ಮಂಗಳವಾರ, ಮೇ 11, 2021
27 °C

ಎಲ್‌ಐಸಿ: ವಾರದಲ್ಲಿ ಐದು ದಿನ ಕೆಲಸ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ನೌಕರರಿಗೆ ವಾರದಲ್ಲಿ ಐದು ದಿನ ಕೆಲಸ, ಎರಡು ದಿನ (ಶನಿವಾರ, ಭಾನುವಾರ) ರಜೆ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ. ಹೀಗೆ ಆದಲ್ಲಿ, ಗ್ರಾಹಕರು ವಾರದಲ್ಲಿ ಐದು ದಿನ ಮಾತ್ರ ಎಲ್‌ಐಸಿ ಕಚೇರಿಗಳಿಗೆ ತೆರಳಿ ಸೇವೆಗಳನ್ನು ಪಡೆಯುವ ಅವಕಾಶ ಇರುತ್ತದೆ.

‘ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ಜಾರಿಗೆ ತರಲು ಕೆಲವು ನಿಯಮಗಳನ್ನು ಪಾಲಿಸಬೇಕಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ನಿಯಮಗಳ ಅನ್ವಯ, ಇದರ ಬಗ್ಗೆ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಹಾಗೆ ಮಾಹಿತಿ ನೀಡಿದ ನಂತರವಷ್ಟೇ ಹೊಸ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆ ಇದೆ. ಸದ್ಯಕ್ಕೆ ಈಗಿರುವ ವ್ಯವಸ್ಥೆ ಮುಂದುವರಿಯಲಿದೆ’ ಎಂದು ಎಲ್‌ಐಸಿ ಮೂಲಗಳು ತಿಳಿಸಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಎಲ್‌ಐಸಿ ಷೇರುಗಳನ್ನು ಸಾರ್ವಜನಿಕರ ಖರೀದಿಗೆ ಮುಕ್ತಗೊಳಿಸುವ (ಐಪಿಒ) ಗುರಿ ಹೊಂದಿದೆ. ಸಾರ್ವಜನಿಕರಿಗೆ ಮಾರಾಟ ಮಾಡುವ ಷೇರುಗಳ ಪೈಕಿ ಶೇಕಡ 10ರಷ್ಟನ್ನು ವಿಮೆ ಹೊಂದಿರುವವರಿಗೆ ಮೀಸಲಿರಿಸಲಾಗುವುದು ಎಂದು ಕೂಡ ಕೇಂದ್ರ ಈಗಾಗಲೇ ಹೇಳಿದೆ.

ಎಲ್‌ಐಸಿಯಲ್ಲಿ ಇರುವ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ನೌಕರರಿಗೆ ‘ವಾರದಲ್ಲಿ ಐದು ದಿನ ಕೆಲಸ’ ವ್ಯವಸ್ಥೆಯ ಪ್ರಯೋಜನ ಸಿಗಲಿದೆ. ಕೆಲಸದ ದಿನಗಳ ವಿಚಾರದಲ್ಲಿ ಬದಲಾವಣೆ ಅಲ್ಲದೆ, ‘ನೌಕರರ ವೇತನದಲ್ಲಿ ಸರಿಸುಮಾರು ಶೇಕಡ 16ರಷ್ಟು ಹೆಚ್ಚಳಕ್ಕೂ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದೆ’ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.