ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್‌ ಚಟುವಟಿಕೆಗೆ ಜೀವ

ಬೆಂಗಳೂರಿಗೆ ಮರಳಲು ಕಾರ್ಮಿಕರ ಒಲವು: ಕ್ರೆಡಾಯ್‌
Last Updated 10 ಜೂನ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಿಯಲ್ ಎಸ್ಟೇಟ್‌ ವಲಯದಲ್ಲಿ ಲಾಕ್‌ಡೌನ್‌ ನಂತರ ನಿರ್ಮಾಣ ಚಟುವಟಿಕೆಗಳು ಕ್ರಮೇಣ ಗರಿಗೆದರುತ್ತಿದ್ದು, ಸ್ವಂತ ರಾಜ್ಯಕ್ಕೆ ತೆರಳಿರುವ ಕಾರ್ಮಿಕರು ಬೆಂಗಳೂರಿಗೆ ಮರಳುವುದನ್ನು ಎದುರು ನೋಡುತ್ತಿದ್ದಾರೆ ಎಂದು ಭಾರತೀಯ ರಿಯಲ್ ಎಸ್ಟೇಟ್‌ ನಿರ್ಮಾಣಗಾರರ ಸಂಘಗಳ ಒಕ್ಕೂಟದ (ಕ್ರೆಡಾಯ್‌) ಕರ್ನಾಟಕ ಘಟಕ ತಿಳಿಸಿದೆ.‌

‘ಬೆಂಗಳೂರಿಗೆ ಮರಳಲು ಇಚ್ಛಿಸುವವರನ್ನು ಬರಮಾಡಿಕೊಳ್ಳಲುನಿರ್ಮಾಣ ಸಂಸ್ಥೆಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಾರ್ಮಿಕರಿಗೆ ಅಗತ್ಯವಾದ ಬೆಂಬಲ ನೀಡಲಿವೆ. ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಕಾರ್ಮಿಕರ ಆರೋಗ್ಯ ಮತ್ತು ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೈರ್ಮಲ್ಯ ಕಾಯ್ದುಕೊಳ್ಳಲು ಗರಿಷ್ಠ ಆದ್ಯತೆ ನೀಡಲಾಗುವುದು. ಕ್ರೆಡಾಯ್‌ನ ಅನೇಕ ಸದಸ್ಯರು ವಲಸಿಗರನ್ನು ಮರಳಿ ಕರೆ ತರಲು ಕಾರ್ಮಿಕ ಸಮುದಾಯ ಮತ್ತು ಗುತ್ತಿಗೆದಾರರನ್ನು ಸಂಪರ್ಕಿಸುತ್ತಿದ್ದಾರೆ’ ಎಂದು ‘ಕ್ರೆಡಾಯ್‌’ನ ರಾಜ್ಯ ಘಟಕದ ಅಧ್ಯಕ್ಷ ಕಿಶೋರ್‌ ಜೈನ್‌ ಅವರು ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ರಾಜ್ಯ ಸರ್ಕಾರವು ಕ್ವಾರಂಟೈನ್‌ ಪ್ರಕ್ರಿಯೆಯನ್ನು ಸರಳಗೊಳಿಸಿದರೆ ವಲಸಿಗರು ನಗರಕ್ಕೆ ಮರಳಿ ಜೀವನೋಪಾಯ ಕಂಡುಕೊಳ್ಳಲು ಹೆಚ್ಚಿನ ಉತ್ಸುಕತೆ ತೋರಿಸಬಹುದು. ಸದ್ಯಕ್ಕೆ ಸ್ಥಗಿತಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲು ನಿರ್ಮಾಣ ಕಂಪನಿಗಳೂ ಉತ್ಸಾಹ ತೋರಿಸುತ್ತಿವೆ. ಲಾಕ್‌ಡೌನ್‌ಗೆ ಹೋಲಿಸಿದರೆ ಸದ್ಯಕ್ಕೆ ಪರಿಸ್ಥಿತಿಯು ಸುಧಾರಿಸುತ್ತಿದೆ. ನಿರ್ಮಾಣಗಾರರು, ಕಾರ್ಮಿಕರು ಮತ್ತು ಮನೆ ಖರೀದಿದಾರರಿಗೂ ಇದು ಪ್ರಯೋಜನಕಾರಿಯಾಗಿರಲಿದೆ‘ ಎಂದು ಹೇಳಿದ್ದಾರೆ.

‘ಬಿಹಾರ, ಒಡಿಶಾ ಮತ್ತಿತರ ರಾಜ್ಯಗಳಿಗೆ ಮರಳಿದವರಿಗೆ ಸ್ಥಳೀಯವಾಗಿ ‘ಮನರೇಗಾ’ ಉದ್ಯೋಗ ಖಾತರಿ ಯೋಜನೆಯು ಕೆಲಮಟ್ಟಿಗೆ ಆಸರೆಯಾಗಿರುವುದು ನಿಜ. ದಿನಕ್ಕೆ ₹ 265 ಕೂಲಿಯು ಬದುಕಿಗೆ ಆಸರೆಯಾದರೂ, ಕುಟುಂಬದ ಇತರ ಅಗತ್ಯಗಳನ್ನೆಲ್ಲ ಒದಗಿಸಲು ಅದರಿಂದ ಸಾಧ್ಯವಾಗದು. ಎರಡು ಮತ್ತು ಮೂರನೇ ಹಂತದ ‍ಪಟ್ಟಣಗಳಲ್ಲಿ ಉದ್ಯೋಗ ಅವಕಾಶಗಳು ಒದಗುವುದಿಲ್ಲ. ಭೂರಹಿತ ಕೃಷಿ ಕಾರ್ಮಿಕರಿಗೆ ರಿಯಲ್‌ ಎಸ್ಟೇಟ್‌ ವಲಯವು ಅತಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ.

‘ನಗರದಲ್ಲಿನ ನಿರ್ಮಾಣ ಕ್ಷೇತ್ರದ ಎಲ್ಲ ಸಂಸ್ಥೆಗಳು ತಮ್ಮ ಯೋಜನೆಗಳಿಗೆ ಚಾಲನೆ ನೀಡಿದ್ದರೂ ಶೇ 30 ರಿಂದ ಶೇ 40ರಷ್ಟು ಕಾರ್ಮಿಕರ ಕೊರತೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ. ಮಳೆಗಾಲ ಕಾಲಿಟ್ಟಿರುವುದರಿಂದ ನಿರ್ಮಾಣ ಚಟುವಟಿಕೆಗಳು ನಿಧಾನಗೊಳ್ಳಲಿವೆ. ಮಳೆಗಾಲ ಮುಗಿಯುವ ವೇಳೆಗೆ ಕಾರ್ಮಿಕರ ಮರು ವಲಸೆ ವೇಗ ಪಡೆಯಬಹುದು. ದಸರಾ, ದೀಪಾವಳಿ ವೇಳೆಗೆ ನಿರ್ಮಾಣ ಚಟುವಟಿಕೆಗಳಿಗೆ ಮೊದಲಿನ ವೇಗ ದೊರೆಯಲಿದೆ‘ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

ನಷ್ಟದ ಅಂದಾಜು: ಕೋವಿಡ್‌ ಹೊಡೆತಕ್ಕೆ ನಲುಗಿರುವ ಉದ್ಯಮದ ನಷ್ಟದ ಅಂದಾಜು ಮಾಡಲು ಅವಸರದ ತೀರ್ಮಾನಕ್ಕೆ ಬರುವಂತಿಲ್ಲ. ಹಣಕಾಸು ಮತ್ತು ಬೇಡಿಕೆ ಕುಸಿತದ ನಷ್ಟದ ವರದಿ ನೀಡಲು ಯಂಗ್‌ ಆ್ಯಂಡ್‌ ಅರ್ನೆಸ್ಟ್‌ ಕಂಪನಿಗೆ ಕೇಳಿಕೊಳ್ಳಲಾಗಿದೆ. ವರದಿ ಬಂದ ನಂತರವೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದೂ ಅವರು ಹೇಳಿದ್ದಾರೆ.

**

5 ಕೋಟಿ: ದೇಶದ ರಿಯಲ್‌ ಎಸ್ಟೇಟ್‌ ವಲಯದಲ್ಲಿನ ಉದ್ಯೋಗ ಅವಕಾಶ
18 ಲಕ್ಷ: ರಾಜ್ಯದಲ್ಲಿ ಲಭ್ಯ ಇರುವ ಅವಕಾಶಗಳು
7.20 ಲಕ್ಷ: ಬೆಂಗಳೂರಿನಲ್ಲಿನ ಅವಕಾಶಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT