ಡಿಸೆಂಬರ್ನಲ್ಲಿ ಸೇವಾ ವಲಯದ ಚಟುವಟಿಕೆ ಇಳಿಕೆ

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಡಿಸೆಂಬರ್ನಲ್ಲಿ ಇಳಿಕೆ ಕಂಡಿವೆ. ಇಂಡಿಯಾ ಸರ್ವೀಸಸ್ ಬಿಸಿನೆಸ್ ಆ್ಯಕ್ಟಿವಿಟಿ ಇಂಡೆಕ್ಸ್ ನವೆಂಬರ್ನಲ್ಲಿ 53.7ರಷ್ಟು ಇತ್ತು. ಇದು ಡಿಸೆಂಬರ್ನಲ್ಲಿ 52.3ಕ್ಕೆ ಇಳಿಕೆಯಾಗಿದೆ.
ಸೂಚ್ಯಂಕವು 50 ಮತ್ತು ಅದಕ್ಕಿಂತ ಮೇಲ್ಮಟ್ಟದಲ್ಲಿ ಇದ್ದರೆ ಅದನ್ನು ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಡಿಸೆಂಬರ್ನಲ್ಲಿಯೂ ಸಕಾರಾತ್ಮಕ ಮಟ್ಟದಲ್ಲಿಯೇ ಇದೆಯಾದರೂ ಮಾರಾಟದ ಬೆಳವಣಿಗೆಯು ಮೂರು ತಿಂಗಳ ಕನಿಷ್ಠ ಮಟ್ಟದ್ದಾಗಿದೆ ಎಂದು ಐಎಚ್ಎಸ್ ಮರ್ಕಿಟ್ ತಿಳಿಸಿದೆ.
ಕೋವಿಡ್–19 ಸಾಂಕ್ರಾಮಿಕದಿಂದಾಗಿ ಜಾಗತಿಕ ಮಟ್ಟದಲ್ಲಿ ಪ್ರಯಾಣ ನಿರ್ಬಂಧ ಇರುವುದರಿಂದ ಭಾರತದ ಸೇವೆಗಳಿಗೆ ಅಂತರರಾಷ್ಟ್ರೀಯವಾಗಿ ಬೇಡಿಕೆ ಸೀಮಿತವಾಗಿದೆ. ಸೇವೆಗಳ ಹೊಸ ರಫ್ತು ಗಣನೀಯ ಇಳಿಕೆ ಕಂಡಿದೆ. ನಗದು ಕೊರತೆಯಿಂದ ಹೊಸ ನೇಮಕಾತಿ ಆಗುತ್ತಿಲ್ಲ. ಕಾರ್ಮಿಕರ ಕೊರತೆ ಮತ್ತು ಮಂದಗತಿಯ ಬೇಡಿಕೆಯಿಂದಾಗಿ ವಹಿವಾಟು ನಡೆಸುವ ಆಶಾವಾದವು ತಗ್ಗಿದೆ.
ಕೋವಿಡ್–19 ಪರಿಣಾಮದಿಂದ ಸೇವಾ ವಲಯದ ಕೆಲವು ಕಂಪನಿಗಳು ಹಣಕಾಸು ಬಿಕ್ಕಟ್ಟು ಎದುರಿಸುತ್ತಿವೆ. ಹೀಗಾಗಿ ಸಿಬ್ಬಂದಿ ನೇಮಕವನ್ನು ತಡೆಹಿಡಿದಿವೆ ಎಂದು ಐಎಚ್ಎಸ್ ಮರ್ಕಿಟ್ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕ ಪಾಲಿಯಾನ ಡಿ. ಲಿಮಾ ತಿಳಿಸಿದ್ದಾರೆ.
ತಯಾರಿಕೆ ಮತ್ತು ಸೇವೆಗಳ ಒಟ್ಟಾರೆ ಪ್ರಗತಿಯನ್ನು ಸೂಚಿಸುವ ಕಂಪೋಸಿಟ್ ಪಿಎಂಐ ಔಟ್ಪುಟ್ ಇಂಡೆಕ್ಸ್ ನವೆಂಬರ್ನಲ್ಲಿ 56.3ರಷ್ಟು ಇತ್ತು. ಡಿಸೆಂಬರ್ನಲ್ಲಿ 54.9ಕ್ಕೆ ಇಳಿಕೆ ಕಂಡಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.