ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ವಿಲೀನ: ಗಡುವು ಅನುಮಾನ

Last Updated 23 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಮುಂಬೈ : ಈ ವರ್ಷದ ಏಪ್ರಿಲ್‌ 1ರ ಒಳಗಾಗಿ ಸರ್ಕಾರಿ ಸ್ವಾಮ್ಯದ 10 ಬ್ಯಾಂಕ್‌ಗಳನ್ನು ನಾಲ್ಕು ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ವಿಲೀನಕ್ಕೆ ಹಲವು ನಿಯಂತ್ರಣ ಸಂಸ್ಥೆಗಳ ಅನುಮತಿ ದೊರೆಯಬೇಕಿದೆ. ಉದ್ದೇಶೀತ ಮಹಾ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟವು ಗಡುವು ನಿಗದಿಪಡಿಸಿದೆಯಾದರೂ ಷೇರು ಹಂಚಿಕೆ, ಷೇರುದಾರರ ಅನುಮೋದನೆ ಮತ್ತು ಬ್ಯಾಂಕ್‌ಗಳ ನಿಯಂತ್ರಣಕ್ಕೆ ಸಂಬಂಧಿಸಿದ ಒಪ್ಪಿಗೆಗಳು ಸಿಗಲು ಇನ್ನೂ ಕನಿಷ್ಠ 30–45 ದಿನಗಳು ಬೇಕಾಗಲಿವೆ.

ಮುಂದಿನ 3ರಿಂದ 5 ವರ್ಷಗಳವರೆಗಿನ ಹಣಕಾಸು ಯೋಜನೆಗಳ ವಿವರ ನೀಡುವಂತೆ‌ಪ್ರಧಾನಿ ಕಚೇರಿಯು ಈ ಬ್ಯಾಂಕ್‌ಗಳಿಗೆ ಕೇಳಿದೆ. ವಸೂಲಾಗದ ಸಾಲ (ಎನ್‌ಪಿಎ), ಬಂಡವಾಳದ ಅಗತ್ಯ, ಸಾಲ ನೀಡಿಕೆಯ ಪ್ರಗತಿ ಮತ್ತು ಉಳಿತಾಯ ಖಾತೆಗಳ ವೆಚ್ಚದ ವಿವರಗಳನ್ನೂ ನೀಡುವಂತೆ ಸೂಚನೆ ನೀಡಿದೆ.

ನಿಯಂತ್ರಣ ಸಂಸ್ಥೆಗಳ ಅನುಮತಿಯಲ್ಲದೆ, ವಿಲೀನ ಯೋಜನೆಗೆ ಸಂಸತ್‌ ಸದಸ್ಯರ ಅನುಮತಿ ಪಡೆಯಲು 30 ದಿನಗಳವರೆಗೆ ಕಾಯಬೇಕಾಗುತ್ತದೆ. ಬಜೆಟ್‌ ಅಧಿವೇಶನದ ಎರಡನೇ ಭಾಗವು ಮಾರ್ಚ್‌ 2ರಿಂದ ಆರಂಭವಾಗಲಿದೆ.

ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಂಡರೆ, ಮುಂದಿನ ಹಣಕಾಸು ವರ್ಷದಿಂದ (ಏಪ್ರಿಲ್‌ 1) ವಿಲೀನಗೊಂಡ ಬ್ಯಾಂಕ್‌ಗಳು ಕಾರ್ಯಾಚರಣೆ ನಡೆಸುವುದು ವಾಸ್ತವಕ್ಕೆ ದೂರವಾದ ಸಂಗತಿಯಾಗಿದೆ.

ಮಹಾ ವಿಲೀನದಿಂದ ಕೆಲವು ತಿಂಗಳುಗಳವರೆಗೆ ಬ್ಯಾಂಕಿಂಗ್‌ ವ್ಯವಸ್ಥೆಗೆ ಭಾರಿ ಪ್ರಮಾಣದಲ್ಲಿ ಅಡಚಣೆ ಉಂಟಾಗಲಿದೆ. ಸಾಲ ನೀಡಿಕೆ ಮೇಲೆ ದುಷ್ಪರಿಣಾಮ ಬೀರಲಿದೆ.

‘ವಿಜಯ ಬ್ಯಾಂಕ್‌, ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್‌ ಆಫ್‌ ಬರೋಡಾದಲ್ಲಿ ವಿಲೀನಗೊಳಿಸಿ 10 ತಿಂಗಳು ಕಳೆದಿವೆ. ಹೀಗಿದ್ದರೂ ಈ ಬ್ಯಾಂಕ್‌ಗಳ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಸಂಯೋಜಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಲೇ ಇದೆ. ಇದರ ಜತೆಗೆ ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಮಸ್ಯೆಗಳು ವಹಿವಾಟು ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರುತ್ತಲೇ ಇವೆ’ ಎಂದೂ ಅಧಿಕಾರಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT