ಬುಧವಾರ, ಫೆಬ್ರವರಿ 19, 2020
30 °C
ವಾರದ ವಹಿವಾಟು ಸಕಾರಾತ್ಮಕ ಅಂತ್ಯ: ಬಿಎಸ್‌ಇ 1,406 ಅಂಶ ಏರಿಕೆ

ಸಂಪತ್ತು ₹6 ಲಕ್ಷ ಕೋಟಿ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಗೂಳಿ ಓಟ ಜೋರಾಗಿದ್ದು, ಹೂಡಿಕೆದಾರರ ಸಂಪತ್ತು ಸಹ ವೃದ್ಧಿಯಾಗುತ್ತಿದೆ.

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹6 ಲಕ್ಷ ಕೋಟಿಗಳಷ್ಟು ವೃದ್ಧಿಯಾಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹153.28 ಲಕ್ಷ ಕೋಟಿಗಳಿಂದ ₹159.28 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಫೆಬ್ರುವರಿ 1ರಿಂದ 7ರವರೆಗೆ ನಡೆದ ವಹಿವಾಟಿನಲ್ಲಿ ಸೂಚ್ಯಂಕಗಳು ಸಾಕಷ್ಟು ಏರಿಳಿತ ಕಂಡವು. 

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಒಂದು ವಾರದಲ್ಲಿ 1,406 ಅಂಶಗಳ ಜಿಗಿತ ಕಂಡು 41,141 ಅಂಶಗಳಿಗೆ ತಲುಪಿದೆ.

ಶನಿವಾರ ಬಜೆಟ್‌ ಮಂಡನೆ ಇದ್ದಿದ್ದರಿಂದ ಷೇರುಪೇಟೆ ವಹಿವಾಟು ನಡೆಯಿತು. ಆದರೆ, ದೀರ್ಘಾವಧಿಯ ಬಂಡವಾಳ ಗಳಿಕೆ ಮೇಲಿನ ತೆರಿಗೆ ಕೈಬಿಡುವ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಇಲ್ಲದಿರುವುದರಿಂದ ಸೂಚ್ಯಂಕ 988 ಅಂಶಗಳ ಭಾರಿ ಕುಸಿತ ಕಂಡಿತ್ತು.

ಚೀನಾದ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಕ್ರಮ ಹಾಗೂ ಜನವರಿ ತಿಂಗಳ ತಯಾರಿಕೆ ಮತ್ತು ಸೇವಾ ವಲಯದ ಚಟುವಟಿಕೆಗಳಲ್ಲಿ ಚೇತರಿಕೆ ಕಂಡಿದ್ದರಿಂದ ಮತ್ತೆ ಸಕಾರಾತ್ಮಕ ವಹಿವಾಟಿಗೆ ಮರಳಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಪ್ಟಿ 436 ಅಂಶ ಏರಿಕೆ ಕಂಡಿದ್ದು, 12,098 ಅಂಶಗಳಿಗೆ ತಲುಪಿದೆ.

‘ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆ ಸಕಾರಾತ್ಮಕವಾಗಿದೆ. ನಗದು ಲಭ್ಯತೆ ಹೆಚ್ಚಾಗಲು ಆರ್‌ಬಿಐ ಕೈಗೊಂಡಿರುವ ಕ್ರಮಗಳಿಂದಾಗಿ ಮಧ್ಯಮಾವಧಿಗೆ ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಲಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಅಭಿಪ್ರಾಯ ಪಟ್ಟಿದ್ದಾರೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 8 ಪೈಸೆ ಇಳಿಕೆಯಾಗಿ ಶುಕ್ರವಾರ ಒಂದು ಡಾಲರ್‌ಗೆ 71.40ಕ್ಕೆ ತಲುಪಿದೆ.

ವಿದೇಶಿ ಹೂಡಿಕೆ: ವಾರದ ವಹಿವಾಟಿನಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹1,760 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೆ, ₹615 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಇದರಿಂದಾಗಿ ಷೇರುಪೇಟೆಯಿಂದ ಒಟ್ಟಾರೆ ₹1,145 ಕೋಟಿ ಬಂಡವಾಳ ಹೊರ ಹೋಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು