ಗುರುವಾರ , ಏಪ್ರಿಲ್ 15, 2021
24 °C

ಹೂಡಿಕೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ: ಸಚಿವ ಶೆಟ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಸಂಕಷ್ಟದ ನಡುವೆಯೂ ಹೂಡಿಕೆಯ ಆಕರ್ಷಣೆಯಲ್ಲಿ ರಾಜ್ಯವು ದೇಶದಲ್ಲೇ ಅಗ್ರ ಸ್ಥಾನದಲ್ಲಿದೆ. ₹ 1.54 ಲಕ್ಷ ಕೋಟಿ ಮೊತ್ತದ 95 ಹೂಡಿಕೆ ಪ್ರಸ್ತಾವಗಳು ನೋಂದಣಿ ಆಗಿರುವುದು ಇದಕ್ಕೆ ಸಾಕ್ಷಿ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

‘ಮುಕ್ತ ಅವಕಾಶದ ಮೂಲಕ ಕೈಗಾರಿಕೆಗಳಿಗೆ ಕಡಿಮೆ ದರದಲ್ಲಿ ವಿದ್ಯುತ್‌ ಪೂರೈಕೆ’ ಕುರಿತು ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಅಸೋಚಾಂ ವತಿಯಿಂದ ಮಂಗಳವಾರ ಆಯೋಜಿಸಿದ್ದ ವೆಬಿನಾರ್‌ ಉದ್ಘಾಟಿಸಿ ಮಾತನಾಡಿದ ಅವರು, ‘ಕೋವಿಡ್‌ ಸಾಂಕ್ರಾಮಿಕ ಎದುರಿಸುತ್ತಿರುವ ಅವಧಿಯಲ್ಲೇ ರಾಜ್ಯದಲ್ಲಿ ₹ 1,54,093 ಕೋಟಿ ಮೊತ್ತದ ಹೂಡಿಕೆ ಮಾಡಲು ಉದ್ಯಮಿಗಳು ಆಸಕ್ತಿ ತೋರಿದ್ದಾರೆ ಎಂಬುದನ್ನು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ತಿಳಿಸಿದೆ’ ಎಂದರು.

2019ರ ಆಗಸ್ಟ್‌ನಿಂದ 2020ರ ಡಿಸೆಂಬರ್‌ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ₹ 82,105 ಕೋಟಿ ಮೊತ್ತದ 410 ಹೂಡಿಕೆ ಪ್ರಸ್ತಾವಗಳಿಗೆ ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ಒಪ್ಪಿಗೆ ನೀಡಲಾಗಿದೆ. ಇದರಿಂದ 2.24 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ಇರುವುದರಿಂದಲೇ ಹೂಡಿಕೆದಾರರು ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕವು ವಿದ್ಯುತ್ ಸ್ವಾವಲಂಬಿ ರಾಜ್ಯವಾಗಿದೆ. ಕೈಗಾರಿಕೆಗಳ ವಿದ್ಯುತ್‌ ಬಳಕೆ ಮತ್ತು ವೆಚ್ಚದ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಕೈಗಾರಿಕೆಗಳಿಗೆ ನಿರಂತರ ವಿದ್ಯುತ್‌ ಪೂರೈಕೆ ಮಾಡುವುದಕ್ಕಾಗಿ ವಿದ್ಯುತ್‌ ಪೂರೈಕೆ ಜಾಲದ ಬಳಿ ಬ್ಯಾಟರಿ ಆಧಾರಿತ ಸಂಗ್ರಹಣಾ ಘಟಕ ಸ್ಥಾಪಿಸುವ ಚಿಂತನೆ ನಡೆದಿದೆ. ಈ ಯೋಜನೆ ಕಾರ್ಯಗತವಾದರೆ ಕೈಗಾರಿಕೆಗಳು ವಿದ್ಯುತ್‌ ಕೊರತೆಯ ಸಮಸ್ಯೆಯಿಂದ ಹೊರಬರಲಿವೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು