ಸೋಮವಾರ, ಜೂನ್ 21, 2021
30 °C

ಮೂರು ತಿಂಗಳಲ್ಲಿ 84 ಲಕ್ಷ ಉದ್ಯೋಗ ನಷ್ಟ: ಸಿಎಂಐಇ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದಲ್ಲಿ ಕೋವಿಡ್‌–19ರ ಎರಡನೆಯ ಅಲೆಯು ತೀವ್ರ ಗೊಂಡ ನಂತರದಲ್ಲಿ ಜನ ಉದ್ಯೋಗ ಕಳೆದುಕೊಳ್ಳುತ್ತಿರುವ ಪ್ರಮಾಣವೂ ಜಾಸ್ತಿ ಆಗಿದೆ ಎಂದು ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ’ (ಸಿಎಂಐಇ) ಸಂಸ್ಥೆ ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.

ಮಾಸಿಕ ವೇತನ ಸಿಗುವ ಉದ್ಯೋಗಗಳ ಸಂಖ್ಯೆಯು ಏಪ್ರಿಲ್‌ ತಿಂಗಳಿನಲ್ಲಿ 34 ಲಕ್ಷದಷ್ಟು ಕಡಿಮೆ ಆಗಿದೆ ಎಂದು ಸಿಎಂಐಇ ಹೇಳಿದೆ. ‘ಹೆಚ್ಚಿನವರು ಬಯಸುವ ಈ ಬಗೆಯ, ಸಂಬಳದ ಉದ್ಯೋಗಗಳ ಸಂಖ್ಯೆಯು ಫೆಬ್ರುವರಿ ನಂತರ ಕಡಿಮೆ ಆಗುತ್ತಿದೆ. ಫೆಬ್ರುವರಿ, ಮಾರ್ಚ್‌, ಏಪ್ರಿಲ್‌ ತಿಂಗಳುಗಳಲ್ಲಿ ದೇಶದಲ್ಲಿ ಆಗಿರುವ ಈ ಬಗೆಯ ಉದ್ಯೋಗಗಳ ನಷ್ಟ 86 ಲಕ್ಷ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಸಿದ್ಧಪಡಿಸಿರುವ ವರದಿ ಹೇಳಿದೆ.

ದೇಶದಲ್ಲಿ 2019–20ರಲ್ಲಿ ಮಾಸಿಕ ವೇತನ ಕೊಡುವ ಒಟ್ಟು 8.59 ಕೋಟಿ ಉದ್ಯೋಗಗಳು ಇದ್ದವು. ಇದರ ಸಂಖ್ಯೆಯು ಈ ವರ್ಷದ ಏಪ್ರಿಲ್‌ ವೇಳೆಗೆ 7.33 ಕೋಟಿಗೆ ಇಳಿಕೆ ಕಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವರ್ಷದ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ ಕೆಲಸ ಅರಸುವವರ ಸಂಖ್ಯೆಯಲ್ಲಿಯೂ ಏರಿಕೆ ಆಗಿದೆ. ಕೆಲಸ ಮಾಡಲು ಸಿದ್ಧವಿರುವ, ಸಕ್ರಿಯವಾಗಿ ಕೆಲಸ ಅರಸುತ್ತಿರುವವರ ಸಂಖ್ಯೆಯಲ್ಲಿ 62 ಲಕ್ಷದಷ್ಟು ಹೆಚ್ಚಳ ಕಂಡುಬಂದಿದೆ. ಇಂಥವರ ಸಂಖ್ಯೆ ಮಾರ್ಚ್‌ನಲ್ಲಿ 2.77 ಕೋಟಿ ಇತ್ತು. ಇದು ಏಪ್ರಿಲ್‌ಗೆ 3.39 ಕೋಟಿಗೆ ತಲುಪಿದೆ.

ಹಿಂದಿನ ವರ್ಷದ ಲಾಕ್‌ಡೌನ್‌ ನಂತರದಲ್ಲಿ ಬೆಳ್ಳಿ ರೇಖೆಯಂತೆ ಕಾಣಿಸಿದ್ದ ಕೃಷಿ ವಲಯದಲ್ಲಿಯೂ ಉದ್ಯೋಗ ಸಂಖ್ಯೆ ಕಡಿಮೆ ಆಗಿರುವುದನ್ನು ಸಿಎಂಐಇ ಗುರುತಿಸಿದೆ. ಮಾರ್ಚ್‌ನಲ್ಲಿ ದೇಶದ ಕೃಷಿ ವಲಯವು 12 ಕೋಟಿ ಜನರಿಗೆ ಉದ್ಯೋಗ ನೀಡಿತ್ತು. ಇದು ಏಪ್ರಿಲ್‌ನಲ್ಲಿ 11.4 ಕೋಟಿಗೆ ಇಳಿದಿದೆ.

2021–22ರಲ್ಲಿ ಕೂಡ ಉದ್ಯೋಗ ಮಾರುಕಟ್ಟೆಯ ಚಿತ್ರಣವು ಆಶಾದಾಯಕವಾಗಿ ಕಾಣಿಸುತ್ತಿಲ್ಲ. ಕೋವಿಡ್‌–19ರ ಎರಡನೆಯ ಅಲೆಯು ಆರ್ಥಿಕ ಪುನಶ್ಚೇತನಕ್ಕೆ ಅಡ್ಡಿಯಾಗಿ ನಿಂತಿದೆ. ಹೊಸ ಉದ್ಯೋಗಗಳನ್ನು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಸಬಲ್ಲ ಹೂಡಿಕೆಗಳು ಈ ವರ್ಷ ಆಗುವ ಸಾಧ್ಯತೆ ಕಡಿಮೆ. ಸರ್ಕಾರಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೆಗಾ) ಅಡಿಯಲ್ಲಿ ಉದ್ಯೋಗ ಕಲ್ಪಿಸಿ, ಬೆಂಬಲವಾಗಿ ನಿಲ್ಲಬೇಕಾಗಬಹುದು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು