆ. ಈ ಹೊರೆಯನ್ನು ತಯಾರಿಕಾ ವಲಯವು ಗ್ರಾಹಕರಿಗೆ ವರ್ಗಾಯಿಸುತ್ತಿದೆ ಎಂದು ವರದಿ ಹೇಳಿದೆ.

ಹೊಸ ರಫ್ತುಗಳು ಗಣನೀಯವಾಗಿ ಹೆಚ್ಚಿದ್ದು, ಏಷ್ಯಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಯುರೋಪ್ ಮತ್ತು ಅಮೆರಿಕಾದಿಂದ ಉತ್ತಮ ಬೇಡಿಕೆಯಿಂದಾಗಿ ಒಳಹರಿವು ಹೆಚ್ಚಿದೆ ಎಂದು ಕಂಪನಿಗಳು ಹೇಳಿವೆ.

ಉತ್ಪಾದನಾ ವಲಯವು ಸಕಾರಾತ್ಮಕವಾಗಿಯೇ ಉಳಿದಿದೆ. ಮುಂದಿನ ವರ್ಷದಲ್ಲಿ ಬೇಡಿಕೆ ಮತ್ತು ಆರ್ಡರ್‌ಗಳಲ್ಲಿ ಮತ್ತಷ್ಟು ಸುಧಾರಣೆ ಕಾಣಲಿದೆ ಎಂದು ಹೇಳಿದೆ.

ಸುಮಾರು 400 ತಯಾರಕರಿಗೆ ಕಳುಹಿಸಲಾದ ಪ್ರಶ್ನಾವಳಿಗಳಲ್ಲಿ ನಮೂದಾಗಿರುವ ಪ್ರತಿಕ್ರಿಯೆ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ತಯಾರಿಕಾ ವಲಯದ ಸೂಚ್ಯಂಕ

2023

ಜೂನ್‌; 57.8

ಜುಲೈ; 57.7

ಆಗಸ್ಟ್; 58.6

ಸೆಪ್ಟೆಂಬರ್; 57.5

ಅಕ್ಟೋಬರ್‌;55.5

ನವೆಂಬರ್; 56.0

ಡಿಸೆಂಬರ್‌; 54.9

2024

ಜನವರಿ;56.5

ಫೆಬ್ರುವರಿ; 56.9

ಮಾರ್ಚ್‌; 59.1

ಏಪ್ರಿಲ್‌; 58.8

ಮೇ; 57.5

ಜೂನ್‌; 58.3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT