ಬುಧವಾರ, ಡಿಸೆಂಬರ್ 8, 2021
23 °C

ಮುಂದಿನ ವಾರ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಭಾರೀ ಹೆಚ್ಚಳ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಏರಿಕೆಯ ನಡುವೆ ದೇಶದ ಜನರಿಗೆ ಸದ್ಯದಲ್ಲೇ ಎಲ್‌ಪಿಜಿ ದರ ಏರಿಕೆಯ ಆಘಾತವೂ ಕಾದಿದೆ ಎಂದು ಪಿಟಿಐ ವರದಿ ಮಾಡಿದೆ. ಅಂತರರಾಷ್ಟ್ರೀಯ ದರ ಏರಿಕೆಯ ಪರಿಣಾಮ ಪ್ರತೀ ಸಿಲಿಂಡರ್ ಮೇಲಿನ ನಷ್ಟ ಹೆಚ್ಚಾಗಿದೆ ಎನ್ನಲಾಗಿದೆ. ಆದರೆ, ದರ ಹೆಚ್ಚಳವು ಸರ್ಕಾರದ ಅನುಮತಿಯ ಮೇಲೆ ಅವಲಂಬಿತವಾಗಿರುತ್ತದೆ. 

ಮತ್ತೆ ಎಲ್‌ಪಿಜಿ ದರ ಹೆಚ್ಚಳವಾದರೆ ಅದು ಈ ವರ್ಷದ ಐದನೇ ಹೆಚ್ಚಳವಾಗಲಿದೆ. ಅಕ್ಟೋಬರ್ 6 ರಂದು ಎಲ್‌ಪಿಜಿ ದರವು ಪ್ರತಿ ಸಿಲಿಂಡರ್‌ಗೆ ₹ 15 ರಷ್ಟು ಹೆಚ್ಚಳವಾಗಿತ್ತು. ಇದೂ ಸೇರಿ ಜುಲೈನಿಂದ 14.2 ಕೆಜಿ ಸಿಲಿಂಡರ್‌ಗೆ ₹ 90 ಹೆಚ್ಚಳವಾಗಿದೆ.

ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಚಿಲ್ಲರೆ ಮಾರಾಟದ ಬೆಲೆಯನ್ನು ವೆಚ್ಚದೊಂದಿಗೆ ಹೊಂದಿಸಲು ಅನುಮತಿಸಲಾಗಿಲ್ಲ ಮತ್ತು ಅಂತರವನ್ನು ಕಡಿಮೆ ಮಾಡಲು ಇದುವರೆಗೆ ಯಾವುದೇ ಸರ್ಕಾರಿ ಸಬ್ಸಿಡಿಯನ್ನು ಅನುಮೋದಿಸಲಾಗಿಲ್ಲ ಎನ್ನಲಾಗಿದೆ.

ಅಂತರರಾಷ್ಟ್ರೀಯ ಇಂಧನ ಬೆಲೆಗಳು ಬಹು ವರ್ಷದ ಗರಿಷ್ಠ ಮಟ್ಟಕ್ಕೆ ಏರಿದ ನಂತರ ಎಲ್‌ಪಿಜಿ ಮಾರಾಟದಲ್ಲಿನ ನಷ್ಟವು ಪ್ರತಿ ಸಿಲಿಂಡರ್‌ಗೆ ₹ 100 ಕ್ಕಿಂತ ಹೆಚ್ಚಿದೆ ಎಂದು ಅವರು ಹೇಳಿದರು.

ಸೌದಿಯ ಎಲ್‌ಪಿಜಿ ದರಗಳು ಈ ತಿಂಗಳು 60 ಪ್ರತಿಶತದಷ್ಟು ಜಿಗಿದಿದ್ದು, ಪ್ರತಿ ಟನ್‌ಗೆ 800 ಡಾಲರ್‌ನಷ್ಟಾಗಿದೆ. ಅಂತರರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 85.42 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

'ಎಲ್‌ಪಿಜಿ ಇನ್ನೂ ನಿಯಂತ್ರಿತ ಸರಕಾಗಿದೆ. ಆದ್ದರಿಂದ, ತಾಂತ್ರಿಕವಾಗಿ, ಸರ್ಕಾರವು ಚಿಲ್ಲರೆ ಮಾರಾಟದ ಬೆಲೆಯನ್ನು ನಿಯಂತ್ರಿಸಬಹುದು. ಆದರೆ, ಅವರು ಹಾಗೆ ಮಾಡಿದಾಗ ತೈಲ ಕಂಪನಿಗಳಿಗೆ ಆಗುವ ನಷ್ಟಕ್ಕೆ ಪರಿಹಾರ ನೀಡಬೇಕು’ ಎಂದು ಮೂಲಗಳು ತಿಳಿಸಿವೆ.

ಸರ್ಕಾರವು ಕಳೆದ ವರ್ಷ ಎಲ್‌ಪಿಜಿ ಮೇಲಿನ ಸಬ್ಸಿಡಿಗಳನ್ನುತೆಗೆದುಹಾಕಿತ್ತು. ಆದರೆ, ಪೆಟ್ರೋಲ್ ಮತ್ತು ಡೀಸೆಲ್‌ನಂತೆ, ಅದರ ಬೆಲೆ ನಿಯಂತ್ರಣವನ್ನು ತೆಗೆದುಹಾಕಲಾಗಿದೆ, ಸರ್ಕಾರವು LPG ದರಗಳ ನಿಯಂತ್ರಣವನ್ನು ಅಧಿಕೃತವಾಗಿ ಘೋಷಿಸಿಲ್ಲ.

ಕಳೆದ ವರ್ಷ ಸರ್ಕಾರವು ಎಲ್‌ಪಿಜಿ ಮೇಲಿನ ಸಬ್ಸಿಡಿಯನ್ನು ತೆಗೆದುಹಾಕಿತ್ತು. ‘ಇದುವರೆಗೆ, ವೆಚ್ಚ ಮತ್ತು ಚಿಲ್ಲರೆ ಬೆಲೆಯ ನಡುವಿನ ಅಂತರವು ಹೆಚ್ಚಾಗಿರುವುದರಿಂದ ಪರಿಹಾರ ಅಥವಾ ಸಬ್ಸಿಡಿಯನ್ನು ಮರುಸ್ಥಾಪಿಸುವ ಯಾವುದೇ ಸೂಚನೆಯಿಲ್ಲ’ ಎಂದು ಮೂಲಗಳು ತಿಳಿಸಿವೆ.

ಒಂದು ಪಕ್ಷ, ಸರ್ಕಾರವು ಸಬ್ಸಿಡಿಯನ್ನು ಭರಿಸಲು ಸಿದ್ಧವಿಲ್ಲದಿದ್ದರೆ, ಚಿಲ್ಲರೆ ಬೆಲೆಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ, ದೆಹಲಿ ಮತ್ತು ಮುಂಬೈನಲ್ಲಿ ಪ್ರತಿ ಅಡುಗೆ ಅನಿಲ ಸಿಲಿಂಡರ್ ಬೆಲೆಯು ₹899.50 ಮತ್ತು ಕೋಲ್ಕತ್ತಾದಲ್ಲಿ ₹ 926 ಆಗಿದೆ. ಬೆಂಗಳೂರಿನಲ್ಲಿ ₹ 902.50 ಆಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು