ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಹಾಪುರಿ ಪಾದರಕ್ಷೆ ಕ್ಲಸ್ಟರ್‌ ಸ್ಥಾಪನೆಗೆ ಗ್ರಹಣ: ಚಪ್ಪಲಿ ತಯಾರಕರ ಸಂಕಷ್ಟ

ವಿಶೇಷ ವರದಿ
Published 13 ಡಿಸೆಂಬರ್ 2023, 20:58 IST
Last Updated 13 ಡಿಸೆಂಬರ್ 2023, 20:58 IST
ಅಕ್ಷರ ಗಾತ್ರ

ಬೆಳಗಾವಿ: ಗ್ರಾಹಕರ ಅಚ್ಚುಮೆಚ್ಚಿನ ‘ಕೊಲ್ಹಾಪುರಿ’ ಚಪ್ಪಲಿಗಳು ಜಿಲ್ಲೆಯಲ್ಲೇ ತಯಾರಾಗುತ್ತವೆ. ಆದರೆ, ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯವಿಲ್ಲದ ಕಾರಣ ಚರ್ಮ ಕುಶಲಕರ್ಮಿಗಳು ಇಂದಿಗೂ ಮಹಾರಾಷ್ಟ್ರದ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ.

ಜಿಲ್ಲೆಯ ಅಥಣಿ, ಕಾಗವಾಡ, ನಿಪ್ಪಾಣಿ, ರಾಯಬಾಗ ತಾಲ್ಲೂಕುಗಳಲ್ಲಿ ವಿವಿಧ ವಿನ್ಯಾಸ ಮತ್ತು ಗಾತ್ರಗಳ ಪಾದರಕ್ಷೆ ತಯಾರಾಗುತ್ತವೆ. ಸಾವಿರಾರು ಚರ್ಮ ಕುಶಲಕರ್ಮಿಗಳು ಈ ವೃತ್ತಿಯಲ್ಲಿದ್ದಾರೆ. ಸ್ಥಳೀಯವಾಗಿ ಮಾರಾಟಕ್ಕೆ ಉತ್ತಮ ಅವಕಾಶಗಳಿರದ ಕಾರಣ, ಕೊಲ್ಹಾಪುರದ ವ್ಯಾಪಾರಿಗಳನ್ನೇ ಆಶ್ರಯಿಸಿದ್ದಾರೆ. 

‘ನಾವು ತಯಾರಿಸುವ ಕೆಲ ವಿನ್ಯಾಸಗಳ ಪಾದರಕ್ಷೆಗಳು, ಖಾಸಗಿ ಕಂಪನಿಗಳ ಬ್ರ್ಯಾಂಡೆಡ್‌ ಉತ್ಪನ್ನಗಳಿಗೂ ಪೈಪೋಟಿ ನೀಡುತ್ತಿವೆ. ನಾವು ಕೊಲ್ಹಾಪುರ, ಮುಂಬೈನ ವ್ಯಾಪಾರಿಗಳಿಗೆ ₹250 ರಿಂದ ₹300ಕ್ಕೆ ಪಾದರಕ್ಷೆ ಮಾರಿದರೆ, ಅವರು ₹500 ರಿಂದ ₹1 ಸಾವಿರಕ್ಕೆ ಗ್ರಾಹಕರಿಗೆ ಮಾರಾಟ ಮಾಡಿ, ಹೆಚ್ಚಿನ ಲಾಭ ಗಳಿಸುತ್ತಾರೆ. ಇಡೀ ದಿನ ಬೆವರು ಹರಿಸಿ ದುಡಿವ ನಾವು ಹೆಚ್ಚಿನ ಆದಾಯದಿಂದ ವಂಚಿತರಾಗುತ್ತಿದ್ದೇವೆ’ ಎಂದು ಅಥಣಿ ಲಿಡ್ಕರ್ ಕ್ಲಸ್ಟರ್‌ನ ಕಾರ್ಯದರ್ಶಿ ಶಿವರಾಜ ಸೌದಾಗರ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಾಪನೆಯಾಗದ ಕ್ಲಸ್ಟರ್

ಗಡಿಭಾಗದ ಪಾದರಕ್ಷೆ ತಯಾರಕರನ್ನು ಒಂದೇ ಸೂರಿನಡಿ ಕರೆತಂದು ಸೂಕ್ತ ತರಬೇತಿ ನೀಡಿ, ಮಾರಾಟಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ 2021-22ನೇ ಸಾಲಿನ ಬಜೆಟ್‍ನಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ‘ಕೊಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್’ ಸ್ಥಾಪಿಸುವುದಾಗಿ ಘೋಷಿಸಿತ್ತು. ಇದರಿಂದ ಪಾದರಕ್ಷೆಗಳ ತಯಾರಿಕರಿಗೆ ಅನುಕೂಲ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ನಿಪ್ಪಾಣಿಯಲ್ಲಿ ಗುರುತಿಸಲಾದ ಜಾಗದ ವ್ಯಾಜ್ಯವಿದ್ದು, ಯೋಜನೆ ಇನ್ನೂ ಆರಂಭವಾಗಿಲ್ಲ.

‘ಹಲವು ವರ್ಷಗಳಿಂದ ನಾವು ಪಾದರಕ್ಷೆ ತಯಾರಿಸುತ್ತಿದ್ದೇವೆ. ಸ್ಥಳೀಯವಾಗಿ ಒಂದಿಷ್ಟು ಮಾರಾಟ ಮಾಡಿ, ಹೆಚ್ಚಿನ ಪಾದರಕ್ಷೆಗಳನ್ನು ಕೊಲ್ಹಾಪುರ, ಮುಂಬೈ, ಹೈದರಾಬಾದ್‌ಗೆ ಕಳುಹಿಸುತ್ತೇವೆ. ಕೋವಿಡ್ ನಂತರದ ಕಾಲಘಟ್ಟದಲ್ಲಿ ನಮ್ಮ ಪರಿಸ್ಥಿತಿಯೇ ಬಿಗಡಾಯಿಸಿದೆ’ ಎಂದು ಅಥಣಿ ತಾಲ್ಲೂಕಿನ ಮಧಬಾವಿಯ ಚರ್ಮ ಕುಶಲಕರ್ಮಿ ಮಯೂರ ಭಂಡಾರೆ ತಿಳಿಸಿದರು.

‘ಸಾಂಪ್ರದಾಯಿಕವಾಗಿ ಕೊಲ್ಹಾಪುರಿ ಪಾದರಕ್ಷೆ ಧರಿಸುವವರು, ಬಾಳಿಕೆಯ ಕಾರಣಕ್ಕೆ ಬೇರೆ ಬ್ರ್ಯಾಂಡ್‌ನ ಚಪ್ಪಲಿ ಇಷ್ಟಪಡುವುದಿಲ್ಲ. ದೇಶ, ವಿದೇಶದಲ್ಲಿ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಇದೆ. ನಾವು ತಯಾರಿಸುವ ಉತ್ಪನ್ನಗಳನ್ನು ‘ಬೆಳಗಾವಿ’ ಅಥವಾ ‘ಅಥಣಿ’ ಹೆಸರಿನಲ್ಲಿ ಬ್ರ್ಯಾಂಡಿಂಗ್‌ ಮಾಡಿ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳಲ್ಲಿ ಲಿಡ್ಕರ್‌ನ ಮಳಿಗೆ ತೆರೆದು ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಬೇಕು’ ಎಂದು ಶಿವರಾಜ ಸೌದಾಗರ ಆಗ್ರಹಿಸಿದರು.

‘ನಿಪ್ಪಾಣಿಯಲ್ಲಿ ಪಾದರಕ್ಷೆಗಳ ಕ್ಲಸ್ಟರ್‌ ಯೋಜನೆ ತ್ವರಿತವಾಗಿ ಆರಂಭಿಸಬೇಕು. ಹೊಸ ವಿನ್ಯಾಸಗಳ ಪಾದರಕ್ಷೆ ತಯಾರಿಕೆಗೆ ತರಬೇತಿ ಕೊಟ್ಟು, ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಕುರಿತು ಚರ್ಚಿಸಲು ಡಿಸೆಂಬರ್ 15ರಂದು ಸಮಾಜ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿಯಾಗಲು ತೀರ್ಮಾನಿಸಿದ್ದೇವೆ’ ಎಂದು ಬೆಳಗಾವಿ ಸಮಗಾರ ಸಮಾಜದ ಅಧ್ಯಕ್ಷ ರವಿ ಶಿಂಧೆ ತಿಳಿಸಿದರು.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಚರ್ಮ ಕುಶಲಕರ್ಮಿಗಳು ‘ಕೊಲ್ಹಾಪುರಿ’ ಚಪ್ಪಲಿ ತಯಾರಿಸುತ್ತಿರುವುದು
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಚರ್ಮ ಕುಶಲಕರ್ಮಿಗಳು ‘ಕೊಲ್ಹಾಪುರಿ’ ಚಪ್ಪಲಿ ತಯಾರಿಸುತ್ತಿರುವುದು

ನಿಪ್ಪಾಣಿಯಲ್ಲಿ ಗುರುತಿಸಿದ್ದ ಜಾಗದ ಸಮಸ್ಯೆಯಿಂದ ಕೊಲ್ಹಾಪುರಿ ಪಾದರಕ್ಷಗೆಳ ಕ್ಲಸ್ಟರ್‌ ಸ್ಥಾಪನೆ ಯೋಜನೆ ಆರಂಭಗೊಂಡಿಲ್ಲ. ಹಿರಿಯ ಅಧಿಕಾರಿಗಳು ನಿಪ್ಪಾಣಿಗೆ ಭೇಟಿ ನೀಡಿ ಮತ್ತೊಂದು ಸ್ಥಳ ಪರಿಶೀಲಿಸಲಿದ್ದಾರೆ -ಎ.ಎಸ್. ರುದ್ರೇಶಿ ಜಿಲ್ಲಾ ಸಂಯೋಜಕ ಲಿಡ್ಕರ್ ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT