ಶುಕ್ರವಾರ, ಜನವರಿ 21, 2022
30 °C

ದಾವೋಸ್‌ ಭೇಟಿ ಫಲಪ್ರದ, ರಾಜ್ಯಕ್ಕೆ ಬರಲಿದೆ ಬಂಡವಾಳ: ಸಿಎಂ ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪರಿಣಾಮ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಸಾವಿರಾರು ಕೋಟಿ ಬಂಡವಾಳ ಹರಿದು ಬರಲಿದ್ದು, ಉದ್ಯಮಗಳ ಸ್ಥಾಪನೆಯ ಜತೆಗೆ ಅಧಿಕ ಪ್ರಮಾಣದಲ್ಲಿ ಉದ್ಯೋಗವೂ ಸೃಷ್ಟಿ ಆಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

‘ನಿಖರವಾಗಿ ಎಷ್ಟು ಬಂಡವಾಳ ಬರಬಹುದು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ನವೆಂಬರ್‌ನಲ್ಲಿ ನಡೆಯುವ ವಿಶ್ವ ಹೂಡಿಕೆದಾರರ ಸಮ್ಮೇಳನದಲ್ಲಿ ಅದರ ಮಾಹಿತಿ ಸಿಗುತ್ತದೆ’ ಎಂದು ಅವರು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಜಗತ್ತಿನ ದೊಡ್ಡ ಉದ್ಯಮಿಗಳಾದ ಲಕ್ಷ್ಮೀ ಮಿತ್ತಲ್, ಅರವಿಂದ ಕಿರ್ಲೋಸ್ಕರ್‌, 2000 ವ್ಯಾಟ್‌, ಜನರಲ್‌ ಎಲೆಕ್ಟ್ರಿಕಲ್ಸ್‌, ಡಾಸೋ, ಸಿಸ್ಟಮ್‌, ಲಾಕ್ಹೀಡ್‌ ಮಾರ್ಟೀನ್‌, ಲೂಲು ಗ್ರೂಪ್‌, ದಾಲ್ಮಿಯಾ, ನೋವಾ ನಾಸ್ಡಿಕ್‌, ವೋಲ್ವೊ ಸೇರಿ 40 ಕ್ಕೂ ಹೆಚ್ಚು ಉದ್ಯಮಿಗಳು ಭೇಟಿಯಾದರು. ಇವರಲ್ಲಿ ಬಹುತೇಕರು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದಾರೆ ಎಂದರು.

ಹಲವು ಕಾರಣಗಳಿಂದ ಅಲ್ಲಿಗೆ ಹೋಗಲು ಆರಂಭದಲ್ಲಿ ಹಿಂಜರಿಕೆ ಇತ್ತು. ಅದರಲ್ಲಿ ಭಾಗವಹಿಸಿದ್ದು ಸರಿಯಾದ ತೀರ್ಮಾನವೇ ಆಗಿದೆ. ಅಲ್ಲಿಗೆ ಹೋಗದೇ ಇದ್ದರೆ, ರಾಜ್ಯಕ್ಕೆ ನಷ್ಟ ಆಗುತ್ತಿತ್ತು. ಮುಂದಿನ ದಿನಗಳಲ್ಲಿ ಯುವಕರಿಗೆ, ರೈತರಿಗೆ ಲಾಭವಾಗುವಂತೆ ವಾತಾವರಣ ನಿರ್ಮಿಸುವಲ್ಲಿ ದಾವೋಸ್‌ ಪ್ರಯಣ ಯಶಸ್ವಿಯಾಗಿದೆ ಎಂದರು.

‘ಮುಂದಿನ ಮೂರು ವರ್ಷಗಳಲ್ಲಿ ರಾಜ್ಯವು ಔದ್ಯೋಗಿಕ ಬೆಳವಣಿಗೆಯಲ್ಲಿ ದೇಶದಲ್ಲಿಯೇ ಅಗ್ರಸ್ಥಾನದಲ್ಲಿರುವಂತೆ ಮಾಡುತ್ತೇನೆ. ಯುವಕರಿಗೆ ಉದ್ಯೋಗ ಮತ್ತು ಕೈಗಾರಿಕೀಕರಣದಿಂದ ರೈತರಿಗೂ ಲಾಭವಾಗುತ್ತದೆ’ ಎಂದು ಹೇಳಿದರು.

ಬಂಡವಾಳ ಹೂಡಿಕೆ ಸಾಧ್ಯತೆ

ಲುಲೂ ಕಂಪನಿಯಿಂದ ₹2,000 ಕೋಟಿ ಬಂಡವಾಳ ಹೂಡಿಕೆ. ತರಕಾರಿ, ಹಣ್ಣು, ಹೂವು ಮತ್ತು ಇತರ ಕೃಷಿ ಉತ್ಪನ್ನಗಳನ್ನು ಗ್ರಾಮೀಣ ಭಾಗದಿಂದ ನಗರಗಳಿಗೆ ಸಾಗಾಣಿಕೆ ಜಾಲ ನಿರ್ಮಾಣ

ಲಕ್ಷ್ಮೀಮಿತ್ತಲ್‌ ಅವರಿಂದ ಸೌರ ವಿದ್ಯುತ್‌ ಸ್ಥಾವರ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆ ಭರವಸೆ

ಬಾಬಾ ಕಲ್ಯಾಣಿ ಗ್ರೂಪ್‌ನಿಂದ ಕೋಲಾರ ಸಮೀಪದಲ್ಲಿ ಬಾಹ್ಯಾಕಾಶ ಉತ್ಪನ್ನಗಳ ಉತ್ಪಾದನಾ ಉದ್ಯಮ

ಜನರಲ್‌ ಎಲೆಕ್ಟ್ರಿಕಲ್ಸ್‌ನಿಂದಲೂ ಎಲೆಕ್ಟ್ರಿಕಲ್ಸ್‌ ಉತ್ಪನ್ನಗಳ ತಯಾರಿಕೆಗೆ ಹೂಡಿಕೆಗೆ ಒಪ್ಪಿಗೆ

ಸೆಂಟರ್‌ ಫಾರ್‌ ಇಂಟರ್‌ನೆಟ್‌ ಆಫ್‌ ಎಥಿಕಲ್ ಥಿಂಗ್ಸ್‌ ಒಪ್ಪಂದಕ್ಕೆ ಡಬ್ಲ್ಯೂಇಎಫ್‌ ವ್ಯವಸ್ಥಾಪಕ ನಿರ್ದೇಶಕ ಮುರತ್‌ ಸೊನಮೇಜು ಅವರಿಂದ ಸಹಿ

l ಬಹರೇನ್‌ನ ಎಕನಾಮಿಕ್‌ ಡೆವಲಪ್‌ಮೆಂಟ್‌ ಬೋರ್ಡ್‌ನೊಂದಿಗೆ ಫಿನ್‌ ಟೆಕ್‌, ಕೃತಕ ಬುದ್ಧಿಮತ್ತೆ ಮತ್ತು ಸೈಬರ್‌ ಸೆಕ್ಯುರಿಟಿ ವಿಷಯಗಳಲ್ಲಿ ಸಹಯೋಗ ಮತ್ತು ಸಹಕಾರ ಕುರಿತ ಒಪ್ಪಂದಕ್ಕೆ ಸಹಿ

ನೋವೋ ನೊಸ್ಡೆಕ್‌ ರಾಜ್ಯ ಮಧುಮೇಹಿ ರೋಗಿಗಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ನಿರ್ವಹಿಸಲು ಒಪ್ಪಿದ್ದಾರೆ. ಸಾವಿರಾರು ಮಧುಮೇಹಿ
ಗಳಿಗೆ ರೋಗ ನಿರ್ವಹಣೆ ಜತೆಗೆ ಕಡಿಮೆ ದರದಲ್ಲಿ ಔಷಧ ವಿತರಿಸಲಿದೆ

ಸಿಇಒ ತಂಡ ಭೇಟಿ: ಶೆಟ್ಟರ್

ಹುಬ್ಬಳ್ಳಿ: ‘ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ವಿವಿಧ ಕಂಪನಿಗಳ ಕಾರ್ಯನಿರ್ವಾಹಕ ಅಧಿಕಾರಿಗಳ (ಸಿಇಒ) ತಂಡ ರಾಜ್ಯಕ್ಕೆ ಶೀಘ್ರದಲ್ಲೇ ಭೇಟಿ ನೀಡಿ, ಸರ್ಕಾರದೊಂದಿಗೆ ಚರ್ಚೆ ನಡೆಸಲಿದೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಪ್ರಿಯದರ್ಶಿನಿ ಕಾಲೊನಿಯಲ್ಲಿ ಶನಿವಾರ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ನಾನು, ಉದ್ಯಮಿಗಳೊಂದಿಗೆ ವೈಯಕ್ತಿಕವಾಗಿ ಚರ್ಚಿಸಿದ್ದೇವೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಒಲವು ತೋರಿದ್ದಾರೆ’ ಎಂದರು.

‘ಉತ್ತರ ಕರ್ನಾಟಕದಲ್ಲಿ ಹೂಡಿಕೆ ಮಾಡುವವರಿಗೆ ವಿಶೇಷ ಸೌಲಭ್ಯ ನೀಡುವ ಬಗ್ಗೆಯೂ ಉದ್ಯಮಿಗಳ ಗಮನಕ್ಕೆ ತಂದಿದ್ದೇವೆ. ಭೂಮಿ ಮಂಜೂರಾತಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸುವಂತೆ ಉದ್ಯಮಿಗಳು ಮನವಿ ಮಾಡಿದ್ದಾರೆ’ ಎಂದು ಹೇಳಿದರು.

***

ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ವಿವಿಧ ಕಂಪನಿಗಳ ಕಾರ್ಯನಿರ್ವಾಹಕ ಅಧಿಕಾರಿಗಳ (ಸಿಇಒ) ತಂಡ ರಾಜ್ಯಕ್ಕೆ ಶೀಘ್ರದಲ್ಲೇ ಭೇಟಿ ನೀಡಲಿದೆ

- ಜಗದೀಶ ಶೆಟ್ಟರ್, ಕೈಗಾರಿಕಾ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು