ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆರಿಗೆ ರಿಟರ್ನ್ಸ್: ಜುಲೈ 31 ಕೊನೆ ದಿನ

Published 7 ಜುಲೈ 2024, 2:30 IST
Last Updated 7 ಜುಲೈ 2024, 2:30 IST
ಅಕ್ಷರ ಗಾತ್ರ

ಪ್ರತಿ ವರ್ಷವೂ ಜುಲೈ ತಿಂಗಳು ಬಂದ ತಕ್ಷಣವೇ ವೈಯಕ್ತಿಕ ತೆರಿಗೆದಾರರಿಗೆ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ಬಂದಿದೆ ಎಂದರ್ಥ. ಈ ಬಾರಿಯೂ ಜುಲೈ 31ಕ್ಕೆ ಅಂತಹ ಗಡುವು ಸಮೀಪಿಸುತ್ತಿದೆ.

ವರ್ಷದಿಂದ ವರ್ಷಕ್ಕೆ ತೆರಿಗೆ ನಿಯಮಾವಳಿಗಳು ಬದಲಾಗುತ್ತಿವೆ. ಇದರಿಂದ ತೆರಿಗೆದಾರರಿಗೆ ಸಕಾಲದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಸವಾಲಾಗುತ್ತಿದೆ. ಮತ್ತೊಂದೆಡೆ ಯಾವ ಫಾರಂ ಆಯ್ಕೆ ಮಾಡಬೇಕು, ಯಾವಾಗ ರಿಟರ್ನ್ಸ್ ಸಲ್ಲಿಸಬೇಕು, ಒಂದು ವೇಳೆ ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದರೆ ಯಾವ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಆತಂಕವೂ ಕಾಡುವುದು ಸಹಜ.

ಯಾರ‍್ಯಾರು ರಿಟರ್ನ್ಸ್ ಸಲ್ಲಿಸಬೇಕು?
ತೆರಿಗೆದಾರರ ವಯಸ್ಸು, ವೈಯಕ್ತಿಕ ಆದಾಯ ಹಾಗೂ ಅವರು ಆಯ್ಕೆ ಮಾಡುವ ತೆರಿಗೆ ಪದ್ಧತಿಗೆ ಅನುಗುಣವಾಗಿ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕೇ ಅಥವಾ ಬೇಡವೇ ಎಂಬುದು ನಿರ್ಣಯವಾಗುತ್ತದೆ. ಈ ಕೆಳಗೆ ನೀಡಿರುವ ಮಿತಿ ದಾಟಿ ತೆರಿಗೆ ಆದಾಯ ಹೊಂದಿರುವವರು ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿದೆ. 
ಈ ವಹಿವಾಟಿಗೂ ಸಲ್ಲಿಕೆ ಕಡ್ಡಾಯ

ವೈಯಕ್ತಿಕ ತೆರಿಗೆದಾರರು ಈ ಮೇಲಿನ ಆದಾಯ ಮಿತಿಯ ಪರಿಗಣನೆ ಇಲ್ಲದೆ ಯಾವುದೇ ಆರ್ಥಿಕ ವರ್ಷದಲ್ಲಿ ಈ ಕೆಳಗಿನ ಹಣಕಾಸು ವ್ಯವಹಾರ ಹೊಂದಿದ್ದ ಸಂದರ್ಭದಲ್ಲಿ ಕಡ್ಡಾಯವಾಗಿ ರಿಟರ್ನ್ಸ್ ಸಲ್ಲಿಸಬೇಕಿದೆ.

* ಚಾಲ್ತಿ ಖಾತೆಯಲ್ಲಿ ಒಟ್ಟಾರೆ ₹1 ಕೋಟಿಗೂ ಹೆಚ್ಚು ಮೊತ್ತ ಜಮೆ

* ವಾರ್ಷಿಕವಾಗಿ ₹1 ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್ ಪಾವತಿ 

* ವಿದೇಶ ಪ್ರಯಾಣಕ್ಕೆ ಸಂಬಂಧಿಸಿ ಸ್ವಂತ ಪ್ರಯಾಣಕ್ಕೆ ಅಥವಾ ಇತರರ ಪ್ರಯಾಣಕ್ಕೆ ₹2 ಲಕ್ಷಕ್ಕಿಂತ ಹೆಚ್ಚು ವ್ಯಯಿಸುವುದು

* ₹60 ಲಕ್ಷಕ್ಕೂ ಹೆಚ್ಚು ವ್ಯಾಪಾರ ವಹಿವಾಟು 

* ನಿರ್ದಿಷ್ಟ ಸ್ವಉದ್ಯೋಗ ಹೊಂದಿದ್ದು 10ಕ್ಕೂ ಅಧಿಕ ವಹಿವಾಟು- ಗಳಿಕೆ ‍ಪಡೆದವರು 

* ಉಳಿತಾಯ ಖಾತೆಯಲ್ಲಿ ₹50 ಲಕ್ಷಕ್ಕೂ ಹೆಚ್ಚು ಜಮೆ

* ಆರ್ಥಿಕ ವರ್ಷದಲ್ಲಿ ₹25,000ಕ್ಕೂ (ಹಿರಿಯ ನಾಗರಿಕರಿಗೆ ರೂ 50,000) ಹೆಚ್ಚಿನ ಮೊತ್ತದ ತೆರಿಗೆ ಕಡಿತ –ಇಂತಹ ಹಣಕಾಸು ವ್ಯವಹಾರ ನಡೆಸಿದ್ದರೆ ರಿಟರ್ನ್ಸ್ ಸಲ್ಲಿಸಬೇಕಿದೆ.

ರಿಟರ್ನ್ಸ್ ಸಲ್ಲಿಸದಿದ್ದರೆ ದಂಡ ಎಷ್ಟು?

ಆಯಾ ವರ್ಷಕ್ಕೆ ಸಂಬಂಧಿಸಿದ ರಿಟರ್ನ್ಸ್‌ಗಳನ್ನು ಆದಾಯ ತೆರಿಗೆಯ ಸೆಕ್ಷನ್ 139(1)ರ ಅನ್ವಯ ಜುಲೈ 31ರೊಳಗೆ ತೆರಿಗೆ ಇಲಾಖೆಗೆ ಸಲ್ಲಿಸಬೇಕು. ಈ ಗಡುವು ಮೀರಿ ರಿಟರ್ನ್ಸ್ ಸಲ್ಲಿಸುವುದಿದ್ದರೆ ಸೆಕ್ಷನ್ 234ಎಫ್ ಅಡಿ ಉಲ್ಲೇಖಿಸಿದಂತೆ ₹5,000 ದಂಡ ಪಾವತಿಸಬೇಕಾಗುತ್ತದೆ.

ಆದರೆ, ₹5 ಲಕ್ಷಕ್ಕೂ ಕಡಿಮೆ ತೆರಿಗೆ ಆದಾಯ ಇರುವ ವ್ಯಕ್ತಿಗಳಿಗೆ ದಂಡದ ಮೊತ್ತವನ್ನು ₹1,000ಕ್ಕೆ ಸೀಮಿತಗೊಳಿಸಲಾಗಿದೆ. ಆದರೆ, ಈ ದಂಡ ಪಾವತಿಸಿ ತಮಗೆ ಬೇಕಾದ ಸಮಯಕ್ಕೆ ರಿಟರ್ನ್ಸ್ ಸಲ್ಲಿಸಲು ಅವಕಾಶ ಇರುವುದಿಲ್ಲ.

ಆರ್ಥಿಕ ವರ್ಷ ಕೊನೆಗೊಂಡ ನಂತರ 9 ತಿಂಗಳೊಳಗೆ ಅಂದರೆ 2023-24ನೇ ಸಾಲಿನ ಆದಾಯಕ್ಕೆ ಸಂಬಂಧಿಸಿದ ರಿಟರ್ನ್ಸ್‌ಗಳನ್ನು ಪ್ರಸಕ್ತ ವರ್ಷದ ಡಿಸೆಂಬರ್‌ 31ರೊಳಗೆ ಸಲ್ಲಿಸಲು ಅವಕಾಶ ಇರುತ್ತದೆ.

ಅಲ್ಲದೆ, ಸೆಕ್ಷನ್ 139(8ಎ) ಅಡಿ ಹಿಂದಿನ ವರ್ಷಕ್ಕೆ ಸಂಬಂಧಿಸಿದ ರಿಟರ್ನ್ಸ್ ಸಲ್ಲಿಸದೆ ಇದ್ದರೆ ಅಥವಾ ಸರಿಯಾಗಿ ಆದಾಯ ಘೋಷಿಸದ ಪರಿಣಾಮ ತೆರಿಗೆಯು ಕಡಿಮೆ ಪಾವತಿ ಆಗಿದ್ದರೆ ನವೀಕೃತ ರಿಟರ್ನ್ಸ್ ಸಲ್ಲಿಸಲು ಆರ್ಥಿಕ ವರ್ಷದಿಂದ ಮೂರು ವರ್ಷದ ಕಾಲ ಮಿತಿ ಇರುತ್ತದೆ. ಆದರೆ, ಇದಕ್ಕೆ ಅನ್ವಯವಾಗುವ ತೆರಿಗೆ, ಬಡ್ಡಿ ಸೇರಿ ಶೇ 25ರಿಂದ 50ರಷ್ಟು ಹೆಚ್ಚುವರಿ ದಂಡ ತೆರಬೇಕಾಗುತ್ತದೆ.

ರಿಟರ್ನ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ?

ಸಕಾಲದಲ್ಲಿ ರಿಟರ್ನ್ಸ್ ಸಲ್ಲಿಸದಿದ್ದರೆ ದಂಡವಲ್ಲದೆ ಇತರೆ ಕೆಲವು ಅಡ್ಡ ತೊಡಕುಗಳು ಎದುರಾಗುತ್ತವೆ.

ಬ್ಯಾಂಕ್‌ಗಳಿಗೆ ಸಾಲ ಪಡೆಯಲು ಅರ್ಜಿ ಸಲ್ಲಿಸಿದಾಗ ಇತ್ತೀಚಿನ ಮೂರು ವರ್ಷಗಳ ಐಟಿಆರ್ ನೀಡುವಂತೆ ಕೇಳಲಾಗುತ್ತದೆ. ಒಂದು ವೇಳೆ ರಿಫಂಡ್ ಪಡೆಯುವುದಿದ್ದರೆ ರಿಟರ್ನ್ಸ್‌ ಸಲ್ಲಿಸದೆ ಹಿಂಪಡೆಯುವ ಅವಕಾಶ ಇರುವುದಿಲ್ಲ. ಸಮಯದ ಮಿತಿಯು ಕಳೆದ ಮೇಲೆ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ಇರುವುದಿಲ್ಲ. ಯಾವುದೇ ವೈಯಕ್ತಿಕ ವ್ಯಾಪಾರ ವಹಿವಾಟಿನಲ್ಲಿ ನಷ್ಟವಾದ ಸಂದರ್ಭದಲ್ಲಿ ರಿಟರ್ನ್ಸ್ ಸಲ್ಲಿಸದೆ ನಷ್ಟವನ್ನು ಮುಂದಿನ ವರ್ಷಗಳಿಗೆ ಮುಂದೂಡುವ ಅವಕಾಶವೂ ಇರುವುದಿಲ್ಲ.

ನಾವು ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದರೆ ಆದಾಯ ತೆರಿಗೆ ಇಲಾಖೆಗೆ ಹೇಗೆ ಮಾಹಿತಿ ಗೊತ್ತಾಗಲಿದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಇದಕ್ಕಾಗಿಯೇ ಇಲಾಖೆಯು ‘ನಾನ್-ಫೈಲರ್ಸ್ ಮಾನಿಟರಿಂಗ್ ಸಿಸ್ಟಂ’ ಅನ್ನು ಅಳವಡಿಸಿಕೊಂಡಿದೆ.

ಇದು ಆಂತರಿಕ ಮಾಹಿತಿ ಮತ್ತು ಹೊರ ವ್ಯವಹಾರದ ಬಗೆಗಿನ ಮಾಹಿತಿಗಳನ್ನು ವಿಶ್ಲೇಷಿಸುತ್ತದೆ. ತಮ್ಮ ಆದಾಯಕ್ಕಿಂತ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸುವವರ ಬಗೆಗಿನ ದತ್ತಾಂಶವನ್ನು ಇಲಾಖೆಗೆ ರವಾನಿಸುತ್ತದೆ. ಈ ಮಾಹಿತಿ ಆಧಾರದ ಮೇಲೆ ನೋಟಿಸ್ ಬರುವ ಸಾಧ್ಯತೆಗಳಿವೆ. ಅದೇ ರೀತಿ ತೆರಿಗೆ ರಿಫಂಡ್ ಪಡೆಯುವ ಏಕೈಕ ಉದ್ದೇಶದಿಂದ ಇರುವ ಎಲ್ಲಾ ರಿಯಾಯಿತಿಯನ್ನು ರಿಟರ್ನ್ಸ್‌ನಲ್ಲಿ ತುಂಬುವ ಪ್ರಯತ್ನವೂ ಮುಂದೆ ಸಮಸ್ಯೆಗೆ ಕಾರಣವಾಗಲಿದೆ.

ಯಾವ ಜಾಗರೂಕತೆ ವಹಿಸಬೇಕು?

ಬಹುತೇಕ ಸಂದರ್ಭದಲ್ಲಿ ನಮಗೆ ಅರಿವಿಲ್ಲದೆ ಬ್ಯಾಂಕ್ ಬಡ್ಡಿ, ಡಿವಿಡೆಂಡ್, ತೆರಿಗೆ ರಿಫಂಡ್ ಮೇಲಿನ ಬಡ್ಡಿ ಇತ್ಯಾದಿ ತೆರಿಗೆಗೊಳಪಡುವ ಆದಾಯವು ನಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿರುತ್ತದೆ. ಕೊನೆ ಹಂತದಲ್ಲಿ ಈ ಮಾಹಿತಿಯನ್ನು ಕ್ರೋಡೀಕರಿಸುವುದು ತ್ರಾಸದಾಯಕವಾಗಲಿದೆ.

ಇದಕ್ಕಾಗಿಯೇ ಪ್ರತಿ ತೆರಿಗೆದಾರನ ಪ್ಯಾನ್ ಖಾತೆಯ ಲಾಗಿನ್‌ನಲ್ಲಿರುವ ವಾರ್ಷಿಕ ಮಾಹಿತಿಯ ರಿಟರ್ನ್ಸ್ (ಎಐಆರ್) ಹಾಗೂ ‘ಫಾರಂ 26 ಎಎಸ್’ ಅನ್ನು ರಿಟರ್ನ್ಸ್ ಸಲ್ಲಿಸುವ ಮೊದಲೇ ಪರಾಮರ್ಶಿಸಬೇಕು. ಅವುಗಳಲ್ಲಿ ಕಂಡುಬರುವ ಆದಾಯಕ್ಕೂ ನೀವು ಘೋಷಿಸುವ ಆದಾಯಕ್ಕೂ ವ್ಯತ್ಯಾಸ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡ ಬಳಿಕವೇ ರಿಟರ್ನ್ಸ್ ಸಲ್ಲಿಸಬೇಕಿದೆ.

ಒಂದು ವೇಳೆ ನಿಮ್ಮದಲ್ಲದ ಆದಾಯದ ಮಾಹಿತಿ, ಟಿಡಿಎಸ್ ಮೊತ್ತ ನಿಮ್ಮ ಖಾತೆಯಲ್ಲಿ ತಪ್ಪಾಗಿ ಜಮಾ ಆಗಿರುವುದು ಕಂಡುಬಂದರೆ ಅಂತಹ ಆದಾಯವನ್ನಾಗಲಿ ಅದಕ್ಕೆ ಸಂಬಂಧಿಸಿದ ಟಿಡಿಎಸ್ ಮೊತ್ತವನ್ನಾಗಲಿ ರಿಟರ್ನ್ಸ್‌ನಲ್ಲಿ ಘೋಷಿಸಬಾರದು. ಸಂಬಂಧಿತ ಜಮಾದಾರರಿಗೆ ಅಂತಹ ತಪ್ಪು ಮಾಹಿತಿ ಸರಿಪಡಿಸುವಂತೆ ಪತ್ರ ವ್ಯವಹಾರ ಅಥವಾ ಇ–ಮೇಲ್‌ ಮೂಲಕ ಮಾಹಿತಿ ನೀಡಬೇಕು. ಅದನ್ನು ದಾಖಲಿಸಿಟ್ಟುಕೊಳ್ಳುವುದು ಒಳಿತು.

ರಿಟರ್ನ್ಸ್ ಸಲ್ಲಿಕೆ ಹೇಗೆ?
ತೆರಿಗೆದಾರರೇ ಇಲಾಖೆಯ ವೆಬ್‌ಸೈಟ್‌ಗೆ ಲಾಗಿನ್ ಆಗಿ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು. ಇತರೆ ಮೂಲಗಳಿಂದ ಆದಾಯ ಇದ್ದಾಗ ಹಾಗೂ ಅದಕ್ಕೆ ಸಂಬಂಧಿಸಿ ಇರುವ ವಿನಾಯಿತಿ, ಅನ್ವಯವಾಗುವ ಕಾನೂನಿನ ಕೆಲವು ಕ್ಲಿಷ್ಟಕರ ಅಂಶಗಳು ಎದುರಾಗುತ್ತವೆ. ಅವುಗಳನ್ನು ಸರಿಯಾಗಿ ಅರ್ಥೈಸಿಕೊಂಡು ರಿಟರ್ನ್ಸ್‌ ಸಲ್ಲಿಸುವಾಗ ಕೆಲವು ಲೋಪಗಳಾಗುವ ಸಾಧ್ಯತೆ ಇರುತ್ತದೆ. ಅಂತಹ ವೇಳೆ ಪರಿಣತ ತೆರಿಗೆ ಸಲಹೆಗಾರರು ಅಥವಾ ಲೆಕ್ಕ ಪರಿಶೋಧಕರನ್ನು ಸಂಪರ್ಕಿಸಬಹುದು. 
ಐಟಿಆರ್ ಫಾರಂ ಆಯ್ಕೆ ಹೇಗೆ?

ಐಟಿಆರ್ 1 (ಸಹಜ್): ವಾರ್ಷಿಕ ತೆರಿಗೆ ಆದಾಯ ₹50 ಲಕ್ಷದ ಒಳಗಿರಬೇಕು. ವೇತನ ಕುಟುಂಬದ ಪಿಂಚಣಿ ಆದಾಯ ಆಸ್ತಿ ಆದಾಯ (ಒಂದು ಮನೆ ಹೊಂದಿದ್ದು ಹಳೆಯ ನಷ್ಟ ಬಾಕಿ ಇರಬಾರದು ) ಹಾಗೂ ಇತರೆ ಆದಾಯ ಹೊಂದಿದವರಿಗೆ ಈ ಫಾರಂ ಅನ್ವಯಿಸಲಿದೆ.

ಐಟಿಆರ್ 2‌: ವ್ಯಾಪಾರ ಹಾಗೂ ವೃತ್ತಿ ಆದಾಯ ಹೊಂದಿರದೆ ಫಾರಂ ಸಹಜ್ ಯಾರಿಗೆಲ್ಲ ಅನ್ವಯಿಸುವುದಿಲ್ಲವೋ ಅಂತಹ ತೆರಿಗೆದಾರರಿಗೆ ಈ ಫಾರಂ ಅನ್ವಯವಾಗಲಿದೆ.

ಐಟಿಆರ್ 3: ಐಟಿಆರ್ 1 ಹಾಗೂ ಐಟಿಆರ್‌ 2 ಅನ್ವಯಿಸದೆ ವ್ಯಾಪಾರ– ವೃತ್ತಿ ಆದಾಯ ಇರುವ ತೆರಿಗೆದಾರರು ಈ ಫಾರಂ ಅಳವಡಿಸಿಕೊಳ್ಳಬಹುದು.

ಐಟಿಆರ್ 4 (ಸುಗಮ್): ವ್ಯಾಪಾರ- ವೃತ್ತಿ ಆದಾಯ ಹೊಂದಿದ್ದು ಮೇಲಿನ ವರ್ಗದಲ್ಲಿ ಒಳಪಡದ ತೆರಿಗೆದಾರರು ಆದಾಯ ತೆರಿಗೆಯ ಸೆಕ್ಷನ್ 44ಎಡಿ 44ಎಡಿಎ ಹಾಗೂ 44ಇ ಅಡಿ ಆದಾಯ ಘೋಷಿಸುವುದಿದ್ದರೆ ಈ ಫಾರಂ ಅನ್ವಯವಾಗಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT