ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೂರ್‌ ವೈಶ್ಯ ಬ್ಯಾಂಕ್‌ ಲಾಭದಲ್ಲಿ ಶೇ 34ರಷ್ಟು ಏರಿಕೆ

Published 21 ಮೇ 2024, 11:32 IST
Last Updated 21 ಮೇ 2024, 11:32 IST
ಅಕ್ಷರ ಗಾತ್ರ

ಬೆಂಗಳೂರು: ಕರೂರ್‌ ವೈಶ್ಯ ಬ್ಯಾಂಕ್‌ 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹456 ಕೋಟಿ ನಿವ್ವಳ ಲಾಭ ಗಳಿಸಿದೆ.

2022–23ರ ಇದೇ ಅವಧಿಯಲ್ಲಿ ₹338 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 34.9ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ವರಮಾನವು ₹739 ಕೋಟಿಯಿಂದ ₹867 ಕೋಟಿಗೆ ಹೆಚ್ಚಳವಾಗಿದೆ. ನಿವ್ವಳ ಬಡ್ಡಿ ಆದಾಯವು ಶೇ 11.5ರಷ್ಟು ಏರಿಕೆಯಾಗಿದ್ದು, ₹893 ಕೋಟಿಯಿಂದ ₹996 ಕೋಟಿಗೆ ಹೆಚ್ಚಳವಾಗಿದೆ. ಠೇವಣಿಗಳ ವೆಚ್ಚವು ಶೇ 4.61ರಿಂದ ಶೇ 5.36ಕ್ಕೆ ಏರಿಕೆಯಾಗಿದೆ. ಬಡ್ಡಿಯೇತರ ಆದಾಯವು ₹401 ಕೋಟಿಯಿಂದ ₹629 ಕೋಟಿಗೆ ಮುಟ್ಟಿದೆ. ನಿರ್ವಹಣಾ ವೆಚ್ಚವು ₹554 ಕೋಟಿಯಿಂದ ₹757 ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

2023–24ರ ಪೂರ್ಣ ಹಣಕಾಸು ವರ್ಷದಲ್ಲಿ ನಿವ್ವಳ ಲಾಭವು ಶೇ 45ರಷ್ಟು ಏರಿಕೆ ಕಂಡಿದ್ದು, ₹1,106 ಕೋಟಿಯಿಂದ ₹1,605 ಕೋಟಿಗೆ ಹೆಚ್ಚಳವಾಗಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್‌ಪಿಎ) 87 ಬಿಪಿಎಸ್‌ನಷ್ಟು ಸುಧಾರಿಸಿದೆ. ನಿವ್ವಳ ಎನ್‌ಪಿಎ ಶೇ 1ಕ್ಕಿಂತ ಕಡಿಮೆಯಿದೆ. ಮಾರ್ಚ್‌ ಅಂತ್ಯದ ವೇಳೆಗೆ ದೇಶದಲ್ಲಿ ಬ್ಯಾಂಕ್‌ನ 838 ಶಾಖೆಗಳು ಮತ್ತು 2,262 ಎಟಿಎಂಗಳನ್ನು ಹೊಂದಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಬ್ಯಾಲೆನ್ಸ್‌ ಶೀಟ್‌ ಗಾತ್ರವು ₹90,179 ಕೋಟಿಯಿಂದ ₹1.05 ಲಕ್ಷ ಕೋಟಿಗೆ ಏರಿಕೆಯಾಗಿದೆ. ವ್ಯವಹಾರವು ₹1.40 ಲಕ್ಷ ಕೋಟಿಯಿಂದ ₹1.63 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಬ್ಯಾಂಕ್‌ ₹1.50 ಲಕ್ಷ ಕೋಟಿ ವ್ಯವಹಾರದ ಐತಿಹಾಸಿಕ ಮೈಲಿಗಲ್ಲನ್ನು ದಾಟಿದೆ ಎಂದು ತಿಳಿಸಿದೆ.

‘ನಿರಂತರ ಕಾರ್ಯಕ್ಷಮತೆಯಿಂದಾಗಿ ಹಿಂದಿನ ಆರ್ಥಿಕ ವರ್ಷದಲ್ಲಿ ₹1,605 ಕೋಟಿ ಲಾಭ ಗಳಿಸಿದ್ದೇವೆ. ಸಾಲದ (ಕ್ರೆಡಿಟ್‌) ವೆಚ್ಚವು ಸುಧಾರಿಸಿದೆ. ಬ್ಯಾಂಕ್‌ ತನ್ನ ಸ್ಥಿರವಾದ ವಿಸ್ತರಣೆ, ಆಸ್ತಿ ಗುಣಮಟ್ಟ ಮತ್ತು ಲಾಭದಾಯಕತೆಯನ್ನು ಉಳಿಸಿಕೊಂಡಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಮೇಶ್‌ ಬಾಬು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT