ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರ ಮೊದಲ ತ್ರೈಮಾಸಿಕದಲ್ಲಿ ಜೆಟ್‌ ಏರ್‌ವೇಸ್‌ ದೇಶಿ ಸೇವೆ: ಜಲನ್‌ ಕಾಲ್‌ರಾಕ್‌

Last Updated 13 ಸೆಪ್ಟೆಂಬರ್ 2021, 12:03 IST
ಅಕ್ಷರ ಗಾತ್ರ

ನವದೆಹಲಿ: ಜೆಟ್‌ ಏರ್‌ವೇಸ್‌ ವಿಮಾನಯಾನ ಕಂಪನಿಯು 2022ರ ಮೊದಲ ತ್ರೈಮಾಸಿಕದಲ್ಲಿ ದೇಶಿ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ. ಮೂರು ಅಥವಾ ನಾಲ್ಕನೇ ತ್ರೈಮಾಸಿಕದ ವೇಳೆಗೆ ಅಂತರರಾಷ್ಟ್ರೀಯ ಯಾನ ನಡೆಸಲಿದೆ ಎಂದು ಕಂಪನಿಯ ಪುನಶ್ಚೇತನಕ್ಕೆ ಮುಂದಾಗಿರುವ ಜಲನ್ ಕಲ್‌ರಾಕ್‌ ಒಕ್ಕೂಟವು ಸೋಮವಾರ ಹೇಳಿದೆ.

ಜೆಟ್‌ ಏರ್‌ವೇಸ್‌ನ ಮೊದಲ ವಿಮಾನವು ದೆಹಲಿ–ಮುಂಬೈ ಮಾರ್ಗದಲ್ಲಿ ಸಂಚಾರ ಆರಂಭಿಸಲಿದೆ. ಸಂಸ್ಥೆಯ ಮುಖ್ಯ ಕಚೇರಿಯು ಮುಂಬೈ ಬದಲಿಗೆ ದೆಹಲಿಯಲ್ಲಿ ಇರಲಿದೆ ಎಂದು ಅದು ತಿಳಿಸಿದೆ.

ಆರ್ಥಿಕವಾಗಿ ದಿವಾಳಿ ಆಗಿರುವ ಜೆಟ್‌ ಏರ್‌ವೇಸ್‌ ಕಂಪನಿಯ ಪುನಶ್ಚೇತನಕ್ಕೆ ಜಲನ್ ಕಲ್‌ರಾಕ್‌ ಒಕ್ಕೂಟ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಜೂನ್‌ನಲ್ಲಿ ಒಪ್ಪಿಗೆ ನೀಡಿತ್ತು.

‘2022 ಮೊದಲ ತ್ರೈಮಾಸಿಕದಲ್ಲಿ ದೇಶಿ ಕಾರ್ಯಾಚರಣೆ ಹಾಗೂ ಮೂರು ಅಥವಾ ನಾಲ್ಕನೇ ತ್ರೈಮಾಸಿಕದ ವೇಳೆಗೆ ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಆರಂಭಿಸಲು ಜೆಟ್‌ ಏರ್‌ವೇಸ್‌ 2.0 ಉದ್ದೇಶಿಸಿದೆ’ ಎಂದು ಒಕ್ಕೂಟದ ಪ್ರಮುಖ ಸದಸ್ಯ ಆಗಿರುವ ಮುರಾರಿಲಾಲ್ ಜಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಮೂರು ವರ್ಷಗಳಲ್ಲಿ 50ಕ್ಕೂ ಹೆಚ್ಚು ಹಾಗೂ ಐದು ವರ್ಷಗಳಲ್ಲಿ 100ಕ್ಕೂ ಹೆಚ್ಚಿನ ವಿಮಾನಗಳನ್ನು ಹೊಂದುವುದು ನಮ್ಮ ಯೋಜನೆಯಾಗಿದೆ. ಇದು ಒಕ್ಕೂಟದ ಅಲ್ಪಾವಧಿ ಮತ್ತು ದೀರ್ಘಾವಧಿಯ ವ್ಯಾಪಾರ ಯೋಜನೆಗೆ ಹೆಚ್ಚು ಹೊಂದಿಕೊಳ್ಳುತ್ತದೆ’ ಎಂದೂ ಅವರು ಹೇಳಿದ್ದಾರೆ.

‘ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸ್ಥಗಿತಗೊಳಿಸಿದ್ದ ಕಂಪನಿಯುವಿಮಾನಯಾನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪುನಶ್ಚೇತನಗೊಳ್ಳುತ್ತಿದೆ ಮತ್ತು ಈ ಐತಿಹಾಸಿಕ ಪ್ರಯಾಣದ ಭಾಗವಾಗುವುದನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕಂಪನಿಯು 2019ರ ಏಪ್ರಿಲ್‌ನಲ್ಲಿ ಸೇವೆ ಸ್ಥಗಿತಗೊಳಿಸಿತ್ತು.

ಕಂಪನಿಯು ಈಗಾಗಲೇ 150ಕ್ಕೂ ಹೆಚ್ಚು ಪೂರ್ಣಾವಧಿ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. 2021–22ನೇ ಹಣಕಾಸು ವರ್ಷದಲ್ಲಿ ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು ಎಂದು ಕ್ಯಾಪ್ಟನ್‌ ಸುಧೀರ್‌ ಗೌರ್‌ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT