ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಪಿಎಫ್‌ನಿಂದ ಎನ್‌ಪಿಎಸ್‌ಗೆ ಹಣ ವರ್ಗಾವಣೆ: ಇಲ್ಲಿದೆ ಮಾಹಿತಿ...

Last Updated 12 ಜುಲೈ 2020, 10:25 IST
ಅಕ್ಷರ ಗಾತ್ರ

ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (ಇಪಿಎಫ್‌) ಹೆಚ್ಚು ಲಾಭಾಂಶ ಬರುತ್ತಿಲ್ಲ ಎನ್ನುವವರಿಗೆ ಇಪಿಎಫ್‌ ಖಾತೆಯಲ್ಲಿರುವ ಹಣವನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (ಎನ್‌ಪಿಎಸ್) ವರ್ಗಾಯಿಸಲು ಅವಕಾಶವಿದೆ. ಕೊಂಚ ರಿಸ್ಕ್ ಜತೆ ಲಾಭಾಂಶ ಬಯಸುವವರಿಗೆ ಈ ಆಯ್ಕೆ ಸೂಕ್ತ. ಮೊದಲು ಎನ್‌ಪಿಎಸ್ ಸರ್ಕಾರಿ ನೌಕರರಿಗೆ ಸೀಮಿತವಾಗಿತ್ತು. 2009 ರಲ್ಲಿ ಎನ್‌ಪಿಎಸ್ ಎಲ್ಲರಿಗೂ ಮುಕ್ತವಾಯಿತು. 2016-17 ನೇ ಸಾಲಿನ ಬಜೆಟ್‌ನಲ್ಲಿಯೇ ಇಪಿಎಫ್‌‌ನಿಂದ ಎನ್‌ಪಿಎಸ್‌ಗೆ ಹಣ ವರ್ಗಾವಣೆಗೆ ಅನುಮತಿ ನೀಡಲಾಗಿದೆ. ಇಪಿಎಫ್‌‌ನಿಂದ ಎನ್‌ಪಿಎಸ್‌ಗೆ ಹಣ ವರ್ಗಾವಣೆ ಹೇಗೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಇಪಿಎಫ್‌ನಿಂದ ಎನ್‌ಪಿಎಸ್‌ಗೆ ಹಣ ವರ್ಗಾವಣೆ ಹೇಗೆ?

1. ಎನ್‌ಪಿಎಸ್‌ ಸೇವೆ ಒದಗಿಸುತ್ತಿರುವ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಅಂದರೆ ಪಾಯಿಂಟ್ ಆಫ್ ಪ್ರೆಸೆನ್ಸ್ ಅಥವಾ npstrust.org.in ಅಂತರ್ಜಾಲ ತಾಣದ ಮೂಲಕ ಎನ್‌ಪಿಎಸ್‌ ಖಾತೆ ಆರಂಭಿಸಬೇಕು.

2. ಎನ್‌ಪಿಎಸ್‌ ಖಾತೆ ಆರಂಭಿಸಿದ ಮೇಲೆ ಇಪಿಎಫ್‌ ಹಣವನ್ನು ಎನ್‌ಪಿಎಸ್‌ಗೆ ವರ್ಗಾಯಿಸುವಂತೆ ಉದ್ಯೋಗದಾತ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕು.

3. ಉದ್ಯೋಗದಾತ ಸಂಸ್ಥೆಯವರು ಅದನ್ನು ಪರಿಶೀಲಿಸಿ ಇಪಿಎಫ್‌ನ ನೋಡಲ್ ಶಾಖೆಗೆ ಕಳುಹಿಸುತ್ತಾರೆ.

4. ವಿವರಗಳು ಸಲ್ಲಿಕೆಯಾದ ಬಳಿಕ ಇಪಿಎಫ್‌ನಲ್ಲಿರುವ ಹಣ ಎನ್‌ಪಿಎಸ್‌ಗೆ ವರ್ಗಾವಣೆಯಾಗುವ ಬಗ್ಗೆ ಮಾಹಿತಿ ಲಭಿಸುತ್ತದೆ. ಈ ಬಗ್ಗೆ ಉದ್ಯೋಗದಾತರಿಗೆ ದೃಢೀಕರಣ ಪತ್ರವೂ ಬರುತ್ತದೆ.

5. ಇಪಿಎಫ್‌‌ ಖಾತೆದಾರರಿಗೆ ಚೆಕ್‌/ಡಿಡಿ ಬರುತ್ತದೆ. ಅಲ್ಲದೇ ಇಪಿಎಫ್‌‌ನಿಂದ ಪತ್ರವೂ ಬರುತ್ತದೆ. ಇದನ್ನು ಎನ್‌ಪಿಎಸ್ ಅಥವಾ ಪಾಯಿಂಟ್ ಆಪ್ ಪ್ರೆಸೆನ್ಸ್ ನೋಡಲ್‌ ಅಧಿಕಾರಿಗೆ ಸಲ್ಲಿಸಬೇಕು.

6. ಪಿಎಫ್‌ ನಿಧಿಯಿಂದ ಎನ್‌ಪಿಎಸ್‌ಗೆ ಹಣ ವರ್ಗಾವಣೆಯಾದಾಗ, ನಿಮ್ಮ ಎನ್‌ಪಿಎಸ್ ಖಾತೆ ಅಪ್‌ಡೇಟ್‌ ಆಗುತ್ತದೆ.

ಎನ್‌ಪಿಎಸ್‌ ಹೂಡಿಕೆ ಅನುಕೂಲಗಳು

• ಇಪಿಎಫ್‌ಗೆ ಹೋಲಿಕೆ ಮಾಡಿದಾಗ ಎನ್‌ಪಿಎಸ್‌ನಲ್ಲಿ ಹೆಚ್ಚು ಲಾಭ ಸಿಗುತ್ತದೆ. ಆದರೆ, ಎನ್‌ಪಿಎಸ್‌ನಲ್ಲಿ ಒಂದಿಷ್ಟು ಹೂಡಿಕೆ ರಿಸ್ಕ್ ಇದ್ದೇ ಇರುತ್ತದೆ. ಪ್ರಸ್ತುತ ಇಪಿಎಫ್‌ ಶೇ 8.5 ರ ಬಡ್ಡಿ ಲಾಭ ನೀಡುತ್ತಿದ್ದರೆ, ಎನ್‌ಪಿಎಸ್‌ ಶೇ 9 ರಿಂದ 12 ರಷ್ಟು ಲಾಭಾಂಶ ನೀಡುತ್ತಿದೆ.
• ಇದರಿಂದ ಎನ್‌ಪಿಎಸ್‌ ಖಾತೆದಾರ ನಿವೃತ್ತಿಗೆ ದೊಡ್ಡ ಮೊತ್ತದ ಹಣ ಹೊಂದಿಸಲು ಅನುಕೂಲವಾಗುವುದಲ್ಲದೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ₹ 1.5 ಲಕ್ಷದವರೆಗೆ ಮತ್ತು ಸೆಕ್ಷನ್ 80 ಸಿಸಿಡಿ(1ಬಿ) ಅಡಿಯಲ್ಲಿ ₹ 50 ಸಾವಿರದ ವರೆಗೆ ತೆರಿಗೆ ಲಾಭ ಪಡೆಯಬಹುದು.
• ಇಲ್ಲಿ ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನಿಮ್ಮ ಹೂಡಿಕೆಯನ್ನು ನಿರ್ವಹಿಸುವುದರಿಂದ ಹಣದುಬ್ಬರ ಮೀರಿ ಲಾಭಾಂಶ ಗಳಿಸಲು ಸಾಧ್ಯವಾಗುತ್ತದೆ.

ಈ ಸಂಗತಿ ಗಮನಿಸಿ

• ಲಾಭಾಂಶ ಕಡಿಮೆ ಸಿಕ್ಕರೂ ಪರವಾಗಿಲ್ಲ, ಆದರೆ ಹೂಡಿಕೆ ಮೊತ್ತ ಸುರಕ್ಷಿತವಾಗಿರಬೇಕು ಎನ್ನುವವರು ಇಪಿಎಫ್‌ನಿಂದ ಎನ್‌ಪಿಎಸ್‌ಗೆ ಹಣ ವರ್ಗಾವಣೆ ಮಾಡದಿರುವುದೇ ಸೂಕ್ತ. ಎನ್‌ಪಿಎಸ್‌ನಲ್ಲಿ, ಇಪಿಎಫ್‌ನಂತೆ ಹೂಡಿಕೆಗೆ ಸಂಪೂರ್ಣ ಖಾತರಿ ಇರದಿರುವುದೇ ಇದಕ್ಕೆ ಕಾರಣ.
• ಇಪಿಎಫ್‌ನಲ್ಲಿ ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ಹಣ ಪಡೆಯಲು ಸಾಧ್ಯವಾಗುತ್ತದೆ. ಉದ್ಯೋಗಿಯು ಕೆಲಸ ತ್ಯಜಿಸಿದ 2 ತಿಂಗಳಲ್ಲಿ ಪಿಎಫ್ ಹಣವನ್ನು ಸಂಪೂರ್ಣವಾಗಿ ಹಿಂದೆ ಪಡೆಯಬಹುದು. ಆದರೆ ಎನ್‌ಪಿಎಸ್‌ ನಲ್ಲಿ 60 ವರ್ಷ ಮೇಲ್ಪಟ್ಟ ವ್ಯಕ್ತಿ ಹೂಡಿಕೆ ಮೊತ್ತದ ಶೇ 60 ರಷ್ಟು ಹಣವನ್ನು ಮಾತ್ರ ಹಿಂದೆ ಪಡೆಯಬಹುದು. ಇನ್ನುಳಿದ ಶೇ 40 ರಷ್ಟು ಹಣ ಮಾಸಿಕ ಪಿಂಚಣಿಗೆ ಮೀಸಲಿರುತ್ತದೆ. ಕೆಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಎನ್‌ಪಿಎಸ್‌ನಲ್ಲಿ ಶೇ 25 ರಷ್ಟು ಹಣ ಹಿಂಪಡೆಯಲು ಅವಕಾಶವಿದೆ.

• 5 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದಲ್ಲಿ ಇಪಿಎಫ್‌ ಹಣವನ್ನು ತೆರಿಗೆ ರಹಿತವಾಗಿ ಹಿಂಪಡೆಯಬಹುದು. ಆದರೆ ಎನ್‌ಪಿಎಸ್‌ ಹೂಡಿಕೆಯ ಶೇ 40 ರಷ್ಟು ಹಣ ಮಾತ್ರ ತೆರಿಗೆ ರಹಿತ.

(ಲೇಖಕ, ‘ಇಂಡಿಯನ್‌ಮನಿಡಾಟ್‌ಕಾಂ’ನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

8.5 %: ಇಪಿಎಫ್‌ ಬಡ್ಡಿ

9 ರಿಂದ 12 %:ಎನ್‌ಪಿಎಸ್‌ ಲಾಭಾಂಶ

ಅನಿಶ್ಚಿತತೆ ಮಧ್ಯೆ ಸತತ ಗಳಿಕೆ

ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಮಧ್ಯೆ ಸತತ ನಾಲ್ಕನೇ ವಾರ ಮಾರುಕಟ್ಟೆ ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡು ಬಂದಿವೆ. ಭಾರತ- ಚೀನಾ ಗಡಿ ಬಿಕ್ಕಟ್ಟು ತಣ್ಣಗಾಗುವ ಮುನ್ಸೂಚನೆ, ಕೋವಿಡ್‌ಗೆ ಲಸಿಕೆ ನಿಟ್ಟಿನಲ್ಲಿ ಆಗುತ್ತಿರುವ ಬೆಳವಣಿಗೆಗಳು ಸೇರಿ ಹಲವು ಸಂಗತಿಗಳು ಸೂಚ್ಯಂಕಗಳ ಏರಿಕೆಗೆ ಕಾರಣವಾಗಿವೆ.

36,594 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಶೇ 1.6 ರಷ್ಟು ಏರಿಕೆ ಕಂಡಿದೆ. 10,768 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.5 ರಷ್ಟು ಜಿಗಿದಿದೆ. ಸೆನ್ಸೆಕ್ಸ್ ಮಿಡ್ ಕ್ಯಾಪ್ ಶೇ 0.8 ಮತ್ತು ಸ್ಮಾಲ್ ಕ್ಯಾಪ್ ಶೇ 1.6 ರಷ್ಟು ಏರಿಕೆಯಾಗಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ಸೂಚ್ಯಂಕ ಶೇ 3.5 ರಷ್ಟು ಗಳಿಕೆಯೊಂದಿಗೆ ಮುಂಚೂಣಿಯಲ್ಲಿದೆ. ಬ್ಯಾಂಕ್ ಮತ್ತು ಮಾಹಿತಿ ತಂತ್ರಜ್ಞಾನ ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡುಬಂದಿವೆ.

ಬಿಎಸ್‌ಸಿ ಮಿಡ್ ಕ್ಯಾಪ್‌ನಲ್ಲಿ ಸೇಲ್ , ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸಸ್, ನ್ಯಾಷನಲ್ ಅಲುಮೀನಿಯಂ ಕಂಪನಿ, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಫೈನಾನ್ಶಿಯಲ್ ಸರ್ವೀಸಸ್, ಎಚ್ಎಎಲ್ , ಮತ್ತು ಜೆಎಸ್‌ಪಿಎಲ್ ಗಳಿಕೆ ಕಂಡಿವೆ. ಫ್ಯೂಚರ್ ರಿಟೇಲ್, ಐಡಿಬಿಐ ಬ್ಯಾಂಕ್, ಇಂದ್ರಪ್ರಸ್ಥ ಗ್ಯಾಸ್, ಅದಾನಿ ಟ್ರಾರ್ನ್ಸ್‌ಮಿಷನ್ ಮತ್ತು ನಿಪ್ಪಾನ್ ಲೈಫ್ ಇಂಡಿಯಾ ಅಸೆಟ್ ಮ್ಯಾನೇಜ್‌ಮೆಂಟ್ ಇಳಿಕೆಯಾಗಿವೆ.

ಲಾರ್ಜ್ ಕ್ಯಾಪ್‌ನಲ್ಲಿ ಬಾಷ್ , ಬಜಾಜ್ ಫೈನಾನ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಶೇ 10 ರಷ್ಟು ಗಳಿಕೆ ಕಂಡಿವೆ. ಭಾರ್ತಿ ಇನ್ಫ್ರಾಟೆಲ್, ಅದಾನಿ ಪೋರ್ಟ್ಸ್ ಮತ್ತು ಒಎನ್ ಜಿಸಿ ಕುಸಿತ ಕಂಡಿವೆ.

ಮುನ್ನೋಟ: ಇನ್ಫೊಸಿಸ್, ವಿಪ್ರೊ, ಎಚ್ ಡಿಎಫ್‌ಸಿ ಬ್ಯಾಂಕ್ , ಎಚ್‌ಸಿಎಲ್ ಟೆಕ್ನಾಲಜೀಸ್, ಮೈಂಡ್ ಟ್ರೀ, ಬ್ರಿಟಾನಿಯಾ ಇಂಡಸ್ಟ್ರೀಸ್, ಬಂಧನ್ ಬ್ಯಾಂಕ್ , ಫೆಡರಲ್ ಬ್ಯಾಂಕ್ ಸೇರಿ ಸುಮಾರು 60 ಕಂಪನಿಗಳ ತ್ರೈಮಾಸಿಕ ಫಲಿತಾಂಶ ಈ ವಾರ ಹೊರಬೀಳಲಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ಸಾಮಾನ್ಯ ಸಭೆ ಈ ವಾರ ನಡೆಯಲಿದ್ದು, ಮುಕೇಶ್ ಅಂಬಾನಿ ಭಾಷಣದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ರಾಸಾಯನಿಕ ತಯಾರಿಕಾ ಕಂಪನಿ ರೋಸರಿ ಬಯೋಟೆಕ್‌ನ ಆರಂಭಿಕ ಸಾರ್ವಜನಿಕ ಹೂಡಿಕೆ( ಐಪಿಒ) ಜುಲೈ 13 ರಂದು ಆರಂಭವಾಗಲಿದೆ. ಷೇರಿನ ಮುಖ ಬೆಲೆ ₹ 423 ರಿಂದ₹ 425 ಇದೆ. ಭಾರತ್ ಬಾಂಡ್ ಇಟಿಎಫ್‌ನ ಎರಡನೇ ಕಂತು 14 ರಿಂದ ಜುಲೈ 17ರ ವರೆಗೆ ಲಭ್ಯವಿರಲಿದೆ. ಈ ಎಲ್ಲ ವಿದ್ಯಮಾನಗಳು ಪೇಟೆಯ ಮುಂದಿನ ವಾರದ ವಹಿವಾಟಿನ ಸ್ವರೂಪ ನಿರ್ಧರಿಸಲಿವೆ. ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯೂ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT