ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ಜಿಎಸ್‌ಟಿ: ಖರೀದಿದಾರರಿಗೆ ಅನುಕೂಲ: ಕ್ರೆಡಾಯ್‌

Last Updated 21 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ರಿಯಲ್‌ ಎಸ್ಟೇಟ್‌ ವಲಯಕ್ಕೆ ಸಂಬಂಧಿಸಿದ ಹೊಸ ಜಿಎಸ್‌ಟಿ ತೆರಿಗೆಗಳ ಸ್ವರೂಪದಲ್ಲಿ ಸ್ಪಷ್ಟತೆ ಇದೆ. ಹೆಚ್ಚು ಸರಳೀಕರಣಗೊಂಡಿದೆ’ ಎಂದು ಭಾರ­ತದ ರಿಯಲ್‌ ಎಸ್ಟೇಟ್‌ ನಿರ್ಮಾಣ­ಗಾ­ರರ ಸಂಘಗಳ ಒಕ್ಕೂಟದ (ಕ್ರೆಡಾಯ್‌) ಬೆಂಗಳೂರು ಘಟಕವು ಬಣ್ಣಿಸಿದೆ.

‘ವಸತಿ ಯೋಜನೆಗಳನ್ನು ಆರಂಭಿಸುವ ಮೊದಲೇ ತೆರಿಗೆ ಸ್ವರೂಪ ನಿರ್ಧಾರವಾಗಲಿದೆ. ಇದರಿಂದ ರಿಯಲ್ ಎಸ್ಟೇಟ್‌ ನಿರ್ಮಾಣಗಾರರ ರಿಟರ್ನ್‌ ಸಲ್ಲಿಕೆ, ಲಾಭ ಹಂಚಿಕೆಯ ಗೊಂದಲಗಳೂ ದೂರವಾಗಲಿವೆ. ಮಹಾನಗರಗಳು ಮತ್ತು ಎರಡು, ಮೂರನೇ ಹಂತದ ನಗರಗಳಲ್ಲಿನ ಅಗ್ಗದ ಮನೆಗಳ ವ್ಯಾಖ್ಯಾನ ಬದಲಾಗಿದೆ. ಈ ಎಲ್ಲ ಕಾರಣಗಳಿಂದ ಮನೆ ಖರೀದಿದಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ’ ಎಂದು ‘ಕ್ರೆಡಾಯ್’ ಬೆಂಗಳೂರಿನ ಉಪಾಧ್ಯಕ್ಷ ಸುರೇಶ್‌ ಹರಿ ಅವರು ಹೇಳುತ್ತಾರೆ.

‘ಬಜೆಟ್‌ನಲ್ಲಿನ ಉತ್ತೇಜನಾ ಪ್ರಸ್ತಾವಗಳು, ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ರೆಪೊ ದರ ಕಡಿತ ಮತ್ತು ಈಗ ಅಗ್ಗದ ಜಿಎಸ್‌ಟಿ ಫಲವಾಗಿ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯ ಚೇತರಿಕೆಗೆ ಬೇಕಾಗಿದ್ದ ಉತ್ತೇಜನಾ ಕೊಡುಗೆಗಳ ಪ್ರಕ್ರಿಯೆ ಪೂರ್ಣಗೊಂಡಂತೆ ಆಗಿದೆ. ವಸತಿ ಯೋಜನೆಗಳಿಗೆ ಬೇಡಿಕೆ ಹೆಚ್ಚಳಗೊಳ್ಳಲು ಮತ್ತು ಮಾರಾಟಕ್ಕೆ ಉತ್ತೇಜನ ನೀಡಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಿದಂತಾಗಿದೆ’ ಎನ್ನುವುದು ನೈಟ್‌ ಫ್ರ್ಯಾಂಕ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶಿಶಿರ್‌ ಬೈಜಲ್‌ ಅವರ
ಅಭಿಪ್ರಾಯವಾಗಿದೆ.

ಹೆಚ್ಚು ಪಾರದರ್ಶಕತೆ: ಜಿಎಸ್‌ಟಿ ದರ ಕಡಿತ ನಿರ್ಧಾರವು ವಸತಿ ಯೋಜನೆಗಳಿಗೆ ಬೇಡಿಕೆ ಹೆಚ್ಚಿಸಲಿದ್ದು, ಖರೀದಿದಾರರ ಪಾಲಿಗೆ ಹೆಚ್ಚು ಪಾರದರ್ಶಕತೆ ಒದಗಿಸಲಿದೆ ಎನ್ನುವುದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ನ (ಇಂಡ್‌–ರಾ) ಅಭಿಪ್ರಾಯವಾಗಿದೆ.

ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಇಲ್ಲದಿರುವುದಿಂದ ಮೂಲ ಬೆಲೆ ಸ್ಥಿರವಾಗಿರಲಿದೆ. ಮನೆ ಖರೀದಿಗೆ ಮಾಡಬಹುದಾದ ವೆಚ್ಚ ಕಡಿಮೆಯಾಗಲಿದೆ. ಇದರಿಂದ ನಿರ್ಮಾಣ ಹಂತದಲ್ಲಿ ಇರುವ ವಸತಿ ಯೋಜನೆಗಳಿಗೆ ಬೇಡಿಕೆ ಹೆಚ್ಚಲಿದೆ ಎಂದು ‘ಇಂಡ್‌–ರಾ’ ಸಂಸ್ಥೆ ವಿಶ್ಲೇಷಿಸಿದೆ.

ಜಿಎಸ್‌ಟಿ ಅಗ್ಗವಾಗಿರುವುದು ಮತ್ತು ‘ಐಟಿಸಿ’ ಇಲ್ಲದಿರುವುದರಿಂದ ಖರೀದಿದಾರರು ಪಾವತಿಸುವ ಒಟ್ಟಾರೆ ತೆರಿಗೆಯಲ್ಲಿ ಪಾರದರ್ಶಕತೆ ಕಂಡು ಬರಲಿದೆ. ಅಗ್ಗದ ಮನೆಗಳ ಮಾರಾಟಕ್ಕೆ ಸಂಬಂಧಿಸಿದಂತೆ ಗೃಹ ನಿರ್ಮಾಣ ಸಂಸ್ಥೆಗಳ ಸಾಲ ನೀಡಿಕೆ ಪ್ರಮಾಣವೂ ಹೆಚ್ಚಳಗೊಳ್ಳಲಿದೆ ಎಂದೂ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT