ಶುಕ್ರವಾರ, ಜೂಲೈ 10, 2020
22 °C
ತಮ್ಮನ ಜೈಲು ಶಿಕ್ಷೆ ತಪ್ಪಿಸಿದ ಅಣ್ಣ

ಕೌಟುಂಬಿಕ ಬಾಂಧವ್ಯ ಬೆಸೆದ ಮುಕೇಶ್ ಅಂಬಾನಿ ಔದಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ವೀಡನ್ನಿನ ದೂರಸಂಪರ್ಕ ಸಲಕರಣೆ ತಯಾರಿಕಾ ಸಂಸ್ಥೆ ಎರಿಕ್ಸನ್‌ಗೆ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ) ₹ 462 ಕೋಟಿ ಬಾಕಿ ಪಾವತಿಸಲು ನೆರವಾದ ಮುಕೇಶ್‌ ಅಂಬಾನಿ ಅವರ ಔದಾರ್ಯವು ಅಣ್ಣ – ತಮ್ಮಂದಿರ ನಡುವಣ ದಶಕಗಳ ಕೌಟುಂಬಿಕ ಕಲಹಕ್ಕೆ ಹೊಸ ತಿರುವು ನೀಡಿದೆ.

ಗಡುವಿಗೆ ಒಂದು ದಿನ ಇರುವಂತೆಯೇ ನಡೆದ ಬಾಕಿ ಪಾವತಿಯಿಂದಾಗಿ ಅನಿಲ್‌ ಅಂಬಾನಿ ಅವರು ಸಂಭವನೀಯ ಜೈಲು ಶಿಕ್ಷೆಯಿಂದ ಕೊನೆ ಕ್ಷಣದಲ್ಲಿ ಪಾರಾಗಿದ್ದಾರೆ. ಸೋದರರ ನಡುವೆ ಇದ್ದ ದಶಕಕ್ಕೂ ಹೆಚ್ಚಿನ ಕಲಹ ಕೊನೆಗೊಳ್ಳುವಲ್ಲಿ ಇದೊಂದು ಐತಿಹಾಸಿಕ ಘಟನೆಯಾಗಿದೆ. ಬಹಿರಂಗವಾಗಿ ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸಿದ್ದ, ಕೋರ್ಟ್‌ ಮೆಟ್ಟಿಲನ್ನೂ ಏರಿದ್ದ ಸೋದರರ ಮಧ್ಯದ ಸಂಬಂಧಕ್ಕೆ ಇದು ಹೊಸ ತಿರುವು ನೀಡಲಿದೆ.

ಬಾಕಿ ಪಾವತಿ ಆಗುತ್ತಿದ್ದಂತೆ ತನ್ನ ತರಂಗಾಂತರ, ಮೊಬೈಲ್‌ ಗೋಪುರ ಮತ್ತಿತರ ಮೂಲಸೌಕರ್ಯಗಳನ್ನು ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೊಗೆ ಮಾರಾಟ ಮಾಡುವ ₹ 17 ಸಾವಿರ ಕೋಟಿಗಳ ಒಪ್ಪಂದವನ್ನು ಆರ್‌ಕಾಂ ರದ್ದು ಮಾಡಿತು. ಸರ್ಕಾರ ಮತ್ತು ಬ್ಯಾಂಕ್‌ಗಳಿಂದ ಈ ಒಪ್ಪಂದಕ್ಕೆ ಅನುಮೋದನೆ ಪಡೆಯುವುದು ವಿಳಂಬ ಆಗುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದೆ.

ಈ ಎಲ್ಲ ಆಸ್ತಿಗಳನ್ನು ಈಗ ದಿವಾಳಿ ಪ್ರಕ್ರಿಯೆ ಅಡಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಹರಾಜಿನಲ್ಲಿ ಭಾಗವಹಿಸುವ ಸಂಸ್ಥೆಗಳಲ್ಲಿ ರಿಲಯನ್ಸ್‌ ಜಿಯೊ ಪ್ರಮುಖವಾಗಿದೆ.

ಆಸ್ತಿಗಾಗಿ ಕಲಹ: ಧೀರೂಭಾಯಿ ಅಂಬಾನಿ ಅವರು 2002ರಲ್ಲಿ ಉಯಿಲು ಬರೆಯದೆ ನಿಧನವಾದ ನಂತರ ಸೋದರ ಮಧ್ಯೆ ಆಸ್ತಿಗಾಗಿ ಕಲಹ ಆರಂಭಗೊಂಡಿತ್ತು.

ತಂದೆ ಕಟ್ಟಿ ಬೆಳೆಸಿದ್ದ ಉದ್ದಿಮೆಯಿಂದ ಉಭಯತರು ಮೂರು ವರ್ಷಗಳ ನಂತರ  ಬೇರ್ಪಟ್ಟಿದ್ದರು. ಮುಕೇಶ್‌ ಅವರು ತೈಲ ಮತ್ತು ಪೆಟ್ರೊಕೆಮಿಕಲ್ಸ್‌ ವಹಿವಾಟು ಮತ್ತು ಅನಿಲ್‌ ಹೊಸ ಉದ್ದಿಮೆಗಳಾದ ವಿದ್ಯುತ್‌, ದೂರಸಂಪರ್ಕ ಮತ್ತು ಹಣಕಾಸು ಸೇವೆಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಆಸ್ತಿಯು ಸಮಾನವಾಗಿ ಹಂಚಿಕೆಯಾಗಿತ್ತು.

ತಮ್ಮ ಒಡೆತನದ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ನೈಸರ್ಗಿಕ ಅನಿಲ ಪೂರೈಸುವ ಒಪ್ಪಂದವನ್ನು ಗೌರವಿಸಿದ ಅಣ್ಣನ ವಿರುದ್ಧ ಅನಿಲ್‌ ಸುಪ್ರೀಂಕೋರ್ಟ್‌ನ ಬಾಗಿಲು ತಟ್ಟಿದ್ದರು. ಕೋರ್ಟ್‌ ತೀರ್ಪು ಮುಕೇಶ್‌ ಪರವಾಗಿ ಬಂದಿತ್ತು. ಮುಕೇಶ್‌ ಒಡೆತನದ ಉದ್ದಿಮೆಗಳು ದಿನೇ ದಿನೇ ಪ್ರಗತಿ ಪಥದಲ್ಲಿ ಮುನ್ನಡೆದಿದ್ದವು. ಅನಿಲ್‌ ಅವರ ದೂರಸಂಪರ್ಕ ಮತ್ತು ವಿದ್ಯುತ್‌  ಉತ್ಪಾದನೆ ವಹಿವಾಟು ಸಾಲದ ಸುಳಿಗೆ ಸಿಲುಕಿತ್ತು.

ಕಚ್ಚಾ ತೈಲ ಶುದ್ಧೀಕರಣ ಉದ್ದಿಮೆಯಲ್ಲಿನ ಭಾರಿ ಪ್ರಮಾಣದ ಲಾಭವನ್ನು ಮುಕೇಶ್‌ ಅವರು ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಬಳಸಿಕೊಂಡರು. ಸಾಲದ ಬಡ್ಡಿ ಮತ್ತು ತೀವ್ರ ಸ್ವರೂಪದ ಸ್ಪರ್ಧೆಯು ಅನಿಲ್‌ಗೆ ಹೊರೆಯಾಗಿ ಪರಿಣಮಿಸಿತ್ತು.

ಫೋರ್ಬ್ಸ್‌ ನಿಯತಕಾಲಿಕೆಯು 2008ರಲ್ಲಿ  ವಿಶ್ವದ 6ನೇ ಅತಿದೊಡ್ಡ ಸಿರಿವಂತ ಎಂದೇ ಅನಿಲ್‌ ಅವರನ್ನು ಗುರುತಿಸಿತ್ತು. ಮುಕೇಶ್‌ ಅವರು ಸದ್ಯಕ್ಕೆ ವಿಶ್ವದ 13ನೇ ಅತಿದೊಡ್ಡ ಸಿರಿವಂತ ಮತ್ತು ದೇಶದ ಅತಿದೊಡ್ಡ ಶ್ರೀಮಂತ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಸಂಬಂಧದ ಹೊಸ ಆರಂಭ?

‘ಕೌಟುಂಬಿಕ ಮೌಲ್ಯ ಎತ್ತಿ ಹಿಡಿಯಲು ಹಿರಿಯ ಅಣ್ಣನ ಕುಟುಂಬ ತೋರಿದ ಔದಾರ್ಯಕ್ಕೆ ನಾವು ಚಿರಋಣಿಯಾಗಿದ್ದೇವೆ. ನಮ್ಮ ಹೃದಯ ತುಂಬಿ ಬಂದಿದೆ’ ಎಂದು ಅನಿಲ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಈ ಹೇಳಿಕೆಯು ಎರಡೂ ಕುಟುಂಬಗಳ ನಡುವಣ ಬಾಂಧವ್ಯ ಸುಧಾರಣೆಯ ಅರ್ಥ ಧ್ವನಿಸುತ್ತದೆ. ಅಣ್ಣ – ತಮ್ಮ ನಡುವಣ ಕೌಟುಂಬಿಕ ಮತ್ತು ವಾಣಿಜ್ಯ ಸಂಬಂಧದಲ್ಲಿ ಇದು ಹೊಸ ಆರಂಭಕ್ಕೆ ಕಾರಣವಾಗಲಿದೆ’ ಎಂದು  ಉಭಯ ಕುಟುಂಬಗಳ ವಾಣಿಜ್ಯ ವಹಿವಾಟಿನ ಏರಿಳಿತವನ್ನು ಹತ್ತಿರದಿಂದ ಕಂಡಿರುವ ಉದ್ಯಮ ವಲಯದ ಪ್ರಮುಖರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಇಬ್ಬರೂ ಸೋದರರು ಜತೆಯಾಗಿ ಕೆಲಸ ಮಾಡಬಹುದು ಎಂದೂ ಮೂಲಗಳು ಅಂದಾಜಿಸಿವೆ. ಸೋಮವಾರದ ಬೆಳವಣಿಗೆಯು ಅವರಿಬ್ಬರ ನಡುವಣ ಬಾಂಧವ್ಯ ಸುಧಾರಣೆ ನಿಟ್ಟಿನಲ್ಲಿನ ಮಹತ್ವದ ಘಟ್ಟವಾಗಿರಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು