ಜೆಟ್‌ ಏರ್‌ವೇಸ್‌ ವಶಕ್ಕೆ ಬ್ಯಾಂಕ್‌ಗಳ ಯತ್ನ?

ಗುರುವಾರ , ಏಪ್ರಿಲ್ 25, 2019
33 °C
ತುರ್ತು ನಿಧಿ ರೂಪದಲ್ಲಿ ₹ 1,200 ಕೋಟಿ ತೊಡಗಿಸಲು ಬ್ಯಾಂಕ್‌ಗಳ ನಿರ್ಧಾರ

ಜೆಟ್‌ ಏರ್‌ವೇಸ್‌ ವಶಕ್ಕೆ ಬ್ಯಾಂಕ್‌ಗಳ ಯತ್ನ?

Published:
Updated:

ನವದೆಹಲಿ: ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ಗೆ ಸಾಲ ನೀಡಿರುವ ಬ್ಯಾಂಕ್‌ಗಳು ಸಂಸ್ಥೆಯ ಆಡಳಿತಾತ್ಮಕ ನಿಯಂತ್ರಣವನ್ನು ತಮ್ಮ ವಶಕ್ಕೆ ಪಡೆಯಲು ಮುಂದಾಗಿವೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನೇತೃತ್ವದಲ್ಲಿನ ಬ್ಯಾಂಕ್‌ಗಳ ಒಕ್ಕೂಟವು, ಸಂಸ್ಥೆಯ ಸದ್ಯದ ಆಡಳಿತ ಮಂಡಳಿಯನ್ನು ರದ್ದುಪಡಿಸಿ ವೃತ್ತಿನಿರತರ ವಶಕ್ಕೆ ಒಪ್ಪಿಸಲು ಉದ್ದೇಶಿಸಿದೆ.

ಬ್ಯಾಂಕ್‌ ಒಕ್ಕೂಟದ ನೇತೃತ್ವದಲ್ಲಿನ ಪುನಶ್ಚೇತನ ಯೋಜನೆಯಲ್ಲಿ ಹೆಚ್ಚುವರಿ ಬಂಡವಾಳ ತೊಡಗಿಸಲು ಇತಿಹಾದ್‌ ಏರ್‌ವೇಸ್‌ ಹಿಂದೇಟು ಹಾಕಿರುವುದರಿಂದ ಬ್ಯಾಂಕ್‌ಗಳು ಈ ನಿರ್ಧಾರಕ್ಕೆ ಬಂದಿವೆ.

ಪುನಶ್ಚೇತನ ಯೋಜನೆಯಡಿ, ಜೆಟ್‌ ಏರ್‌ವೇಸ್‌ನ ಪ್ರವರ್ತಕ ನರೇಶ್‌ ಗೋಯಲ್‌ (69), ಅವರ ಪತ್ನಿ ಅನಿತಾ ಗೋಯಲ್‌ ಮತ್ತು ಪ್ರವರ್ತಕರು ನೇಮಿಸಿರುವ ನಿರ್ದೇಶಕರು, ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರವರ್ತಕರು ನೇಮಕ ಮಾಡಿರುವ ನಿರ್ದೇಶಕರಲ್ಲಿ ನಸೀಂ ಜೈದಿ ಮತ್ತು ಗೌರಂಗ್‌ ಶೆಟ್ಟಿ ಇದ್ದಾರೆ.

ಇದರ ಜತೆಗೆ, ನರೇಶ್‌ ಗೋಯಲ್‌ ಅವರು ಸಂಸ್ಥೆಯಲ್ಲಿನ ತಮ್ಮ ಪಾಲು ಬಂಡವಾಳವನ್ನು ಶೇ 10ಕ್ಕೆ ಇಳಿಸಬೇಕೆಂಬ ನಿಬಂಧನೆಯನ್ನೂ ಮುಂದಿಟ್ಟಿವೆ.

ಸಂಸ್ಥೆಯ ಮೇಲಿನ ಹಿಡಿತ ಕೈಬಿಡಬಾರದು ಎನ್ನುವ ನರೇಶ್‌ ಅವರ ಧೋರಣೆಯೇ ಪುನಶ್ಚೇತನ ಯತ್ನಕ್ಕೆ ಪ್ರಮುಖ ಅಡ್ಡಿಯಾಗಿ ಪರಿಣಮಿಸಿದೆ.

ಪುನಶ್ಚೇತನ ಪ್ರಕ್ರಿಯೆ ಅಂಗವಾಗಿ, ಬ್ಯಾಂಕ್‌ಗಳು ಸಂಸ್ಥೆಯಲ್ಲಿ ತುರ್ತು ನಿಧಿ ರೂಪದಲ್ಲಿ ₹ 1,200 ಕೋಟಿ ತೊಡಗಿಸಲಿವೆ. ಬ್ಯಾಂಕ್‌ಗಳ ಒಕ್ಕೂಟದಲ್ಲಿ ಎಸ್‌ಬಿಐ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಹೆಚ್ಚಿನ ಪಾಲು ಹೊಂದಿವೆ.

ಪೈಲಟ್‌ ಸಂಘದಿಂದ ಪ್ರಧಾನಿಗೆ ಪತ್ರ

ವಿಮಾನ ಯಾನ ಸಂಸ್ಥೆಯು ಸಾಲದ ಭಾರಕ್ಕೆ ಕುಸಿದು ಬಾಗಿಲು ಮುಚ್ಚುವ ಸ್ಥಿತಿ ತಲುಪಿದ್ದು, ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ ಎಂದು ಪೈಲಟ್‌ಗಳ ಸಂಘವು ಆತಂಕ ವ್ಯಕ್ತ‍ಪಡಿಸಿದೆ.

ಏಳು ತಿಂಗಳಿನಿಂದ ಸಮರ್ಪಕವಾಗಿ ವೇತನ ನೀಡಲಾಗುತ್ತಿಲ್ಲ. ಇದರಿಂದ ನಮಗೆಲ್ಲ ಹಣಕಾಸು ಸಂಕಷ್ಟ ಎದುರಾಗಿದೆ. ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ‍ಪ್ರಯತ್ನಗಳು ಫಲ ನೀಡುತ್ತಿಲ್ಲ ಎಂದು ಸಂಘವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !