ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅದಾನಿ‘ಯಲ್ಲಿ ಎಲ್‌ಐಸಿ ಹೂಡಿಕೆ ಮೌಲ್ಯ ವೃದ್ಧಿ

Published 25 ಮೇ 2023, 14:44 IST
Last Updated 25 ಮೇ 2023, 14:44 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಅದಾನಿ ಸಮೂಹದ ಏಳು ಕಂಪನಿಗಳಲ್ಲಿ ಮಾಡಿರುವ ಹೂಡಿಕೆಯ ಮೌಲ್ಯವು ಈಗ ₹ 44 ಸಾವಿರ ಕೋಟಿಗಿಂತ ಹೆಚ್ಚಾಗಿದೆ.

ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಅದಾನಿ ಸಮೂಹದ ವಿರುದ್ಧ ಕೆಲವು ಆರೋಪಗಳನ್ನು ಹೊರಿಸಿದ ನಂತರದಲ್ಲಿ, ಎಲ್‌ಐಸಿಯು ಸಮೂಹದ ಕಂಪನಿಗಳಲ್ಲಿ ಮಾಡಿದ್ದ ಹೂಡಿಕೆಯ ಮೌಲ್ಯವು ಕುಸಿದಿತ್ತು. ಈಗ ಅದಾನಿ ಸಮೂಹದ ಷೇರುಗಳ ಮೌಲ್ಯವು ಏರುಗತಿಯಲ್ಲಿ ಇರುವ ಕಾರಣ, ಎಲ್‌ಐಸಿಯ ಹೂಡಿಕೆಯ ಮೌಲ್ಯವೂ ಹೆಚ್ಚಾಗಿದೆ.

ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ತನ್ನ ಸಾಲವನ್ನು ಮರುಪಾವತಿ ಮಾಡುತ್ತಿದೆ, ಒಂದಿಷ್ಟು ಬಾಂಡ್‌ಗಳನ್ನು ಮರಳಿ ಖರೀದಿಸುತ್ತಿದೆ, ಸಮೂಹದ ಎರಡು ಪ್ರಮುಖ ಕಂಪನಿಗಳು ₹ 21 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಆಲೋಚನೆ ಹೊಂದಿವೆ.

ಅದಾನಿ ಸಮೂಹದ ಕಂಪನಿಗಳ ಷೇರುಮೌಲ್ಯವು ಕೃತಕವಾಗಿ ಏರಿಳಿಯುವಂತೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಾಕ್ಷ್ಯ ಲಭಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ತಜ್ಞರ ಸಮಿತಿಯು ಹೇಳಿದ ನಂತರದಲ್ಲಿ ಅದಾನಿ ಸಮೂಹದ ಷೇರುಗಳ ಮೌಲ್ಯ ಹೆಚ್ಚುತ್ತ ಸಾಗಿದೆ.

ಅದಾನಿ ಸಮೂಹದ ಕಂಪನಿಗಳಲ್ಲಿ ಎಲ್‌ಐಸಿ ಮಾಡಿರುವ ಹೂಡಿಕೆಯು ₹ 30,127 ಕೋಟಿ. ಇದು ಜನವರಿ 27ರ ಹೊತ್ತಿಗೆ ₹ 56,142 ಕೋಟಿಗೆ ತಲುಪಿತ್ತು. ಆದರೆ, ಹಿಂಡನ್‌ಬರ್ಗ್‌ ವರದಿಯ ನಂತರದಲ್ಲಿ ಸಮೂಹದ ಕಂಪನಿಗಳ ಷೇರುಮೌಲ್ಯ ಕುಸಿದ ಪರಿಣಾಮವಾಗಿ, ಎಲ್‌ಐಸಿ ಹೂಡಿಕೆಯ ಮೌಲ್ಯವು ಫೆಬ್ರುವರಿ 23ರ ಹೊತ್ತಿಗೆ ₹ 27 ಸಾವಿರ ಕೋಟಿಗೆ ತಲುಪಿತ್ತು.

ಏರಿಕೆ ಕಂಡ ಎಲ್‌ಐಸಿ
ಎಲ್‌ಐಸಿ ಷೇರುಮೌಲ್ಯವು, ಮಾರ್ಚ್ ತ್ರೈಮಾಸಿಕದ ಹಣಕಾಸು ಫಲಿತಾಂಶ ಪ್ರಕಟವಾದ ನಂತರದಲ್ಲಿ ಶೇಕಡ 1.6ರಷ್ಟು ಏರಿಕೆ ಕಂಡಿದೆ. ನಿಗಮದ ಮಾರ್ಚ್ ತ್ರೈಮಾಸಿಕದ ಲಾಭವು ಐದು ಪಟ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರವು ಹಿಂದಿನ ವರ್ಷ ಎಲ್‌ಐಸಿಯಲ್ಲಿ ತಾನು ಹೊಂದಿರುವ ಷೇರುಗಳಲ್ಲಿ ಶೇಕಡ 3.5ರಷ್ಟನ್ನು ಐಪಿಒ ಮೂಲಕ ಮಾರಾಟ ಮಾಡಿ, ₹ 20,557 ಕೋಟಿ ಬಂಡವಾಳ ಸಂಗ್ರಹಿಸಿದೆ. ಐಪಿಒ ಸಂದರ್ಭದಲ್ಲಿ ಪ್ರತಿ ಷೇರುಗಳನ್ನು ₹ 949ಕ್ಕೆ ನೀಡಲಾಗಿತ್ತು. ಆದರೆ, ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಿದಾಗಿನಿಂದ ಎಲ್‌ಐಸಿ ಷೇರುಗಳು ಅದಕ್ಕಿಂತ ಕಡಿಮೆ ಮಟ್ಟದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT