ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ರೋಡ್ ಷೋ: ಜಮ್ಮು–ಕಾಶ್ಮೀರದಲ್ಲಿ ರಾಜ್ಯದಿಂದ ₹ 670 ಕೋಟಿ ಹೂಡಿಕೆ

Last Updated 18 ಫೆಬ್ರುವರಿ 2020, 6:53 IST
ಅಕ್ಷರ ಗಾತ್ರ

ಬೆಂಗಳೂರು:ಜಮ್ಮು–ಕಾಶ್ಮೀರದಲ್ಲಿ ಹೂಡಿಕೆ ಮಾಡಲುಟೊಯೋಟ ಕಿರ್ಲೊಸ್ಕರ್,ಒರಾಕಲ್‌ ಇಂಡಿಯಾ ಒಳಗೊಂಡಂತೆ ಪ್ರಮುಖ ಕಂಪನಿಗಳು ಮುಂದೆ ಬಂದಿವೆ.

ಜಮ್ಮು ಕಾಶ್ಮೀರದಲ್ಲಿ ಮೇ ತಿಂಗಳಿನಲ್ಲಿ ನಡೆಯಲಿರುವ 2020ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ದೇಶದಾದ್ಯಂತ ರೋಡ್‌ ಷೋ ನಡೆಸಲಾಗುತ್ತಿದೆ. ಮೊದಲ ರೋಡ್‌ ಷೋ ಬೆಂಗಳೂರಿನಲ್ಲಿ ಸೋಮವಾರ ನಡೆದಿದ್ದು,₹ 670 ಕೋಟಿ ಮೌಲ್ಯದ ಹೂಡಿಕೆ ಒಪ್ಪಂದ ನಡೆದಿದೆ.

ಈ ವೇಳೆ, ಟೊಯೋಟ ಕಿರ್ಲೊಸ್ಕರ್ ಉಪಾಧ್ಯಕ್ಷ ವಿಕ್ರಂಕಿರ್ಲೊಸ್ಕರ್ ಅವರು ಜಮ್ಮು ಕಾಶ್ಮೀರದ ಯೋಜನಾ ಅಭಿವೃದ್ಧಿ ಮತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ರೋಹಿತ್‌ ಕನ್ಸಲ್‌, ಜಮ್ಮು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಸಲಹೆಗಾರ ಕೇವಲ್‌ ಕುಮಾರ್‌ ಶರ್ಮಾ, ಪ್ರಧಾನ ಕಾರ್ಯದರ್ಶಿ ವಿಪುಲ್‌ ಪಾಠಕ್‌ ಜತೆ ಸಭೆ ನಡೆಸಿದ್ದಾರೆ.

₹ 670 ಕೋಟಿ ಮೌಲ್ಯದ 13 ಒಪ್ಪಂದಗಳು ಮಾತ್ರವಲ್ಲದೆ,ತಂತ್ರಜ್ಞಾನ ನಾವಿನ್ಯತಾ ಕೇಂದ್ರದಲ್ಲಿ ₹ 175 ಕೋಟಿ ಹೂಡಿಕೆ ಮಾಡುವ ಪ್ರಸ್ತಾವವನ್ನೂ ರಾಜ್ಯ ಸರ್ಕಾರದ ಅಧಿಕಾರಿಗಳು ಸ್ವೀಕರಿಸಿದ್ದಾರೆ.

ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಜಮ್ಮು–ಕಾಶ್ಮೀರದಲ್ಲಿ ಹೂಡಿಕೆ ಮಾಡಲು ದೇಶದ ಅತಿ ದೊಡ್ಡ ಕಂಪನಿಗಳಾದ ರಿಲಯನ್ಸ್‌ ಇಂಡಸ್ಟ್ರೀಸ್ ಮತ್ತು ಟಾಟಾ ಸನ್ಸ್‌ ಒಲವು ವ್ಯಕ್ತಪಡಿಸಿದ್ದವು.ಮುಕೇಶ್ ಅಂಬಾನಿ ಒಡೆತನದರಿಲಯನ್ಸ್‌ ಕಣಿವೆ ರಾಜ್ಯದಲ್ಲಿ ಹೂಡಿಕೆಗೆ ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಹೂಡಿಕೆ ಸಮಾವೇಶದಲ್ಲಿ ₹ 25,000 ಕೋಟಿ ಹೂಡಿಕೆ ಸೆಳೆಯುವ ಗುರಿಯನ್ನು ಹೊಂದಲಾಗಿದೆ. ವ್ಯಾಪಾರ–ವಹಿವಾಟು ಸುಗಮಗೊಳಿಸುವ ಉದ್ದೇಶದಿಂದ ಶೀಘ್ರ ಕೈಗಾರಿಕಾ ನೀತಿ ರೂಪಿಸಲಾಗುವುದು ಎಂದು ಜಮ್ಮು–ಕಾಶ್ಮೀರದ ಕೈಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಹೂಡಿಕೆ ಸಮಾವೇಶ:ಕೇಂದ್ರಾಡಳಿತ ಪ್ರದೇಶವಾದ ಬಳಿಕ ಜಮ್ಮು–ಕಾಶ್ಮೀರದಲ್ಲಿ ಮೊದಲ ಬಾರಿ ಹೂಡಿಕೆ ಸಮಾವೇಶ ಆಯೋಜಿಸಲಾಗಿದೆ. ಕಣಿವೆ ರಾಜ್ಯದಲ್ಲಿ ಐ.ಟಿ ಕ್ಷೇತ್ರವನ್ನು ಮೇಲ್ದರ್ಜೆಗೆ ಏರಿಸುವ ಮೂಲಕ 5 ವರ್ಷಗಳಲ್ಲಿ ಪ್ರತಿ ವರ್ಷವೂ ₹ 500 ಕೋಟಿ ಹೂಡಿಕೆ ಆಕರ್ಷಿಸಲು ಸರ್ಕಾರ ಉದ್ದೇಶಿಸಿದೆ. 10 ವರ್ಷಗಳಲ್ಲಿ 5 ಐ.ಟಿ ಪಾರ್ಕ್‌ಗಳನ್ನು ಸ್ಥಾಪಿಸುವ ಮತ್ತು 50 ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಸ್ತಾವವನ್ನೂ ಹೊಂದಿದೆ.

‘ಹೂಡಿಕೆ ಉತ್ತೇಜಿಸುವ ಮತ್ತು ಜಮ್ಮು ಕಾಶ್ಮೀರವನ್ನು ಕೈಗಾರಿಕಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ 48ಕ್ಕೂ ಅಧಿಕ ಹೂಡಿಕೆ ಯೋಜನೆಗಳು ಹಾಗೂ 14 ಉದ್ಯಮ ವಲಯಗಳನ್ನು ಗುರುತಿಸಲಾಗಿದೆ’ ಎಂದು ಕೇವಲ್ ಕುಮಾರ್‌ ಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT