ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ವಲಯದ ಪ್ರಗತಿಯೂ ಕುಂಠಿತ: ಸಾಧಾರಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿ

Last Updated 4 ಸೆಪ್ಟೆಂಬರ್ 2019, 11:08 IST
ಅಕ್ಷರ ಗಾತ್ರ

ನವದೆಹಲಿ: ಸೇವಾ ವಲಯದ ಬೆಳವಣಿಗೆಯೂ ಆಗಸ್ಟ್‌ ತಿಂಗಳಲ್ಲಿ ಕುಸಿತ ಕಂಡಿದೆ.

ಹೊಸ ವಹಿವಾಟುಗಳು ಕಡಿಮೆ ಸಂಖ್ಯೆಯಲ್ಲಿ ಹೆಚ್ಚಳಗೊಂಡಿರುವುದರಿಂದ ಉದ್ಯೋಗ ಸೃಷ್ಟಿ ಮತ್ತು ಉತ್ಪಾದನಾ ಹೆಚ್ಚಳವು ಸಾಧಾರಣ ಮಟ್ಟದಲ್ಲಿ ಇರುವುದು ತಿಂಗಳ ಸಮೀಕ್ಷೆಯಲ್ಲಿ ದೃಢಪಟ್ಟಿದೆ.

ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಸರ್ವಿಸಸ್‌ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ ಜುಲೈನಲ್ಲಿ 53.8ರಷ್ಟಿತ್ತು. ಆಗಸ್ಟ್‌ನಲ್ಲಿ ಅದು 52.4ಕ್ಕೆ ಇಳಿದಿದೆ. ಸೇವಾ ವಲಯದಲ್ಲಿನ ಉತ್ಪಾದನೆಯು ನಿಧಾನ ಗತಿಯಲ್ಲಿ ಹೆಚ್ಚಳಗೊಂಡಿರುವುದನ್ನು ಇದು ಸೂಚಿಸುತ್ತದೆ.

ಪರ್ಚೆಜಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ), ಖಾಸಗಿ ವಲಯದ ಕಂಪನಿಗಳ ಹಣಕಾಸು ಪರಿಸ್ಥಿತಿ ಸೂಚಿಸುವ ಸಮೀಕ್ಷೆಯಾಗಿದೆ. ಮರ್ಕಿಟ್ ಗ್ರೂಪ್‌ ಸೇರಿದಂತೆ ಮೂರು ಕಂಪನಿಗಳು ಈ ಸಮೀಕ್ಷೆ ನಡೆಸುತ್ತವೆ. ಈ ಸೂಚ್ಯಂಕವು 50ಕ್ಕಿಂತ ಹೆಚ್ಚಿಗೆ ಇರುವುದು ಎಂದರೆ ಕಂಪನಿಯು ಪ್ರಗತಿಯ ಹಾದಿಯಲ್ಲಿ ಇದೆ ಎಂದರ್ಥ. 50ಕ್ಕಿಂತ ಕಡಿಮೆ ಇರುವುದು ಪ್ರಗತಿ ಹಿನ್ನಡೆಯ ಸೂಚಕವಾಗಿರುತ್ತದೆ.

‘ದೇಶದ ಸೇವಾ ವಲಯದಲ್ಲಿನ ಆಗಸ್ಟ್‌ ತಿಂಗಳ ಬೆಳವಣಿಗೆಯು ನಿಧಾನಗೊಂಡಿರುವುದು, ತಯಾರಿಕಾ ವಲಯದಲ್ಲಿನ ಪ್ರಗತಿ ಕುಂಠಿತಕ್ಕೆ ತಾಳೆಯಾಗುತ್ತಿದೆ. 2019–20ನೆ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದ ಪಾಲಿಗೆ ಇದು ಅಹಿತಕಾರಿ ವಿದ್ಯಮಾನವಾಗಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಪ್ರಧಾನ ಅರ್ಥಶಾಸ್ತ್ರಜ್ಞೆ ಪಿ. ಡಿ ಲಿಮಾ ಹೇಳಿದ್ದಾರೆ.

ಮರ್ಕಿಟ್‌ ಇಂಡಿಯಾ ಸಿದ್ಧಪಡಿಸಿರುವ ತಯಾರಿಕೆ ಮತ್ತು ಸೇವಾ ವಲಯದ ಜಂಟಿ ಸಮೀಕ್ಷೆಯು ಜುಲೈ ತಿಂಗಳ 53.9ರಿಂದ ಆಗಸ್ಟ್‌ನಲ್ಲಿ 52.6ಕ್ಕೆ ಇಳಿದಿದೆ.

ಚೇತರಿಕೆಯ ವಿಶ್ವಾಸ: ಮುಂದಿನ ಒಂದು ವರ್ಷದಲ್ಲಿ ವಹಿವಾಟು ಚೇತರಿಕೆ ಹಾದಿಗೆ ಮರಳುವ ಬಗ್ಗೆ ಸೇವೆಗಳನ್ನು ಒದಗಿಸುವ ಕಂಪನಿಗಳು ವಿಶ್ವಾಸ ವ್ಯಕ್ತಪಡಿಸಿವೆ.

‘ಸರ್ಕಾರ ಪ್ರಕಟಿಸುತ್ತಿರುವ ಕೊಡುಗೆಗಳು ಮುಂಬರುವ 12 ತಿಂಗಳಲ್ಲಿ ಬೆಳವಣಿಗೆ ದರವನ್ನು ಏರುಗತಿಯ ಹಾದಿಗೆ ತೆಗೆದುಕೊಂಡು ಹೋಗಲಿವೆ ಎನ್ನುವುದು ತಯಾರಿಕೆ ಮತ್ತು ಸೇವಾ ವಲಯದ ಉದ್ಯಮಿಗಳ ಆಶಾವಾದವಾಗಿದೆ’ ಎಂದು ಲಿಮಾ ಹೇಳಿದ್ದಾರೆ.

ಇದಕ್ಕೂ ಮೊದಲು ಬಿಡುಗಡೆಯಾಗಿದ್ದ, ತಯಾರಿಕಾ ವಲಯದ ಆಗಸ್ಟ್‌ ತಿಂಗಳ ಪರ್ಚೆಜಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ), 51.4ಕ್ಕೆ ಇಳಿದಿತ್ತು. ಇದು 2018ರ ಮೇ ತಿಂಗಳ ನಂತರದ ಅತಿ ಕಡಿಮೆ ಮಟ್ಟವಾಗಿದೆ. ಈ ವರ್ಷದ ಜುಲೈನಲ್ಲಿ ಇದು 52.5ರಷ್ಟಿತ್ತು.

ಜುಲೈ ನಂತರ ಪ್ರಕಟವಾಗಿರುವ ಬಹುತೇಕ ಸಮೀಕ್ಷೆಗಳು, ತಯಾರಿಕೆ ಮತ್ತು ಸೇವಾ ವಲಯದ ಚಟುವಟಿಕೆಗಳು ವ್ಯಾಪಕ ಪ್ರಮಾಣದಲ್ಲಿ ಕುಸಿತ ಕಂಡಿರುವುದನ್ನು ದಾಖಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT