ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 16ರಷ್ಟು ಕುಸಿದ ಇನ್ಫೊಸಿಸ್‌ ಷೇರು ಬೆಲೆ; ಕಳೆದ 6 ವರ್ಷಗಳಲ್ಲೇ ಅತ್ಯಧಿಕ ನಷ್ಟ

ನೀತಿಬಾಹಿರ ವಿಧಾನ ಆರೋಪ‍
Last Updated 22 ಅಕ್ಟೋಬರ್ 2019, 6:43 IST
ಅಕ್ಷರ ಗಾತ್ರ

ನವದೆಹಲಿ: ಅಲ್ಪಾವಧಿ ವರಮಾನ ಮತ್ತು ಲಾಭ ಗಳಿಕೆಗಾಗಿ ಇನ್ಫೊಸಿಸ್‌ ಸಂಸ್ಥೆಯ ಉನ್ನತಾಧಿಕಾರಿಗಳು ನೀತಿ ಬಾಹಿರ ವಿಧಾನಗಳನ್ನು ಅನುಸರಿಸಿರುವ ಬಗ್ಗೆ 'ನೈತಿಕ ಉದ್ಯೋಗಿಗಳ' ಗುಂಪು ದೂರು ನೀಡಿತ್ತು. ಸೋಮವಾರ ಈ ವಿಚಾರ ಬಹಿರಂಗವಾಗಿರುವ ಬೆನ್ನಲೇ ದೇಶೀಯ ಷೇರುಪೇಟೆಯಲ್ಲಿ ಇನ್ಫೊಸಿಸ್‌ ಷೇರುಗಳು ಮಂಗಳವಾರ ಶೇ 16ರಷ್ಟು ಕುಸಿದಿವೆ.

ಮುಂಬೈ ಷೇರುಪೇಟೆ(ಬಿಎಸ್‌ಇ)ಯಲ್ಲಿ ಪ್ರತಿ ಷೇರು ಬೆಲೆ ₹645.35 ಮತ್ತು ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ)ಯಲ್ಲಿ ₹645ಕ್ಕೆ ಇಳಿಕೆಯಾಗಿದೆ.

'ನೈತಿಕ ಉದ್ಯೋಗಿಗಳ' ಗುಂಪು ನೀಡಿರುವ ದೂರನ್ನು ಲೆಕ್ಕಪತ್ರ ಸಮಿತಿಯ ಮುಂದೆ ಇಡಲಾಗಿದ್ದು, ಸಮಿತಿಯು ಪರಿಶೀಲನೆ ನಡೆಸಲಿದೆ ಎಂದುಇನ್ಫೊಸಿಸ್‌ಸೋಮವಾರ ಪ್ರಕಟಣೆಯಲ್ಲಿ ತಿಳಿಸಿತ್ತು. ದೂರು ಸಲ್ಲಿಕೆಯಾಗಿರುವ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಸೋಮವಾರ ಅಮೆರಿಕ ಷೇರುಪೇಟೆಯಲ್ಲಿ ಇನ್ಫೊಸಿಸ್‌ ಷೇರು ಬೆಲೆ ಶೇ 15.7ರಷ್ಟು ಕುಸಿದಿತ್ತು.

ಕಳೆದ 6 ವರ್ಷಗಳಲ್ಲಿ ಇದೇ ಮೊದಲ ಬಾರಿಗೆಇನ್ಫೊಸಿಸ್‌ ಷೇರು ಬೆಲೆ ಅತ್ಯಧಿಕ ಕುಸಿತ ಕಂಡಿದೆ. ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ₹42,000 ಕೋಟಿಗೂ ಹೆಚ್ಚು ನಷ್ಟವಾಗಿದೆ. 2019ರಲ್ಲಿ ಸಂಸ್ಥೆ ಗಳಿಸಿದ್ದ ಎಲ್ಲವನ್ನೂ ಒಂದೇ ದಿನದ ವಹಿವಾಟಿನಲ್ಲಿಕಳೆದುಕೊಂಡಂತಾಗಿದೆ.ಇನ್ಫೊಸಿಸ್‌, ದ್ವಿತೀಯ (ಜುಲೈ–ಸೆಪ್ಟೆಂಬರ್‌) ತ್ರೈಮಾಸಿಕದಲ್ಲಿ ₹ 4,019 ಕೋಟಿ ನಿವ್ವಳ ಲಾಭ ಗಳಿಸಿತ್ತು.

ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಹಿನ್ನೆಲೆ ಸೋಮವಾರ ದೇಶೀಯ ಷೇರುಪೇಟೆಗೆ ಬಿಡುವು ನೀಡಲಾಗಿತ್ತು. ಮಂಗಳವಾರ ವಹಿವಾಟು ಆರಂಭಗೊಳ್ಳುತ್ತಿದ್ದಂತೆ ಷೇರು ಬೆಲೆ ₹691ರಿಂದ ಒಮ್ಮೆಗೆ ₹650ಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿಯಿತು.

ಕಂಪನಿಯ ಸಿಇಒ ಸಲಿಲ್‌ ಪಾರೇಖ್‌ ಮತ್ತು ಸಿಎಫ್‌ಒ ನಿಲಂಜನ್‌ ರಾಯ್‌ ಅವರು ನ್ಯಾಯಬಾಹಿರ ವಿಧಾನಗಳ ಮೂಲಕ ವರಮಾನ ಹೆಚ್ಚಿಸಿಕೊಳ್ಳುವ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ನೈತಿಕ ಉದ್ಯೋಗಿಗಳ ಗುಂಪು ನಿರ್ದೇಶಕ ಮಂಡಳಿಗೆ ಪತ್ರ ಬರೆದಿದೆ.

ದೂರಿನ ಕುರಿತು ಲೆಕ್ಕಪತ್ರ ಸಮಿತಿಯು ಸ್ವತಂತ್ರ ತನಿಖೆ ಕೈಗೊಳ್ಳಲಿದೆ ಎಂದು ಇನ್ಫೊಸಿಸ್‌ ಅಧ್ಯಕ್ಷ ನಂದನ್‌ ನಿಲೇಕಣಿ ಮಂಗಳವಾರ ತಿಳಿಸಿದ್ದಾರೆ. ಆಂತರಿಕ ಲೆಕ್ಕಪತ್ರ ಪರಿಶೀಲನೆಯನ್ನು ಅರ್ನ್ಸ್ಟ್ ಆ್ಯಂಡ್‌ ಯಂಗ್‌(ಇವೈ), ಶಾರ್ದುಲ್‌ ಅಮರ್‌ಚಂದ್‌ ಮಂಗಲದಾಸ್‌ ಆ್ಯಂಡ್‌ ಕೋ. ಸ್ವತಂತ್ರ ತನಿಖೆ ನಡೆಸುವುದಾಗಿ ನಿಲೇಕಣಿ ಷೇರುಪೇಟೆಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT