ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಬೆಳೆಸಲು ಅರಿತು ಹೂಡಿಕೆ ಮಾಡಿ

Last Updated 30 ನವೆಂಬರ್ 2020, 18:30 IST
ಅಕ್ಷರ ಗಾತ್ರ

ಒಳ್ಳೆಯ ಜೀವನ ನಿರ್ವಹಣೆಗೆ, ಕನಸು-ಗುರಿಗಳ ಸಾಕಾರಕ್ಕೆ ಹಣಕಾಸು ನಿರ್ವಹಣೆ ಸರಿಯಾಗಿರುವುದು ಬಹಳ ಮುಖ್ಯ. ಆದರೆ, ದುಡ್ಡು ಕಾಸಿನ ವಿಚಾರ ಎಂದಾಕ್ಷಣ ಅದರ ಸಹವಾಸವೇ ಬೇಡ ಎನ್ನುವವರಿದ್ದಾರೆ. ಅವರು ಹೀಗೆ ಆಲೋಚನೆ ಮಾಡಲು ಕಾರಣಗಳೂ ಇವೆ. ಅಂಗನವಾಡಿ ಹಂತದಿಂದ ಸ್ನಾತಕೋತ್ತರ ಪದವಿವರೆಗೂ ನಮ್ಮ ಶಿಕ್ಷಣ ವ್ಯವಸ್ಥೆಯು ವೈಯಕ್ತಿಕ ಹಣಕಾಸು ನಿರ್ವಹಣೆಯನ್ನು ಕಲಿಸುವುದಿಲ್ಲ. ಅದಿರಲಿ, ಹೂಡಿಕೆಯನ್ನು ಹೇಗೆ ಆರಂಭಿಸಬೇಕು? ಹೂಡಿಕೆಗೂ ಮುನ್ನ ಪರಿಗಣಿಸಬೇಕಾದ ಅಂಶಗಳೇನು? ಹೂಡಿಕೆಗಿರುವ ಆಯ್ಕೆಗಳೇನು? ಈ ಬಗ್ಗೆ ಒಂದು ಕಿರುನೋಟ ಹರಿಸೋಣ.

ಹೂಡಿಕೆಗೂ ಮುನ್ನ ಪರಿಗಣಿಸಬೇಕಾದ ಅಂಶಗಳು

ಹೂಡಿಕೆ ಗುರಿ: ಹೂಡಿಕೆಯ ಗುರಿ ಪ್ರತಿ ವ್ಯಕ್ತಿಗೂ ಭಿನ್ನ. ಯಾವ ಉದ್ದೇಶಕ್ಕೆ ನೀವು ಹೂಡಿಕೆ ಮಾಡುತ್ತಿದ್ದೀರಿ ಎಂಬುದನ್ನು ಅರಿಯುವುದು ಬಹಳ ಮುಖ್ಯ. ಮಕ್ಕಳ ಉನ್ನತ ಶಿಕ್ಷಣಕ್ಕೆ, ಮಕ್ಕಳ ಮದುವೆ ಖರ್ಚಿಗೆ, ಮನೆ ಖರೀದಿಗೆ, ವಿದೇಶ ಪ್ರವಾಸಕ್ಕೆ, ಬಿಸಿನೆಸ್ ಶುರು ಮಾಡಲು... ಹೀಗೆ ಯಾವ ಉದ್ದೇಶಕ್ಕೆ ನೀವು ಹೂಡಿಕೆ ಮಾಡುತ್ತಿದ್ದೀರಿ ಎನ್ನುವುದು ಬಹಳ ಮುಖ್ಯ. ಹೂಡಿಕೆಯ ಗುರಿಯೇ ನಿಮ್ಮ ಹೂಡಿಕೆಯ ಮಾರ್ಗ ಯಾವುದು ಎಂಬುದನ್ನು ನಿರ್ಧರಿಸುತ್ತದೆ.

ಹೂಡಿಕೆ ಅವಧಿ: ಹೂಡಿಕೆ ಮಾಡುವ ಮುನ್ನ, ಎಷ್ಟು ಅವಧಿಗೆ ಹೂಡಿಕೆ ಮಾಡಬೇಕು ಎನ್ನುವುದನ್ನು ಅರಿತುಕೊಳ್ಳುವುದು ಕೂಡ ಮುಖ್ಯ. ಇದು ಅರ್ಥವಾದಾಗ ಮಾತ್ರ ಯಾವ ರೀತಿಯ ಹೂಡಿಕೆಯಲ್ಲಿ ನಾವು ಹಣ ತೊಡಗಿಸಬೇಕು ಎಂಬುದು ತಿಳಿಯುತ್ತದೆ. ಉದಾಹರಣೆಗೆ, ಒಂದು ವರ್ಷದ ಬಳಿಕ ಮಕ್ಕಳ ಶಾಲಾ ಶುಲ್ಕ ಪಾವತಿಸಬೇಕು ಎಂದಾದರೆ, ಎಫ್.ಡಿ. (ಫಿಕ್ಸೆಡ್ ಡೆಪಾಸಿಟ್), ಆರ್.ಡಿ. (ರೆಕರಿಂಗ್ ಡೆಪಾಸಿಟ್) ಅಥವಾ ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸುವುದು ಸೂಕ್ತ. ಆದರೆ 5– 10 ವರ್ಷಗಳ ಬಳಿಕ ನಿಮಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ದೊಡ್ಡ ಮೊತ್ತದ ಹಣ ಬೇಕು ಎಂದಾದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಬಹುದು.

ಹಣದುಬ್ಬರ ಪ್ರಮಾಣ: ಅಕ್ಕಿ, ಬೇಳೆ, ಎಣ್ಣೆ–ಕಾಳು, ತರಕಾರಿ, ತೈಲ ಹೀಗೆ ಎಲ್ಲವುಗಳ ಬೆಲೆಯೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇರುತ್ತದೆ. ನೀವು ಮಾಡುವ ಹೂಡಿಕೆಗೆ ಹಣದುಬ್ಬರದ ಪ್ರಮಾಣವನ್ನು ಮೀರಿ ನಿಲ್ಲುವ ಶಕ್ತಿ ಇರಬೇಕು. ಗಳಿಸಿದ ಹಣವನ್ನೆಲ್ಲಾ ಉಳಿತಾಯ ಖಾತೆಯಲ್ಲಿ ಇಟ್ಟುಕೊಂಡರೆ ಹಣದುಬ್ಬರ ಎದುರಿಸಲು ಆಗುವುದಿಲ್ಲ. ಉಳಿತಾಯ ಖಾತೆಯಲ್ಲಿ ಇರಿಸುವ ಹಣಕ್ಕೆ ವಾರ್ಷಿಕ ಶೇಕಡ 3ರಿಂದ 4ರಷ್ಟು ಮಾತ್ರ
ಬಡ್ಡಿ ಸಿಗುತ್ತದೆ. ಈ ವಿಚಾರವನ್ನು ಅರ್ಥೈಸಿಕೊಂಡು ಸರಿಯಾದ ಹೂಡಿಕೆ ಆಯ್ಕೆ ಮಾಡಬೇಕು.

ನಿವೃತ್ತಿ ಯೋಜನೆ: ಹೂಡಿಕೆ ಮಾಡುವಾಗ ನಿವೃತ್ತಿ ಯೋಜನೆ ಕಡೆಗಣಿಸಬೇಡಿ. ವಯಸ್ಸಾದಂತೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ನಿವೃತ್ತಿ ನಂತರ ಮಾಸಿಕ ಸಂಬಳವೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಖರ್ಚು ಹೆಚ್ಚಿಗೆ ಇರುತ್ತದೆ. ಬಹಳ ಮಂದಿ ನಿವೃತ್ತಿಯಾದ ನಂತರದಲ್ಲಿ ನಿವೃತ್ತಿ ಯೋಜನೆ ರೂಪಿಸುತ್ತಾರೆ. ಇನ್ನು ಕೆಲವರು ತಮ್ಮ ಮಕ್ಕಳೇ ತಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಭಾವಿಸುತ್ತಾರೆ. ಆದರೆ, ಇವೆರಡೂ ಸರಿಯಾದ ನಿಲುವುಗಳಲ್ಲ. ಜೀವನಪೂರ್ತಿ ದುಡಿಯುವವರು ನಿವೃತ್ತಿ ನಂತರ ನೆಮ್ಮದಿಯಿಂದ ಇರಬೇಕಾದರೆ ಅದಕ್ಕೆ ಸೂಕ್ತ ಹೂಡಿಕೆ ಬಹಳ ಮುಖ್ಯ.

ಹೂಡಿಕೆಗಿರುವ 6 ಪ್ರಮುಖ ಆಯ್ಕೆಗಳು

ನಗದು: ಇದನ್ನು ನಿಮ್ಮ ಕೈಯಲ್ಲಿರುವ ಹಣ ಅಥವಾ ಉಳಿತಾಯ ಖಾತೆಯಲ್ಲಿರುವ ಹಣ ಎಂದು ಪರಿಗಣಿಸಬಹುದು. ಇಲ್ಲಿ ರಿಸ್ಕ್ ಹೆಚ್ಚಿಗೆ ಇರುವುದಿಲ್ಲ. ಶೇಕಡ 3ರಿಂದ ಶೇ 4ರವರೆಗೆ ಬಡ್ಡಿ ಸಿಗುತ್ತದೆ. ತಿಂಗಳ ಖರ್ಚಿಗೆ ಮತ್ತು ತುರ್ತು ಅಗತ್ಯಗಳಿಗೆ ಬೇಕಾದ ಒಂದಷ್ಟು ಹಣವನ್ನು ಮಾತ್ರ ಇಲ್ಲಿ ಇಟ್ಟರೆ ಸಾಕು.

ಡೆಟ್: ಫಿಕ್ಸೆಡ್ ಡೆಪಾಸಿಟ್ (ಎಫ್.ಡಿ), ರೆಕರಿಂಗ್ ಡೆಪಾಸಿಟ್ (ಆರ್.ಡಿ), ಬಾಂಡ್‌ಗಳು, ಡಿಬೆಂಚರ್ಸ್ ಹೂಡಿಕೆಯನ್ನು ಡೆಟ್ ಹೂಡಿಕೆ ಎನ್ನಲಾಗುತ್ತದೆ. ಡೆಟ್ ಹೂಡಿಕೆಗಳಲ್ಲಿ ರಿಸ್ಕ್ ಕಡಿಮೆ ಇರುತ್ತದೆ. ಅಲ್ಪಾವಧಿ ಹೂಡಿಕೆ ಗುರಿಗಳಿಗೆ ಮತ್ತು 3ರಿಂದ 6 ತಿಂಗಳ ತುರ್ತು ನಿಧಿ ಉದ್ದೇಶಕ್ಕೆ ಡೆಟ್ ಹೂಡಿಕೆಗಳು ಸೂಕ್ತ.

ಗವರ್ನಮೆಂಟ್ ಸೆಕ್ಯೂರಿಟಿಸ್: ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್‌ಸಿ), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಖಾತೆ ಮುಂತಾದ ಸರ್ಕಾರಿ ಹೂಡಿಕೆ ಯೋಜನೆಗಳನ್ನು ಗವರ್ನಮೆಂಟ್ ಸೆಕ್ಯೂರಿಟಿಸ್ ಎನ್ನಲಾಗುತ್ತದೆ. ಇಲ್ಲಿ ರಿಸ್ಕ್ ತೀರಾ ಕಡಿಮೆ.

ಈಕ್ವಿಟಿ ಹೂಡಿಕೆ (ಷೇರು, ಮ್ಯೂಚುವಲ್ ಫಂಡ್): ಈಕ್ವಿಟಿ ಹೂಡಿಕೆಯಲ್ಲಿ ಎರಡು ಆಯ್ಕೆಗಳಿವೆ. ಒಂದನೆಯದ್ದು ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದು. ಮತ್ತೊಂದು, ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆ ಮಾಡುವುದು. ಷೇರು ಮಾರುಕಟ್ಟೆ ಬಗ್ಗೆ ಸರಿಯಾದ ಅರಿವಿದೆ, ಷೇರುಗಳನ್ನು ಖರೀದಿಸಿ ನಿರ್ವಹಿಸಲು ಬರುತ್ತದೆ ಎನ್ನುವವರು ನೇರವಾಗಿ ಷೇರುಗಳಲ್ಲಿ ಹಣ ತೊಡಗಿಸಬಹುದು. ಷೇರು ಮಾರುಕಟ್ಟೆ ಬಗ್ಗೆ ಅಷ್ಟಾಗಿ ತಿಳಿದಿಲ್ಲ ಎಂದಾದರೆ ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ ಮಾಡಬಹುದು. ಈಕ್ವಿಟಿ ಹೂಡಿಕೆಗೆ ಹಣದುಬ್ಬರದ ಪ್ರಮಾಣವನ್ನು ಮೀರಿ ಹೂಡಿಕೆದಾರನಿಗೆ ಲಾಭ ತಂದುಕೊಡುವ ಶಕ್ತಿ ಇದೆ. ಆದರೆ ಈ ಹೂಡಿಕೆಯಲ್ಲಿ ರಿಸ್ಕ್ ಪ್ರಮಾಣವೂ ಅಷ್ಟೇ ಇದೆ.

ರಿಯಲ್ ಎಸ್ಟೇಟ್: ಸೈಟ್ ಖರೀದಿ, ಮನೆ/ಫ್ಲ್ಯಾಟ್ ಖರೀದಿ, ವಾಣಿಜ್ಯ ಕಟ್ಟಡ ಖರೀದಿ ಇತ್ಯಾದಿಯನ್ನು ರಿಯಲ್ ಎಸ್ಟೇಟ್ ಹೂಡಿಕೆ ಎನ್ನಬಹುದು. ಸರಿಯಾದ ಕಡೆ ಹೂಡಿಕೆ ಮಾಡಿದರೆ ರಿಯಲ್ ಎಸ್ಟೇಟ್‌ನಲ್ಲಿ ಹೆಚ್ಚು ಲಾಭ ಗಳಿಸಲು ಸಾಧ್ಯ. ಆದರೆ ರಿಯಲ್ ಎಸ್ಟೇಟ್ ಹೂಡಿಕೆಯನ್ನು ತಕ್ಷಣಕ್ಕೆ ನಗದಾಗಿಸಿಕೊಳ್ಳುವುದು ಕಷ್ಟ.

ಚಿನ್ನ: ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ರಿಯಲ್ ಎಸ್ಟೇಟ್ ಹೂಡಿಕೆಗೆ ಹೋಲಿಸಿದರೆ ಆಭರಣ ಚಿನ್ನದ ಮೇಲಿನ ಹೂಡಿಕೆ ಅಷ್ಟೇನೂ ಲಾಭದಾಯಕವಲ್ಲ. ಗೋಲ್ಡ್ ಇಟಿಎಫ್, ಸಾವರಿನ್ ಗೋಲ್ಡ್ ಬಾಂಡ್‌ಗಳಲ್ಲಿ ಹಣ ತೊಡಗಿಸಿದರೆ ಅನುಕೂಲ. ಒಟ್ಟಾರೆ ಹೂಡಿಕೆಯಲ್ಲಿ ಚಿನ್ನಕ್ಕೆ ಶೇ 10ರಿಂದ ಶೇ 15ರಷ್ಟು ಹಣ ಮೀಸಲಿಟ್ಟರೆ ಸಾಕು.

ಷೇರುಪೇಟೆಯಲ್ಲಿ ಹೂಡಿಕೆ ಯಾವಾಗ?

ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಷೇರು ಮಾರುಕಟ್ಟೆ ಹೂಡಿಕೆ ಆರಂಭಿಸುವುದು ಒಳಿತು. ಆದರೆ ಅರೆಬರೆ ಮಾಹಿತಿ ಪಡೆದು, ದಿಢೀರ್ ದುಡ್ಡು ಮಾಡುವ ಆಸೆಗೆ ಬಿದ್ದು ಯಾರದ್ದೋ ಮಾತು ಕೇಳಿ ಷೇರು ಹೂಡಿಕೆಯಲ್ಲಿ ತೊಡಗಬೇಡಿ. ಸರಿಯಾಗಿ ಅರಿತು, ಕಲಿತು ಹೂಡಿಕೆ ಆರಂಭಿಸಿ. ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ತಮ್ಮ 13ನೇ ವಯಸ್ಸಿನಲ್ಲೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆರಂಭಿಸಿದರು.

ಎಷ್ಟು ಹೂಡಿಕೆ ಮಾಡಬೇಕು?

ನಿಮ್ಮ ವಯಸ್ಸನ್ನು 100ರಿಂದ ಕಳೆದಾಗ ಯಾವ ಸಂಖ್ಯೆ ಬರುವುದೋ ಅಷ್ಟು ಪ್ರಮಾಣದಲ್ಲಿ ನೀವು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಬೇಕು ಎನ್ನುವ ಸೂತ್ರವೊಂದಿದೆ. ಉದಾಹರಣೆಗೆ, ನಿಮ್ಮ ವಯಸ್ಸು 30 ವರ್ಷ, ನೀವು ತಿಂಗಳಿಗೆ ₹ 10 ಸಾವಿರ ಉಳಿತಾಯ ಮಾಡುತ್ತಿದ್ದೀರಿ ಎಂದಾದಲ್ಲಿ, ಅದರಲ್ಲಿ ಶೇ 70ರಷ್ಟು ಹಣವನ್ನು (ಅಂದರೆ ₹ 7,000) ಷೇರು ಮಾರುಕಟ್ಟೆಯಲ್ಲಿ ತೊಡಗಿಸಬೇಕು. ವ್ಯಕ್ತಿಯ ಆರ್ಥಿಕ ಸ್ಥಿತಿಗತಿ, ಸಾಲದ ಬಾಕಿ, ಮನೆಯಲ್ಲಿನ ಹಿರಿಯರ ಆರೋಗ್ಯದ ಸ್ಥಿತಿಗತಿ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಲೆಕ್ಕಾಚಾರವನ್ನು ಅಂತಿಮಗೊಳಿಸಬೇಕಾಗುತ್ತದೆ. ವಯಸ್ಸು ಹೆಚ್ಚುತ್ತಾ ಹೋದಂತೆ ಷೇರು ಮಾರುಕಟ್ಟೆ ಹೂಡಿಕೆಯನ್ನು ತಗ್ಗಿಸಬೇಕಾಗುತ್ತದೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT