ನವದೆಹಲಿ: ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹272 ಕೋಟಿ ನಷ್ಟ ಅನುಭವಿಸಿದೆ.
ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆಗೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಮಾರಾಟ ಮಾಡಿದ್ದರಿಂದ ಈ ನಷ್ಟ ಉಂಟಾಗಿದೆ ಎಂದು ಕಂಪನಿಯು ತಿಳಿಸಿದೆ.
2021ರ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹6,360 ಕೋಟಿ ಲಾಭ ಗಳಿಸಿತ್ತು ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
ಗೃಹ ಬಳಕೆಯ ಎಲ್‌ಪಿಜಿಯನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ಮಾರಾಟ ಮಾಡಿದ್ದರಿಂದ ಆಗಿರುವ ನಷ್ಟ ಭರ್ತಿಗೆ ಕೇಂದ್ರ ಸರ್ಕಾರದಿಂದ ಐಒಸಿಗೆ ₹10,801 ಕೋಟಿ ಸಬ್ಸಿಡಿ ದೊರೆತಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಐಒಸಿ ₹1,992 ಕೋಟಿ ನಷ್ಟ ಅನುಭವಿಸಿದೆ. ಕಾರ್ಯಾಚರಣಾ ವರಮಾನವು ಹಣಕಾಸು 1.69 ಲಕ್ಷ ಕೋಟಿಯಿಂದ ₹2.28 ಲಕ್ಷ ಕೋಟಿಗೆ ಭಾರಿ ಏರಿಕೆ ಆಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕಂಪನಿಯು ₹2,265 ಕೋಟಿ ನಷ್ಟ ಕಂಡಿದೆ. ಹಿಂದಿನ ಹಣಕಾಸು ವರ್ಷದ ಮೊದಲಾರ್ಧದಲ್ಲಿ ₹12,301 ಕೋಟಿ ಲಾಭ ಗಳಿಸಿತ್ತು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಗೆ ಅನುಗುಣವಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಿಸದ ಕಾರಣಕ್ಕೆ ಐಒಸಿ, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿಗಳಿಗೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ₹ 18,480 ಕೋಟಿ ನಷ್ಟವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.