ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕೆಜೋಳ, ಜೋಳಕ್ಕೆ ಬಂತು ಬೆಲೆ

ಬರದಿಂದಾಗಿ ಬೆಳೆ ಇಲ್ಲ; ರೈತರಿಗಿಲ್ಲ ಬೆಲೆ ಹೆಚ್ಚಳದ ಲಾಭ
Last Updated 22 ಮಾರ್ಚ್ 2019, 19:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ’ ಎಂಬಂತಾಗಿದೆ ಧಾರವಾಡ ಜಿಲ್ಲೆಯ ರೈತರ ಸ್ಥಿತಿ. ಇದೀಗ, ಬಿಳಿ ಜೋಳ ಹಾಗೂ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಬಂದಿದೆ. ಆದರೆ, ಜಿಲ್ಲೆ ಬರ ಪೀಡಿತವಾಗಿರುವುದರಿಂದ ರೈತರ ಜಮೀನುಗಳಲ್ಲಿ ಬೆಳೆ ಇಲ್ಲ.

ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹1,800 ರಿಂದ 2,000 ಧಾರಣೆ ಇದ್ದರೆ, ಪ್ರತಿ ಕ್ವಿಂಟಲ್‌ ಬಿಳಿ ಜೋಳಕ್ಕೆ ₹2,700 ರಿಂದ 3,000ರವರೆಗೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಕ್ವಿಂಟಲ್‌ಗೆ ಮೆಕ್ಕೆಜೋಳವು ₹950 ರಿಂದ ₹1,080, ಜೋಳವು ₹ 1,600 ರಿಂದ ₹ 2,000ರವರೆಗೆ ಮಾರಾಟವಾಗಿತ್ತು.

ಧಾರವಾಡ ಜಿಲ್ಲೆಯಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಹಾಗೂ 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿಳಿ ಜೋಳ ಬೆಳೆ ಇದೆ. ಬರದಿಂದಾಗಿ ಎರಡೂ ಬೆಳೆಗಳು ಬಹುತೇಕ ಒಣಗಿವೆ.

ಬೆಳೆ ನಷ್ಟ: ಮಳೆ ಸರಿಯಾಗಿ ಆಗದ ಕಾರಣ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರಿನಲ್ಲಿ ಕಡಲೆ, ಜೋಳ, ಮೆಕ್ಕೆಜೋಳ, ಮೆಣಸಿನಕಾಯಿ ಸೇರಿದಂತೆ ಹಲವಾರು ಬೆಳೆಗಳು ನಷ್ಟವಾಗಿವೆ. ಮುಂಗಾರಿನಲ್ಲಿ ₹ 56 ಕೋಟಿ ಹಾಗೂ ಹಿಂಗಾರಿನಲ್ಲಿ ₹83 ಕೋಟಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.

2018ರಲ್ಲಿ ಮೆಕ್ಕೆಜೋಳದ ದರ ಪ್ರತಿ ಕ್ವಿಂಟಲ್‌ಗೆ ₹ 900 ರಿಂದ 1,050 ಇತ್ತು. ಬೆಂಬಲ ಬೆಲೆಯಲ್ಲಿ ಖರೀದಿಸಿ ನೆರವಿಗೆ ಬರಬೇಕು ಎಂದು ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆ ಮಾಡಿದ್ದರು. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ₹1,400 ಬೆಂಬಲ ಬೆಲೆ ಘೋಷಿಸಿದೆ. ಆದರೆ, ಬೆಂಬಲ ಬೆಲೆಯಲ್ಲಿ ಖರೀದಿಸಿದರೆ ಅದನ್ನು ಸಾರ್ವಜನಿಕ ಆಹಾರ ವಿತರಣೆಗೆ (ಪಿಡಿಎಸ್‌) ಬಳಸಬೇಕು ಎಂಬ ಷರತ್ತನ್ನು ಕೇಂದ್ರ ವಿಧಿಸಿದೆ. ಪಡಿತರದಲ್ಲಿ ಜನರು ಮೆಕ್ಕೆಜೋಳ ಖರೀದಿಸುವುದಿಲ್ಲ. ಹೀಗಾಗಿ, ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಜ್ಯ ಸರ್ಕಾರವೂ ಮುಂದಾಗಲಿಲ್ಲ. ಕೊನೆಗೆ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಿದರು.

ಪ್ರತಿ ಕ್ವಿಂಟಲ್‌ಗೆ ₹2,000 ಆಸು–ಪಾಸಿನಲ್ಲಿರುತ್ತಿದ್ದ ಜೋಳದ ದರ ಈಗ ₹3,000ಕ್ಕೆ ಜಿಗಿದಿದೆ. ಆದರೆ, ಬೆಳೆ ಹಾಳಾಗಿರುವುದರಿಂದ ರೈತರ ಬಳಿ ಜೋಳವಿಲ್ಲ. ಬೆಲೆ ಇದ್ದರೂ ಲಾಭ ಪಡೆಯಲಾಗದ ಸ್ಥಿತಿ ಅವರದ್ದಾಗಿದೆ.

‘ಮಳೆ ಬರದೇ ಜೋಳದ ಬೆಳೆ ಹಾಳಾಗಿದೆ. ಬೆಳೆ ವಿಮೆ ಬರಬಹುದು ಎಂದು ಕಾಯುತ್ತಿದ್ದೇವೆ. ಜೋಳದ ಬೆಲೆ ನೋಡಿದರೆ ಹೊಟ್ಟೆ ಉರಿಯುತ್ತದೆ. ನಮ್ಮಲ್ಲಿ ಬೆಳೆ ಇಲ್ಲದಾಗಲೇ ಬೆಲೆ ಏರಿಸುತ್ತಾರೆ. ನಾವು ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಬಾಯಿಗೆ ಬಂದಂತೆ ಕೇಳುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಅರೆಕುರಹಟ್ಟಿಯ ರೈತ ಕೆ. ಸಂಗಪ್ಪ.

‘ನೀರಾವರಿ ಪ್ರದೇಶದಲ್ಲಿ ಮಾತ್ರ ಅಲ್ಪ– ಸ್ವಲ್ಪ ಬೆಳೆಯಲಾಗಿದೆ. ಉಳಿದೆಡೆ ಬೆಳೆದಿದ್ದ ಬೆಳೆ ಬಹುತೇಕ ಹಾಳಾಗಿದೆ. ಕೇಂದ್ರ ತಂಡಕ್ಕೂ ಬರ ಸ್ಥಿತಿ ತೋರಿಸಿದ್ದೇವೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್‌. ರುದ್ರೇಶಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT