ನವದೆಹಲಿ: ವಿಮೆ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಗಳನ್ನು 2024ರ ಜನವರಿ 1ರಿಂದ ಗ್ರಾಹಕರಿಗೆ ನೀಡಬೇಕು ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಎಲ್ಲ ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ.
ವಿಮಾ ಯೋಜನೆಯ ಕುರಿತು ಗ್ರಾಹಕರಿಗೆ ನೀಡಲು ಸದ್ಯ ಇರುವ ಮಾಹಿತಿ ಪುಟದಲ್ಲಿ ಪರಿಷ್ಕರಣೆ ಮಾಡಲಾಗಿದೆ. ಅದರಲ್ಲಿ ಸಮ್ ಅಶೂರ್ಡ್, ಕ್ಲೇಮ್ ಪ್ರಕ್ರಿಯೆ, ಯೋಜನೆಯು ಏನನ್ನು ಒಳಗೊಳ್ಳಲಿದೆ ಮತ್ತು ಒಳಗೊಳ್ಳುವುದಿಲ್ಲ ಎನ್ನುವ ಮಾಹಿತಿಗಳನ್ನು ಅದರಲ್ಲಿ ನೀಡಬೇಕು ಎಂದು ಸುತ್ತೋಲೆಯಲ್ಲಿ ಪ್ರಾಧಿಕಾರವು ತಿಳಿಸಿದೆ.
ತಾವು ಖರೀದಿಸುವ ವಿಮಾ ಯೋಜನೆಯ ಷರತ್ತುಗಳ ಬಗ್ಗೆ ಗ್ರಾಹಕರು ತಿಳಿದುಕೊಂಡಿರುವುದು ಬಹಳ ಮುಖ್ಯ. ಗ್ರಾಹಕರಿಗೆ ಅರ್ಥ ಆಗುವಂತೆ ಸರಳವಾದ ಪದಗಳಲ್ಲಿ ಯೋಜನೆಗೆ ಸಂಬಂಧಿಸಿದ ವಿವರಗಳನ್ನು ಕಂಪನಿಗಳು ನೀಡುವುದು ಅಗತ್ಯವಾಗಿದೆ ಎಂದು ಪ್ರಾಧಿಕಾರವು ಹೇಳಿದೆ.
ಮಾಹಿತಿಯ ಕೊರತೆಯ ಬಗ್ಗೆ ಹಲವು ದೂರುಗಳು ಬರುತ್ತಿವೆ. ಹೀಗಾಗಿ ಈ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದೆ. ಈ ಪರಿಷ್ಕೃತ ಮಾಹಿತಿಯನ್ನು ಮಧ್ಯವರ್ತಿಗಳು ಮತ್ತು ಏಜೆಂಟ್‌ಗಳು ಎಲ್ಲ ವಿಮಾದಾರರಿಗೆ ವಿತರಿಸಿ ಅವರಿಂದ ಒಪ್ಪಿಗೆ ಪಡೆದುಕೊಳ್ಳಬೇಕು. ಪಾಲಿಸಿದಾರರು ಬಯಸಿದರೆ ಸ್ಥಳೀಯ ಭಾಷೆಯಲ್ಲಿಯೂ ಮಾಹಿತಿ ಲಭ್ಯವಾಗುವಂತೆ ಮಾಡಬೇಕು ಎಂದೂ ಸೂಚನೆ ನೀಡಿದೆ.