ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವಿಮೆ ಹೆಚ್ಚುತ್ತಿರುವ ಕಾಳಜಿ

Last Updated 25 ಜೂನ್ 2019, 19:30 IST
ಅಕ್ಷರ ಗಾತ್ರ

ಕೊಡಗು, ಕೇರಳ ಮತ್ತು ಒಡಿಶಾದಲ್ಲಿ ನಡೆದ ಮಳೆ, ಚಂಡಮಾರುತದಂತಹ ನೈಸರ್ಗಿಕ ಪ್ರಕೋಪ ಸೇರಿದಂತೆ ಆರೋಗ್ಯ ಸಂಬಂಧಿ ಸಮಸ್ಯೆಗಳು, ಆಕಸ್ಮಿಕ ಅಪಘಾತಗಳು, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಆಗುವ ಬೆಳೆ ನಷ್ಟ, ಬೆಂಕಿ ಅನಾಹುತ, ಮನೆಗಳ್ಳತನ ಮುಂತಾದವು ಸಾಮಾನ್ಯ ವಿಮೆಯ ಅಗತ್ಯವನ್ನು ಪ್ರತಿಪಾದಿಸುತ್ತಿವೆ. ವಿಮೆಯು ಇಂತಹ ಆಕಸ್ಮಿಕಗಳಿಂದ ಜನರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುತ್ತವೆ. ಆದರೆ, ನಮ್ಮಲ್ಲಿ ಅನೇಕರಿಗೆ ವಿಮೆಯ ಅಗತ್ಯದ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಇದರಿಂದಾಗಿ ಆಕಸ್ಮಿಕ ಘಟನೆಗಳು ಮತ್ತು ನೈಸರ್ಗಿಕ ಪ್ರಕೋಪ ಸಂದರ್ಭಗಳಲ್ಲಿ ವಿಮೆ ಪರಿಹಾರ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಇಂತಹ ಪ್ರತಿಕೂಲತೆಗಳ ಮಧ್ಯೆಯೂ ವಿಮೆ ಉದ್ದಿಮೆಯು ವಾರ್ಷಿಕ ಶೇ 13ರಷ್ಟು ಬೆಳವಣಿಗೆ ದಾಖಲಿಸುತ್ತಿದೆ.

ಜನರ ಜೀವನ ಮಟ್ಟ ಸುಧಾರಣೆ, ಜಿಡಿಪಿ ತಲಾ ವರಮಾನ ಹೆಚ್ಚಳ, ಜೀವನ ಶೈಲಿಯಿಂದ ಬರುವ ಕಾಯಿಲೆಗಳು ಮುಂತಾದ ಕಾರಣಕ್ಕೆ ಜನರಲ್ಲಿ ಆರೋಗ್ಯ ವಿಮೆಯ ಬಗ್ಗೆ ಹೆಚ್ಚಿನ ಅರಿವು ಮೂಡುತ್ತಿದೆ. ಈ ವಹಿವಾಟು ವರ್ಷದಿಂದ ವರ್ಷಕ್ಕೆ ಶೇ 25ರಿಂದ ಶೇ 30ರಷ್ಟು ಬೆಳವಣಿಗೆ ದಾಖಲಿಸುತ್ತಿದೆ. ಜನರ ಜೀವನ ಶೈಲಿ ಬದಲಾದಂತೆ ಹಣಕಾಸು ಸಂಕಷ್ಟಗಳೂ ಹೆಚ್ಚಾಗುತ್ತಿವೆ. ಕ್ಯಾನ್ಸರ್‌, ಹೃದ್ರೋಗ ಮತ್ತಿತರ ಗಂಭೀರ ಸ್ವರೂಪದ ಅನಾರೋಗ್ಯಗಳು ಆರೋಗ್ಯ ವಿಮೆಯ ಮಹತ್ವವನ್ನು ಬಿಂಬಿಸುತ್ತಿವೆ. ವಾಹನಗಳ ವಿಮೆ ವಹಿವಾಟು ಕೂಡ ಶೇ 8ರಿಂದ ಶೇ 11ರಷ್ಟು ಏರಿಕೆ ಕಾಣುತ್ತಿದೆ.

30ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ವಿಮೆ ಸಂಸ್ಥೆಗಳು ಉದ್ದಿಮೆಯ ಪ್ರಗತಿಗೆ ಕೊಡುಗೆ ನೀಡುತ್ತಿವೆ. ಹೊಸ ಹೊಸ ಉತ್ಪನ್ನಗಳ ಮೂಲಕ ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ಇವು ಕಾರ್ಯಪ್ರವೃತ್ತವಾಗಿವೆ. ಈ ಸಂಸ್ಥೆಗಳ ವೈವಿಧ್ಯಮಯ ಉತ್ಪನ್ನಗಳಿಂದ ವಹಿವಾಟು ಹೆಚ್ಚುತ್ತಿದೆ. ಅವುಗಳ ಪೈಕಿ ಕೋಟಕ್‌ ಮಹೀಂದ್ರಾ ಜನರಲ್‌ ಇನ್ಶೂರನ್ಸ್‌ (ಕೆಎಂಜಿಐ) ಕೂಡ ಒಂದು.

ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಶೇ 100 ಪಾಲು ಬಂಡವಾಳ ಹೊಂದಿರುವ ‘ಕೆಎಂಜಿಐ’, ಕಾರ್ಯಾರಂಭ ಮಾಡಿರುವ ಮೂರು ವರ್ಷಗಳಲ್ಲಿ ತನ್ನ ವಹಿವಾಟನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಣೆ ಮಾಡಲು ಗಮನ ಕೇಂದ್ರೀಕರಿಸಿದೆ. ಹಿಂದಿನ ವರ್ಷ ಸಂಸ್ಥೆಯ ವಹಿವಾಟು ಶೇ 62ರಷ್ಟು ಬೆಳವಣಿಗೆ ಕಂಡಿತ್ತು. 2020ರ ವೇಳೆಗೆ ₹ 500 ಕೋಟಿ ಮೊತ್ತದ ವಹಿವಾಟು ನಡೆಸುವ ಮತ್ತು ಗ್ರಾಹಕರ ಸಂಖ್ಯೆಯನ್ನು 18 ಲಕ್ಷಕ್ಕೆ ಹೆಚ್ಚಿಸಲು ಗುರಿ ನಿಗದಿಪಡಿಸಿದೆ.

‘ಬಹುತೇಕ ವಿಮೆ ಸಂಸ್ಥೆಗಳು ಕಿರು ಹಣಕಾಸು ಸಂಸ್ಥೆಗಳು, ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌, ಅಗ್ಗದ ಗೃಹ ನಿರ್ಮಾಣ ಸಂಸ್ಥೆಗಳ ಮೂಲಕ ತಮ್ಮ ಗ್ರಾಹಕರ ನೆಲೆ ವಿಸ್ತರಿಸುತ್ತಿವೆ. ಸಾಲ ನೀಡುವುದರ ಜತೆಗೆ ವಿಮೆ ಉತ್ಪನ್ನಗಳನ್ನೂ ಮಾರಾಟ ಮಾಡುವುದು ಸುಲಭವಾಗಿದೆ. ಅದೇ ಬಗೆಯಲ್ಲಿ ‘ಕೆಎಂಜಿಐ’ ಕೂಡ ಗ್ರಾಮೀಣ ಪ್ರದೇಶದಲ್ಲಿ ತನ್ನ ವಹಿವಾಟು ವಿಸ್ತರಿಸುತ್ತಿದೆ. ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ 1,500 ಶಾಖೆಗಳ ಮೂಲಕವೂ ವಹಿವಾಟು ವೃದ್ಧಿಗೆ ಗಮನ ಹರಿಸಿದೆ. ಸಂಸ್ಥೆಯ ಅರ್ಧದಷ್ಟು ವಹಿವಾಟು ಈ ಮೂಲದಿಂದಲೇ ಬರುತ್ತದೆ’ ಎಂದು ಕೋಟಕ್‌ ಮಹೀಂದ್ರಾ ಜನರಲ್ ಇನ್ಶೂರನ್ಸ್‌ನ ಸಿಇಒ ಮಹೇಶ್‌ ಬಾಲಸುಬ್ರಮಣಿಯನ್‌ ಹೇಳುತ್ತಾರೆ.

‘ವಿಮೆ ವಹಿವಾಟು ವಿಸ್ತರಣೆಯಲ್ಲಿ ಡಿಜಿಟಲ್‌ ಕಾರ್ಯಕ್ರಮವೂ ನೆರವಾಗುತ್ತಿದೆ. ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಮೂಲಕವೂ ವಿಮೆ ಪಾಲಿಸಿಗಳನ್ನು ಈಗ ಸುಲಭವಾಗಿ ಮಾರಾಟ ಮಾಡಲು ಸಾಧ್ಯವಾಗುತ್ತಿದೆ. ಹೊಸ ದ್ವಿಚಕ್ರ ಮತ್ತು ಕಾರ್‌ ಖರೀದಿ ಸಂದರ್ಭದಲ್ಲಿಯೇ ಕ್ರಮವಾಗಿ 5 ವರ್ಷ ಮತ್ತು 3 ವರ್ಷಗಳ ಥರ್ಡ್‌ ಪಾರ್ಟಿ ವಿಮೆ ಖರೀದಿಸುವುದನ್ನು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎ) ಕಡ್ಡಾಯ ಮಾಡಿರುವುದು ಉದ್ದಿಮೆಯ ಬೆಳವಣಿಗೆಗೆ ನೆರವಾಗುತ್ತಿದೆ.

‘ಸಂಸ್ಥೆಯ ಒಟ್ಟಾರೆ ವಹಿವಾಟಿನಲ್ಲಿ ಕರ್ನಾಟಕದ ಪಾಲು ಶೇ 5 ರಿಂದ ಶೇ 10ರಷ್ಟಿದೆ. ವಾಹನಗಳ ವಿಮೆ ವಲಯದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿ ಇದೆ. ಸಾಮಾಜಿಕ ಹೊಣೆಗಾರಿಕೆಯಡಿ ಗ್ರಾಮೀಣ ಪ್ರದೇಶಕ್ಕೂ ಸೂಕ್ತ ಪ್ರಮಾಣದಲ್ಲಿ ವಹಿವಾಟು ವಿಸ್ತರಿಸಲು ಕ್ರಮ ಕೈಗೊಂಡಿದೆ. ವಹಿವಾಟಿನ ಡಿಜಿಟಲೀಕರಣಕ್ಕೂ ಸಂಸ್ಥೆ ಮುಂದಾಗಿದೆ. ಇದಕ್ಕಾಗಿ ಶಾಖೆ ಆರಂಭಿಸುವ ಅಗತ್ಯವೇ ಇಲ್ಲ. ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಜತೆಗಿನ ಕಾರ್ಪೊರೇಟ್‌ ಪಾಲುದಾರಿಕೆಯಡಿ ವಹಿವಾಟು ಗಮನಾರ್ಹ ವಿಸ್ತರಣೆ ಕಾಣುತ್ತಿದೆ. ದೇಶಿ ಸಾಮಾನ್ಯ ವಿಮೆಯ ವಹಿವಾಟು ಜಿಡಿಪಿಯ ಶೇ 0.9 ರಷ್ಟಿದೆ. ಇತರ ದೇಶಗಳಲ್ಲಿ ಈ ಪ್ರಮಾಣ ಶೇ 4 ಶೇ 7ರವರೆಗೆ ಇದೆ.

‘ವಿಮೆ ಪರಿಹಾರವನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಆದ್ಯತೆ ನೀಡಿದ್ದರೆ ಮಾತ್ರ ಹೊಸ ಗ್ರಾಹಕರು ಸಂಸ್ಥೆಯನ್ನು ಹುಡುಕಿಕೊಂಡು ಬರುತ್ತಾರೆ. ಇದೇ ಕಾರಣಕ್ಕೆ ಮೂರು ವರ್ಷಗಳಷ್ಟು ಹಳೆಯ ಸಂಸ್ಥೆಯ ಪ್ರಗತಿ ಗಮನಾರ್ಹವಾಗಿದೆ. ಕರ್ನಾಟಕ ಮಾರುಕಟ್ಟೆಯಲ್ಲಿ ಸಂಸ್ಥೆಯ ವಹಿವಾಟು ತ್ವರಿತ ಬೆಳವಣಿಗೆ ಕಾಣುತ್ತಿದೆ. ವಾಹನಗಳ ವಿಮೆ ವಹಿವಾಟು ತುಂಬ ಸವಾಲಿನಿಂದ ಕೂಡಿದೆ. ಹಿಂದಿನ ವರ್ಷ ಪ್ರೀಮಿಯಂ ಹೆಚ್ಚಳವು ಶೇ 62 ಮತ್ತು ಪಾಲಿಸಿಗಳ ಸಂಖ್ಯೆ ಶೇ 200 ಹೆಚ್ಚಳಗೊಂಡಿದೆ. ಆರೋಗ್ಯ ವಿಮೆಯ ಉತ್ಪನ್ನ ಎಲ್ಲೆಡೆ ಒಂದೇ ಆಗಿರುತ್ತದೆ. ಆದರೆ, ವಿಮೆ ಮೊತ್ತ ಮತ್ತು ಕಂತು ಭಿನ್ನವಾಗಿರುತ್ತದೆ. ಚಿಕಿತ್ಸಾ ವೆಚ್ಚ ನಗರದಿಂದ ನಗರಕ್ಕೆ ಭಿನ್ನವಾಗಿರುವುದೇ ಇದಕ್ಕೆ ಕಾರಣ’ ಎಂದೂ ಮಹೇಶ್‌ ಹೇಳುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT