ಶನಿವಾರ, ಮೇ 15, 2021
26 °C

ಎಲ್‌ಪಿಜಿ ದರ ಮುಂದಿನ ತಿಂಗಳು ಇಳಿಕೆಯಾಗಬಹುದು: ಧರ್ಮೇಂದ್ರ ಪ್ರಧಾನ್‌ 

ಪಿಟಿಐ Updated:

ಅಕ್ಷರ ಗಾತ್ರ : | |

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌

ರಾಯ್‌ಪುರ: ಗೃಹ ಬಳಕೆ ಅಡುಗೆ ಅನಿಲ (ಎಲ್‌ಪಿಜಿ) ಬೆಲೆ ಮುಂದಿನ ತಿಂಗಳು ಕಡಿಮೆಯಾಗಬಹುದು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಗುರುವಾರ ಹೇಳಿದರು. 

ಛತ್ತೀಚ್‌ಗಢದಲ್ಲಿ ಎರಡು ದಿನಗಳ ಭೇಟಿಯಲ್ಲಿರುವ ಪೆಟ್ರೋಲ್‌, ನೈಸರ್ಗಿಕ ಅನಿಲ ಮತ್ತು ಸ್ಟೀಲ್‌ ಖಾತೆಗಳ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ಎಲ್‌ಪಿಜಿ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, 'ಎಲ್‌ಪಿಜಿ ಬೆಲೆ ನಿರಂತರವಾಗಿ ಏರುತ್ತಿದೆ ಎಂಬುದು ಸತ್ಯವಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದ ಕಾರಣ ಈ ತಿಂಗಳು ದರದಲ್ಲಿ ಹೆಚ್ಚಳ ಮಾಡಲಾಗಿದೆ. ಆದರೂ ಮುಂದಿನ ತಿಂಗಳು ಬೆಲೆ ಕಡಿಮೆಯಾಗುವ ಸೂಚನೆಗಳು ಕಂಡು ಬಂದಿವೆ' ಎಂದರು. 

ಚಳಿಗಾಲದಲ್ಲಿ ಎಲ್‌ಪಿಜಿ ಬಳಕೆ ಹೆಚ್ಚುತ್ತದೆ. ಇದರಿಂದಾಗಿ ಇಂಧನ ವಲಯದಲ್ಲಿ ಬೇಡಿಕೆ ಒತ್ತಡ ಸೃಷ್ಟಿಯಾಗುತ್ತದೆ. ಈ ತಿಂಗಳು ಬೆಲೆ ಏರಿಕೆಯಾಗಿದೆ, ಮುಂದಿನ ತಿಂಗಳು ಬೆಲೆ ಕಡಿಮೆಯಾಗುತ್ತದೆ ಎಂದು ಹೇಳಿದರು.  

ಅಡುಗೆ ಅನಿಲ ಎಲ್‌ಪಿಜಿ ಪ್ರತಿ ಸಿಲಿಂಡರ್‌ ಬೆಲೆ ಕಳೆದ ವಾರ ₹144.5ರಷ್ಟು ಹೆಚ್ಚಿಸಲಾಯಿತು. ಆದರೆ, ಗೃಹ ಬಳಕೆದಾರರಿಗೆ ಹೊರೆಯಾಗದಿರಲು ಸರ್ಕಾರ ಸಬ್ಸಿಡಿ ದುಪ್ಪಟ್ಟುಗೊಳಿಸಿತು. ಹಾಗಾಗಿ, ಸಬ್ಸಿಡಿ ಪಡೆಯುವವರಿಗೆ ಪ್ರತಿ ಸಿಲಿಂಡರ್‌ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. 

ಭಿಲಾಯಿ ಸ್ಟೀಲ್‌ ಪ್ಲಾಂಟ್‌ (ಬಿಎಸ್‌ಪಿ) ಹಾಗೂ ಅದಿರು ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ಧರ್ಮೇಂದ್ರ ಪ್ರಧಾನ್‌ ಭೇಟಿ ನೀಡಲಿದ್ದಾರೆ.

₹291.48 ಸಬ್ಸಿಡಿ

ದರ ಹೆಚ್ಚಳದ ಬಳಿಕ ಪ್ರತಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹714ರಿಂದ ₹858.50 ಆಗಿದೆ. ಪ್ರತಿ ಸಿಲಿಂಡರ್‌ಗೆ ಸರ್ಕಾರ ನೀಡುತ್ತಿದ್ದ ₹153.86 ಸಬ್ಸಿಡಿಯನ್ನು ₹291.48ಕ್ಕೆ ಏರಿಕೆ ಮಾಡಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಬ್ಸಿಡಿ ₹174.86 ರಿಂದ ₹312.48ಕ್ಕೆ ಹೆಚ್ಚಳ ಮಾಡಲಾಗಿದೆ. 

ಎಂದಿನಂತೆ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಪಡೆಯುವ ಗ್ರಾಹಕರ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಜಮೆಯಾಗಲಿದೆ. ಸಬ್ಸಿಡಿ ಅನ್ವಯವಾದ ನಂತರ ಸಾಮಾನ್ಯ ಬಳಕೆದಾರರಿಗೆ ಪ್ರತಿ ಸಿಲಿಂಡರ್‌ಗೆ ₹567.02 ಹಾಗೂ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ₹546.02 ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು