ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌: ಷೇರುಪೇಟೆ ಸ್ವಾಗತ

ಹೆಚ್ಚಾದ ಖರೀದಿ ಉತ್ಸಾಹ: ವಾಹನ, ಎಫ್‌ಎಂಸಿಜಿ ಷೇರುಗಳಿಗೆ ಬೇಡಿಕೆ
Last Updated 1 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಮುಂಬೈ: ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್‌ನಲ್ಲಿ ಜನಪ್ರಿಯ ಕ್ರಮಗಳನ್ನು ಘೋಷಿಸಿರುವುದಕ್ಕೆ ಷೇರುಪೇಟೆಯು ಸಕಾರಾತ್ಮಕವಾಗಿ ಸ್ಪಂದಿಸಿದೆ.

ಬಜೆಟ್‌ ಪ್ರಸ್ತಾವಗಳು ಪೇಟೆಯ ನಿರೀಕ್ಷೆಗಿಂತ ಉತ್ತಮವಾಗಿರುವುದರಿಂದ ಖರೀದಿ ಉತ್ಸಾಹ ಹೆಚ್ಚಿತು. ಕೃಷಿ ಕ್ಷೇತ್ರದ ಕೊಡುಗೆ ಮತ್ತು ಆದಾಯ ತೆರಿಗೆ ರಿಯಾಯ್ತಿಗಳು ಆರ್ಥಿಕ ಶಿಸ್ತಿನ ಮೇಲೆ ಬೀರಲಿರುವ ಪರಿಣಾಮಗಳ ಬಗ್ಗೆ ಕೆಲ ಹೂಡಿಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಇದರ ಹೊರತಾಗಿಯೂ ಪ್ರಮುಖ ಷೇರುಗಳು ಗಮನಾರ್ಹ ಗಳಿಕೆ ಕಂಡವು. ವಾಹನ ಮತ್ತು ಎಫ್‌ಎಂಸಿಜಿ ಷೇರುಗಳು ಏರಿಕೆ ದಾಖಲಿಸಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 213ಅಂಶಗಳಷ್ಟು ಏರಿಕೆ ಕಂಡು 36,469 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 62 ಅಂಶ ಹೆಚ್ಚಳಗೊಂಡು 10,893 ಅಂಶಗಳಿಗೆ ಏರಿಕೆಯಾಯಿತು.

ಲೋಕಸಭೆಯಲ್ಲಿ ಬಜೆಟ್‌ ಮಂಡನೆಯಾಗುವ ಸಂದರ್ಭದಲ್ಲಿ ಸೂಚ್ಯಂಕವು 500ಕ್ಕೂ ಹೆಚ್ಚಿನ ಅಂಶಗಳಿಗೆ ಏರಿಕೆ ಕಂಡಿತ್ತು. ಮಧ್ಯಾಹ್ನದ ವಹಿವಾಟಿನಲ್ಲಿ ಕುಸಿತ ಕಂಡರೂ ಅಂತಿಮವಾಗಿ ಚೇತರಿಕೆ ದಾಖಲಿಸಿತು.

ಆರ್ಥಿಕತೆಗೆ ಚೇತರಿಕೆ: ಉದ್ಯಮ
ಮಧ್ಯಂತರ ಬಜೆಟ್‌ನಲ್ಲಿನ ಕೊಡುಗೆಗಳು ಜನರ ಬಳಿ ವೆಚ್ಚ ಮಾಡಬಹುದಾದ ಆದಾಯ ಹೆಚ್ಚಿಸಲಿವೆ. ಇದರಿಂದ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಳಗೊಂಡು ದೇಶಿ ಆರ್ಥಿಕತೆಯ ಬೆಳವಣಿಗೆಗೆ ಉತ್ತೇಜನ ದೊರೆಯಲಿದೆ ಎಂದು ಉದ್ಯಮ ವಲಯ ಪ್ರತಿಕ್ರಿಯಿಸಿದೆ.

ರೈತರು, ಮಧ್ಯಮ ವರ್ಗದವರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸಂಬಂಧಿಸಿದ ಉದಾರ ಕೊಡುಗೆಗಳು ಸ್ವಾಗತಾರ್ಹವಾಗಿವೆ. ಇವುಗಳು ಆರ್ಥಿಕತೆಯನ್ನು ಸಂಕಷ್ಟದ ಅಪಾಯಕ್ಕೆ ದೂಡುವುದಿಲ್ಲ ಎಂದು ಪ್ರಮುಖ ಉದ್ಯಮಿಗಳಾದ ಗೌತಮ್‌ ಅದಾನಿ, ಆನಂದ ಮಹೀಂದ್ರಾ, ‘ಐಟಿಸಿ’ಯ ವ್ಯವಸ್ಥಾಪಕ ನಿರ್ದೇಶಕ ಸಂಜೀವ್‌ ಪುರಿ ಮತ್ತು ವಾಲ್‌ಮಾರ್ಟ್ ಇಂಡಿಯಾದ ಸಿಇಒ ಕೆ. ಅಯ್ಯರ್‌ ಪ್ರತಿಕ್ರಿಯಿಸಿದ್ದಾರೆ.

‘ಮಧ್ಯಮ ವರ್ಗದ ಜನತೆ, ಸಣ್ಣ ವರ್ತಕರು ಮತ್ತು ರೈತರು ಆರ್ಥಿಕ ಬೆಳವಣಿಗೆಯ ಜೀವನಾಡಿಗಳಾಗಿದ್ದಾರೆ. ಮಧ್ಯಂತರ ಬಜೆಟ್‌, ಲಕ್ಷಾಂತರ ಜನರ ಕನಸುಗಳಿಗೆ ಜೀವ ತುಂಬಿದೆ’ ಎಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್‌ ಅದಾನಿ ಟ್ವೀಟ್‌ ಮಾಡಿದ್ದಾರೆ.

‘ಆರ್ಥಿಕತೆಯಲ್ಲಿ ಬೇಡಿಕೆ ಉತ್ತೇಜಿಸಲು ಮತ್ತು ಬೆಳವಣಿಗೆ ದರಕ್ಕೆ ಚೇತರಿಕೆ ನೀಡುವ ಸರಿಯಾದ ದಿಸೆಯಲ್ಲಿ ಮಧ್ಯಂತರ ಬಜೆಟ್‌ ಸಾಗಿದೆ’ ಎಂದು ಸಿಐಐ ಮಹಾ ನಿರ್ದೇಶಕ ಚಂದ್ರಜೀತ್‌ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT