ಶನಿವಾರ, ಜುಲೈ 31, 2021
27 °C

ಕರ್ಣಾಟಕ ಬ್ಯಾಂಕ್‌ಗೆ ₹196 ಕೋಟಿ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ಶೇ 11.95 ಅಭಿವೃದ್ಧಿಯೊಂದಿಗೆ ಸಾರ್ವಕಾಲಿಕ ದಾಖಲೆಯ ₹196.38 ಕೋಟಿ ನಿವ್ವಳ ಲಾಭ ಘೋಷಿಸಿದೆ. ಬ್ಯಾಂಕ್ ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹175.42 ಕೋಟಿ ಲಾಭ ದಾಖಲಿಸಿತ್ತು.

ನಗರದ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ವೆಬೆಕ್ಸ್ ಮೂಲಕ ಶುಕ್ರವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಮೊದಲ ತ್ರೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು.

ಬ್ಯಾಂಕಿನ ನಿರ್ವಹಣಾ ಲಾಭವು ಹಿಂದಿನ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ಇದ್ದ ₹350.01 ಕೋಟಿಯಿಂದ ₹677.04 ಕೋಟಿಗೆ ತಲುಪಿದ್ದು, ಶೇ 93.43 ಪ್ರಗತಿ ಸಾಧಿಸಿದೆ. ಬ್ಯಾಂಕಿನ ನಿವ್ವಳ ಬಡ್ಡಿ ಲಾಭವು ವರ್ಷದಿಂದ ವರ್ಷಕ್ಕೆ ಶೇ 8.19ರ ದರದಲ್ಲಿ ವೃದ್ಧಿಯಾಗಿದ್ದು, ₹535.12 ಕೋಟಿ ತಲುಪಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ ಅದು ₹494.59 ಕೋಟಿಯಾಗಿತ್ತು.

ಜೂನ್‌ 30 ಕ್ಕೆ ಬ್ಯಾಂಕಿನ ಒಟ್ಟು ವ್ಯವಹಾರವು ₹1,26,063.48 ಕೋಟಿ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ 3.89 ಬೆಳವಣಿಗೆಯನ್ನು ಸಾಧಿಸಿದೆ. ಬ್ಯಾಂಕಿನ ಠೇವಣಿಗಳ ಮೊತ್ತವು ₹68,520.72 ಕೋಟಿಯಿಂದ ₹71,853.98 ಕೋಟಿಗೆ ಏರಿದೆ. ಮುಂಗಡಗಳು ₹52,818.80 ಕೋಟಿಯಿಂದ ₹54,209.50 ಕೋಟಿಗೆ ತಲುಪಿದೆ.

ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿಗಳು (ಜಿಎನ್‌ಪಿಎ) ಇಳಿಕೆ ಕಂಡಿದ್ದು, ಶೇ 4.64 ರಷ್ಟಿದೆ. ಕಳೆದ ತ್ರೈಮಾಸಿಕ ಅಂತ್ಯಕ್ಕೆ ಅಂತ್ಯಕ್ಕೆ (ಮಾರ್ಚ್‌ 31) ಜಿಎನ್‌ಪಿಎ ಶೇ 4.82 ರಷ್ಟಿತ್ತು. ಬ್ಯಾಂಕಿನ ನಿವ್ವಳ ಅನುತ್ಪಾದಕ ಸೊತ್ತುಗಳು (ಎನ್‌ಎನ್‌ಪಿಎ) ಶೇ 3.01 ರಷ್ಟಕ್ಕೆ ಇಳಿಕೆಯಾಗಿದ್ದು, ಈ ಮೊದಲು ಅದು ಶೇ 3.08 ರಷ್ಟಿತ್ತು.

‘ಕೊರೊನಾದ ಈ ಸಂಕಷ್ಟ ಪರಿಸ್ಥಿತಿಯಲ್ಲೂ ಕರ್ಣಾಟಕ ಬ್ಯಾಂಕ್ ಅಪ್ರತಿಮ ಸಾಧನೆ ಮಾಡಿ, ₹196.38 ಕೋಟಿಗಳ ಸರ್ವಾಧಿಕ ನಿವ್ವಳ ಲಾಭವನ್ನು ಗಳಿಸಿದೆ. ಬ್ಯಾಂಕಿನ ಇತಿಹಾಸದಲ್ಲಿ ಇದೊಂದು ಸ್ಮರಣೀಯ ಸಾಧನೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು