ಬುಧವಾರ, ಜೂನ್ 29, 2022
24 °C

ಎಂಎಫ್: ವಿದೇಶಿ ಕಂಪನಿಗಳಲ್ಲಿ ಹೂಡಿಕೆಗೆ ಮತ್ತೆ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮ್ಯೂಚುವಲ್ ಫಂಡ್‌ ಕಂಪನಿಗಳಿಗೆ ವಿದೇಶಿ ಷೇರುಗಳಲ್ಲಿ ಮತ್ತೆ ಹೂಡಿಕೆ ಮಾಡಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಅನುಮತಿ ನೀಡಿದೆ. ಆದರೆ, ಮ್ಯೂಚುವಲ್ ಫಂಡ್ ಕಂಪನಿಗಳು ಮಾಡುವ ಒಟ್ಟು ಹೂಡಿಕೆ ಮೊತ್ತವು 7 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹ 54 ಸಾವಿರ ಕೋಟಿ) ಮೀರುವಂತಿಲ್ಲ.

ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಈಚಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಕುಸಿತ ಕಂಡುಬಂದು, ಅಂತರರಾಷ್ಟ್ರೀಯ ಮಟ್ಟದ ಕಂಪನಿಗಳ ಷೇರು ಮೌಲ್ಯ ಕಡಿಮೆ ಆದ ನಂತರದಲ್ಲಿ ಸೆಬಿ ಈ ನಿರ್ಧಾರ ಕೈಗೊಂಡಿದೆ.

ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡುವ ಯೋಜನೆಗಳಿಗೆ ಹೊಸ ಹೂಡಿಕೆ ತೆಗೆದುಕೊಳ್ಳಬಾರದು ಎಂದು ಸೆಬಿ ಜನವರಿ ತಿಂಗಳಿನಲ್ಲಿ ಮ್ಯೂಚುವಲ್ ಫಂಡ್ ಕಂಪನಿಗಳಿಗೆ ಹೇಳಿತ್ತು. ಮ್ಯೂಚುವಲ್ ಫಂಡ್ ಉದ್ಯಮವು ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡುವ ಮೊತ್ತವು 7 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚಾದ ಕಾರಣದಿಂದಾಗಿ ಸೆಬಿ ಈ ಸೂಚನೆ ನೀಡಿತ್ತು.

ಆದರೆ, ವಿದೇಶಿ ಷೇರುಪೇಟೆಗಳಲ್ಲಿ ಈಚೆಗೆ ಕಂಡುಬಂದ ಕುಸಿತದ ಪರಿಣಾಮವಾಗಿ ಮ್ಯೂಚುವಲ್ ಫಂಡ್ ಉದ್ಯಮದ ಎಲ್ಲ ಕಂಪನಿಗಳು ಮಾಡಿರುವ ಹೂಡಿಕೆಯ ಒಟ್ಟು ಮೌಲ್ಯವು 7 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಕಡಿಮೆ ಆಗಿದೆ.

ಅಂತರರಾಷ್ಟ್ರೀಯ ಷೇರುಪೇಟೆಗಳಲ್ಲಿ ಹೂಡಿಕೆ ಮಾಡುವ ಯೋಜನೆಗಳಲ್ಲಿ ಹೊಸ ಹೂಡಿಕೆಗೆ ಮಂಗಳವಾರದಿಂದ ಮತ್ತೆ ಅವಕಾಶ ಕಲ್ಪಿಸಲಾಗುವುದು ಎಂದು ಎಡೆಲ್ವೈಸ್ ಮ್ಯೂಚುವಲ್ ಫಂಡ್ ತಿಳಿಸಿದೆ. ಸೆಬಿ ಸೂಚನೆ ಬಂದ ನಂತರದಲ್ಲಿ ಪಿಪಿಎಫ್‌ಎಎಸ್‌ ಮ್ಯೂಚುವಲ್ ಫಂಡ್‌, ಡಿಎಸ್‌ಪಿ ಮ್ಯೂಚುವಲ್ ಫಂಡ್ ಹಾಗೂ ಎಡೆಲ್ವೈಸ್ ಮ್ಯೂಚುವಲ್ ಫಂಡ್‌ ಸೇರಿದಂತೆ ಹಲವು ಮ್ಯೂಚುವಲ್ ಫಂಡ್ ಕಂಪನಿಗಳು ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡುವ ಫಂಡ್‌ಗಳಿಗೆ ಹಣದ ಹರಿವು ಸ್ಥಗಿತಗೊಳಿಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು