ಮಂಗಳವಾರ, ಅಕ್ಟೋಬರ್ 19, 2021
23 °C

ಭಾರತದಲ್ಲಿ ಹೂಡಿಕೆ ಹೆಚ್ಚಿಸಲು ಉತ್ಸುಕ: ಬೇನ್ ಕ್ಯಾಪಿಟಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಾಸ್ಟನ್: ಭಾರತದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲು ಎದುರು ನೋಡುತ್ತಿರುವುದಾಗಿ ಅಮೆರಿಕದ ಖಾಸಗಿ ಹೂಡಿಕೆ ಸಂಸ್ಥೆ ಬೇನ್ ಕ್ಯಾಪಿಟಲ್‌ನ ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಸಂಸ್ಥೆಯು, ಭಾರತದ ಕಂಪನಿಗಳಲ್ಲಿ ಈಗಾಗಲೇ ₹ 37,260 ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

ಹೂಡಿಕೆ ಮತ್ತು ಉದ್ಯಮ ಬೆಳವಣಿಗೆ ದೃಷ್ಟಿಯಿಂದ ಭಾರತ ಮತ್ತು ಅಮೆರಿಕಕ್ಕೆ ಮುಂದಿನ ದಶಕವು ಬಹಳ ಮಹತ್ವದ್ದು ಎಂದು ಸಂಸ್ಥೆಯ ಉನ್ನತ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಂಸ್ಥೆಯ ಸಹ ಅಧ್ಯಕ್ಷ ಸ್ಟೀಫನ್ ಪಲ್ಯೂಕ್ ಮತ್ತು ಸಹ ವ್ಯವಸ್ಥಾಪಕ ಪಾಲುದಾರ ಜಾನ್ ಕೊನಾಟನ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿದ್ದು, ಗುಜರಾತ್‌ನಲ್ಲಿ ಹಣಕಾಸು ಸೇವೆಗಳ ಕುರಿತು ಮಾತುಕತೆ ನಡೆಸಿದ್ದಾರೆ. ವಿಶ್ವಬ್ಯಾಂಕ್‌, ಐಎಂಎಫ್‌ ಮತ್ತು ಜಿ20 ಸಭೆಗಳಲ್ಲಿ ಭಾಗವಹಿಸುವ ಉದ್ದೇಶದಿಂದ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸದ್ಯ ಅಮೆರಿಕ ಪ್ರವಾಸದಲ್ಲಿದ್ದಾರೆ.

ಭಾರತದಲ್ಲಿ ಸ್ನೇಹಪರ ವ್ಯಾಪಾರ ವಾತಾವರಣವನ್ನು ಕೊನಾಟನ್ ಅವರು ಶ್ಲಾಘಿಸಿದರು. ಭಾರತದಲ್ಲಿ ಹೂಡಿಕೆಯ ಬಗ್ಗೆ ಅವರು ಉತ್ಸುಕರಾಗಿದ್ದಾರೆ ಎಂದು ಹಣಕಾಸು ಸಚಿವಾಲಯವು ತನ್ನ ಟ್ವೀಟ್‌ನಲ್ಲಿ ಹೇಳಿದೆ. ಗುಜರಾತಿನ ಗಿಫ್ಟ್ ಸಿಟಿಯಲ್ಲಿ ಮತ್ತು ಭಾರತದಲ್ಲಿ ಮೂಲಸೌಕರ್ಯ ವಲಯದಲ್ಲಿ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸುವ ಕುರಿತು ಸೀತಾರಾಮನ್ ಅವರು ಸಂಸ್ಥೆಯೊಂದಿಗೆ ಮಾತನಾಡಿದ್ದಾರೆ ಎಂದೂ ಟ್ವೀಟ್‌ನಲ್ಲಿ ತಿಳಿಸಿದೆ.

ಮಾರುಕಟ್ಟೆಗಳನ್ನು ಹೆಚ್ಚು ವ್ಯಾಪಾರ-ಸ್ನೇಹಿಯಾಗಿ ಮಾಡುವ ಪ್ರಕ್ರಿಯೆಯು ಭಾರತದಲ್ಲಿ ಈಗ ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ. ಇದು ವಿದೇಶಿ ನೇರ ಹೂಡಿಕೆ ಆಕರ್ಷಿಸಲು ಉತ್ತಮ ವಾತಾವರಣವನ್ನು ನೀಡಲಿದೆ ಎಂದು  ಸ್ಟೀಫನ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು