ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯ್ಯಾಸ್‌ ಪುನಶ್ಚೇತನಕ್ಕೆ ಚಾಲನೆ

ಎನ್‍ಸಿಎಲ್‍ಟಿಯ ಪರಿಹಾರ ವೃತ್ತಿಪರರಿಂದ ‘ಅಕಾಶಿಕಾ ಫುಡ್ಸ್’ ಆಯ್ಕೆ
Last Updated 16 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಸದಾನಂದ ಮಯ್ಯ ಅವರು ಪ್ರಾರಂಭಿಸಿದ್ದ ಮಯ್ಯಾಸ್ ಬೆವರೇಜಸ್ ಆ್ಯಂಡ್‌ ಫುಡ್ಸ್ ಪ್ರೈವೇಟ್‌ ಲಿಮಿಟೆಡ್‌ ಕಳೆದ ಒಂದು ವರ್ಷದಿಂದ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟದಿಂದ ಪಾರಾಗಲಿದೆ.

ಸಂಸ್ಥೆಯನ್ನು ಪುನಶ್ಚೇತನಗೊಳಿಸಲು, ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಮಂಡಳಿಯ (ಎನ್‍ಸಿಎಲ್‍ಟಿ) ಪರಿಹಾರ ವೃತ್ತಿಪರರು,ಮಯ್ಯಾಸ್‌ನ ಉದ್ಯೋಗಿಗಳು, ವಿತರಕರು ಮತ್ತು ವ್ಯಾಪಾರಿಗಳು ಸೇರಿಕೊಂಡು ರಚಿಸಿಕೊಂಡಿರುವ ಆರ್ಥಿಕ ಒಕ್ಕೂಟ ಅಕಾಶಿಕಾ ಫುಡ್ಸ್ ಅನ್ನು ಆಯ್ಕೆ ಮಾಡಿದ್ದಾರೆ.

ಕರ್ಣಾಟಕ ಬ್ಯಾಂಕ್‍ ನೇತೃತ್ವದಲ್ಲಿನ ಸಾಲಗಾರರ ಸಮಿತಿಯು, ಅಕಾಶಿಕಾ ಫುಡ್ಸ್ ಸಲ್ಲಿಸಿದ್ದ ಬಿಡ್ ಅನ್ನು ‘ಎನ್‍ಸಿಎಲ್‍ಟಿ’ ಅನುಮೋದನೆಗಾಗಿ ಶಿಫಾರಸು ಮಾಡಿದೆ. ಆಕಾಶಿಕಾ ಫುಡ್ಸ್‌, ಬಿಡ್‌ನಲ್ಲಿ ಯಶಸ್ವಿಯಾಗಿರುವುದನ್ನು ಖಾತರಿಪಡಿಸುವ ಆಶಯ ಪತ್ರ ನೀಡಲಾಗಿದೆ ಎಂದು ಪರಿಹಾರ ವೃತ್ತಿಪರರಾದ ಆಶೀಶ್ ಕನೋಡಿಯಾ ಹೇಳಿದ್ದಾರೆ.

‘ಮಯ್ಯಾಸ್‍ನ ಮಾಲೀಕತ್ವದ ಹೊಣೆಯನ್ನು ಅಕಾಶಿಕಾ ಫುಡ್ಸ್‌ಗೆ ಒಪ್ಪಿಸುವ ಬಗ್ಗೆ ‘ಎನ್‍ಸಿಎಲ್‍ಟಿ’ ಮುಂದಿನ ವಾರ ತನ್ನ ಅಂತಿಮ ತೀರ್ಮಾನ ಪ್ರಕಟಿಸಿದ ನಂತರ ಬಿಡ್‌ನ ವಿವರಗಳನ್ನು ಬಹಿರಂಗಪಡಿಸಲಾಗುವುದು’ ಎಂದು ಆಕಾಶಿಕಾ ಫುಡ್ಸ್‌ನ ನಿರ್ದೇಶಕ ಎಸ್. ನವ ಮೋಹನ್ ಕುಮಾರ್‌ ಅವರು ಹೇಳಿದ್ದಾರೆ.

ಅಕಾಶಿಕಾ ಫುಡ್ಸ್‌ ಕಂಪನಿಗೆ ಅಗತ್ಯ ಸಹಕಾರ ನೀಡಲು ಮಯ್ಯಾಸ್‌ನ ಸ್ಥಾಪಕ ಸದಾನಂದ ಮಯ್ಯ ಅವರು ಬದ್ಧರಾಗಿದ್ದಾರೆ ಎಂದು ಅವರ ಮಗ ಸುದರ್ಶನ ಮಯ್ಯ ಅವರು ತಿಳಿಸಿದ್ದಾರೆ.

ಸ್ವಾಧೀನ ಯತ್ನ: ಮಯ್ಯಾಸ್‌ ಸ್ವಾಧೀನಕ್ಕೆ ಎಂಟಿಆರ್‌, ಹಳದಿರಾಮ್ ಮತ್ತು ಅಕಾಶಿಕಾ ಫುಡ್ಸ್‌ ಮುಂದಾಗಿದ್ದವು. ಪ್ರವರ್ತಕ ಸದಾನಂದ ಮಯ್ಯ, ಮಯ್ಯಾಸ್‌ನ ಹೂಡಿಕೆ ಸಂಸ್ಥೆಯಲ್ಲಿ ಒಂದಾಗಿರುವ ಪೀಪುಲ್‌ ಕ್ಯಾಪಿಟಲ್‌ ಮತ್ತು ಸಂಜೀವ್‌ ಗೋಯಂಕಾದ ಗಿಲ್ಟ್‌ಫ್ರೀ ಇಂಡಸ್ಟ್ರೀಸ್‌ ಕೂಡ ಆರಂಭಿಕ ಬಿಡ್‌ ಸಲ್ಲಿಸಿದ್ದವು. ಆದರೆ, ಪರಿಹಾರ ಯೋಜನೆ ಸಲ್ಲಿಸುವ ಅಂತಿಮ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದವು.

ಆರ್ಥಿಕ ಮುಗ್ಗಟ್ಟಿಗೆ ಕಾರಣ

ಖಾಸಗಿ ಬಂಡವಾಳ ಹೂಡಿಕೆ ಸಂಸ್ಥೆ ಜತೆಗಿನ ಸಂಘರ್ಷದ ಕಾರಣಕ್ಕೆ ಸಂಸ್ಥೆಯು 2018ರಲ್ಲಿ ತನ್ನ 100 ಹೆಚ್ಚು ಬಗೆಯ ತಿನಿಸುಗಳ ತಯಾರಿಕಾ ಚಟುವಟಿಕೆಯನ್ನು ಕೆಲ ದಿನಗಳವರೆಗೆ ಸ್ಥಗಿತಗೊಳಿಸಿತ್ತು.

ಆದರೆ, ಸಂಸ್ಥೆಯ ಉದ್ಯೋಗಿಗಳು, ವಿತರಕರು ಮತ್ತು ವ್ಯಾಪಾರಿಗಳು ಅಕಾಶಿಕಾ ಫುಡ್ಸ್ ಹೆಸರಿನಲ್ಲಿ ಆರ್ಥಿಕ ಒಕ್ಕೂಟ ರಚಿಸಿಕೊಂಡು ಕೆಲವೇ ದಿನಗಳಲ್ಲಿ ತಯಾರಿಕಾ ಚಟುವಟಿಕೆಗೆ ಮರು ಚಾಲನೆ ನೀಡಿದ್ದರು.

ಸ್ವಾಧೀನ ಯತ್ನ: ಸಂಸ್ಥೆಯಲ್ಲಿ ಪೀಪುಲ್‌ ಕ್ಯಾಪಿಟಲ್‌ ಶೇ 30, ಅಸೆಂಟ್‌ ಕ್ಯಾಪಿಟಲ್‌ ಶೇ 30ರಷ್ಟು ಮತ್ತು ಪ್ರವರ್ತಕ ಸದಾನಂದ ಮಯ್ಯ ಅವರುಶೇ 40 ಪಾಲು ಬಂಡವಾಳ ಹೊಂದಿದ್ದರು. ಪೀಪುಲ್‌ ಕ್ಯಾಪಿಟಲ್‌, ತನ್ನ ‍ಪಾಲು ಬಂಡವಾಳ ಹೆಚ್ಚಿಸಿಕೊಂಡು, ಪ್ರವರ್ತಕರನ್ನು ಮೂಲೆಗುಂಪುಮಾಡಿ ಸಂಸ್ಥೆಯನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಳ್ಳಲುಮುಂದಾಗಿತ್ತು.

ಈ ಉದ್ದೇಶ ಸಾಧಿಸಲು ವಾಮಮಾರ್ಗ ಅನುಸರಿಸಿತ್ತು. ಸಂಸ್ಥೆಯ ಹಣಕಾಸು ಪರಿಸ್ಥಿತಿ ಬಿಗಡಾಯಿಸಿದೆ ಎಂದೂ ಗುಲ್ಲೆಬ್ಬಿಸಿತ್ತು. ಸಂಸ್ಥೆಯನ್ನು ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡಲು ‘ಅಕಾಶಿಕಾ ಫುಡ್ಸ್‌’ ರಂಗ ಪ್ರವೇಶ ಮಾಡುತ್ತಿದ್ದಂತೆ ಸಂಸ್ಥೆ ನೇಮಿಸಿದ್ದ ನಿರ್ದೇಶಕರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ದಿವಾಳಿ ಸಂಹಿತೆಯಡಿ (ಐಬಿಸಿ) ವಿವಾದವನ್ನು ‘ಎನ್‍ಸಿಎಲ್‍ಟಿ’ಗೆ ಶಿಫಾರಸು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT