ಜೆಟ್ ಬಿಡ್‌ ಯಶಸ್ವಿ: ನಿರೀಕ್ಷೆ

ಶನಿವಾರ, ಮೇ 25, 2019
28 °C
ಪ್ರಯಾಣ ದರ ಏರಿಸದಂತೆ ವಿಮಾನಯಾನ ಸಂಸ್ಥೆಗಳಿಗೆ ತಾಕೀತು

ಜೆಟ್ ಬಿಡ್‌ ಯಶಸ್ವಿ: ನಿರೀಕ್ಷೆ

Published:
Updated:
Prajavani

ನವದೆಹಲಿ: ತಾತ್ಕಾಲಿಕವಾಗಿ ತನ್ನೆಲ್ಲ ವಿಮಾನಗಳ ಹಾರಾಟ ಸ್ಥಗಿತಗೊಳಿಸಿರುವ ಜೆಟ್‌ ಏರ್‌ವೇಸ್‌ನ ಪಾಲು ಬಂಡವಾಳ ಮಾರಾಟ ಪ್ರಕ್ರಿಯೆಯು ಯಶಸ್ವಿಯಾಗಲಿದೆ ಎಂದು ಬ್ಯಾಂಕ್‌ಗಳು ಆಶಾವಾದ ತಳೆದಿವೆ.

ಸಂಸ್ಥೆಯ ಪಾಲು ಬಂಡವಾಳ ಖರೀದಿಸಲು ಹೂಡಿಕೆದಾರರು ಆಸಕ್ತಿ ತೋರಿಸಿರುವುದರಿಂದ ಜೆಟ್‌ ಏರ್‌ವೇಸ್‌ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಬ್ಯಾಂಕ್‌ಗಳು ಹೇಳಿಕೆಯಲ್ಲಿ ತಿಳಿಸಿವೆ.

ಬೆಲೆ ಏರಿಸದಂತೆ ತಾಕೀತು: ಯಾವುದೇ ಕಾರಣಕ್ಕೂ ಬೇಕಾಬಿಟ್ಟಿಯಾಗಿ ಪ್ರಯಾಣ ದರ ಹೆಚ್ಚಿಸಿ ಪ್ರಯಾಣಿಕರನ್ನು ಸುಲಿಗೆ ಮಾಡಬಾರದು ಎಂದು ನಾಗರಿಕ ವಿಮಾನಯಾನ ಸಚಿವಾಲಯವು ದೇಶಿ ವಿಮಾನಯಾನ ಸಂಸ್ಥೆಗಳಿಗೆ ತಾಕೀತು ಮಾಡಿದೆ.

‘ಪ್ರಯಾಣ ದರಗಳ ಮೇಲೆ ನಿರಂತರವಾಗಿ ನಿಗಾ ಇರಿಸಲಾಗುವುದು’ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಪ್ರದೀಪ್‌ ಸಿಂಗ್‌ ಖರೋಲಾ ಹೇಳಿದ್ದಾರೆ. ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಜತೆ ಗುರುವಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಜೆಟ್‌ ಏರ್‌ವೇಸ್‌ಗಳ ವಿಮಾನ ಹಾರಾಟ ರದ್ದಾಗಿರುವುದರಿಂದ ಪ್ರಯಾಣ ದರ ದುಬಾರಿಯಾಗುತ್ತಿದೆ.

ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯ: ವಿಜಯ್‌ ಮಲ್ಯ ಅವರ ಒಡೆತನಕ್ಕೆ ಸೇರಿದ್ದ ಕಿಂಗ್‌ಫಿಷರ್‌ ಏರ್‌ಲೈನ್ಸ್‌ಗೆ ಆದ ಗತಿ ಬರದಂತೆ ತಡೆಯಲು ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಜೆಟ್‌ ಏರ್‌ಲೈನ್ಸ್‌ನ ನೌಕರರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

2012ರ ಅಕ್ಟೋಬರ್‌ನಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಕಿಂಗ್‌ಫಿಷರ್‌, ಮತ್ತೆ ಕಾರ್ಯಾರಂಭ ಮಾಡಲೇ ಇಲ್ಲ.

‘ವಿಮಾನಗಳ ಹಾರಾಟ ಸ್ಥಗಿತಗೊಳಿಸುವುದಕ್ಕೆ ಕಾರಣವಾಗಿರುವ ಬೆಳವಣಿಗೆಗಳು ಉದ್ದೇಶಪೂರ್ವಕ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಸಂಸ್ಥೆಯ ನೌಕರರ ಸಂಘದ ಅಧ್ಯಕ್ಷ ಕಿರಣ್‌ ಪಾವಸ್ಕರ್‌ ಒತ್ತಾಯಿಸಿದ್ದಾರೆ.

ಬಿಡ್‌ ಆಹ್ವಾನ: ಸಾಲದ ಸುಳಿಗೆ ಸಿಲುಕಿರುವ ಸಂಸ್ಥೆಯಲ್ಲಿ ಬ್ಯಾಂಕ್‌ಗಳ ಒಕ್ಕೂಟವು ಶೇ 51ರಷ್ಟು ಪಾಲು ಬಂಡವಾಳ ಹೊಂದಿದ್ದು, ಆಸಕ್ತ ಹೂಡಿಕೆದಾರರಿಂದ  ಬಿಡ್ ಆಹ್ವಾನಿಸಿದೆ.

ಪಾರದರ್ಶಕ ರೀತಿಯಲ್ಲಿ ಸಂಸ್ಥೆಯ ಮೌಲ್ಯ ನಿರ್ಧಾರ ಆಗಲಿರುವುದರಿಂದ ಬಿಡ್‌ ಪ್ರಕ್ರಿಯೆ ಯಶಸ್ವಿಯಾಗುವ ಸಾಧ್ಯತೆ ಇದೆ. ಬಜೆಟ್‌ ಏರ್‌ಲೈನ್‌ಗಳ ತೀವ್ರ ಪೈಪೋಟಿಯಿಂದ ಜೆಟ್‌ನ ಲಾಭದ ಪ್ರಮಾಣ ಕಡಿಮೆಯಾಗಿ ಸಾಲದ ಸುಳಿಗೆ ಸಿಲುಕಿದೆ. ಪ್ರಯಾಣಕರ ಸಂಖ್ಯೆ ಹೆಚ್ಚಿದ್ದರೂ, ನಿರಂತರವಾಗಿ ನಾಲ್ಕು ತ್ರೈಮಾಸಿಕಗಳಲ್ಲಿ ಸಂಸ್ಥೆಯು ನಷ್ಟಕ್ಕೆ ಗುರಿಯಾಗುತ್ತಲೇ ಬಂದಿದೆ.

ಹೈಕೋರ್ಟ್‌ ನಕಾರ: ಜೆಟ್‌ ಏರ್‌ವೇಸ್‌ ಬಿಕ್ಕಟ್ಟಿನಲ್ಲಿ ಮಧ್ಯೆ ಪ್ರವೇಶಿಸುವುದಕ್ಕೆ ಬಾಂಬೆ ಹೈಕೋರ್ಟ್‌ ನಿರಾಕರಿಸಿದೆ. ನಷ್ಟಪೀಡಿತ ಕಂಪನಿಯನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ತಾನು ನಿರ್ದೇಶನ ನೀಡುವುದಿಲ್ಲ ಎಂದು ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 3

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !