ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾನಯನ ಯೋಜನೆ ಮೂಲಕ ಅಭಿವೃದ್ಧಿ: ನಬಾರ್ಡ್‌ನ ಧ್ಯೇಯ

39ನೇ ಸಂಸ್ಥಾಪನಾ ದಿನಾಚರಣೆ
Last Updated 13 ಜುಲೈ 2020, 21:15 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್) 39ನೇ ಸಂಸ್ಥಾಪನಾ ದಿನವನ್ನು ಸೋಮವಾರ ಆಚರಿಸಲಾಯಿತು.

ಇದೇ ವೇಳೆ 1982ರ ಜುಲೈ 12ರಂದು ಸ್ಥಾಪನೆ ಆದಾಗಿನಿಂದ ನಬಾರ್ಡ್ ಸಂಸ್ಥೆಯು ಕರ್ನಾಟಕ ರಾಜ್ಯಕ್ಕೆ ನೀಡಿದ ಕೊಡುಗೆಯ ಬಗ್ಗೆ ವಿವರಿಸುವ ‘38 ವರ್ಷಗಳ ಪ್ರಯಾಣ’ ಹೆಸರಿನ ಕಿರು ಪುಸ್ತಕ ಬಿಡುಗಡೆ ಮಾಡಲಾಗಿದೆ.

ರಾಜ್ಯದಲ್ಲಿ ಶೇ 75 ರಷ್ಟು ವ್ಯವಸಾಯ ಭೂಮಿಯು ಮಳೆ ಆಧಾರಿತವಾಗಿದ್ದು, ಇದರಿಂದಾಗಿ ರೈತರು ಎದುರಿಸುವ ಸಂಕಷ್ಟವನ್ನು ತೊಡೆದುಹಾಕಲು ನಬಾರ್ಡ್ ಕರ್ನಾಟಕ ಕ್ಷೆತ್ರದ ಕಾರ್ಯಾಲಯವು ಕೇಂದ್ರೀಕೃತವಾಗಿ ಜಲಾನಯನ ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೇ ಬರುತ್ತಿದೆ. ಹೀಗಾಗಿ, ಈ ವರ್ಷದ ಸ್ಥಾಪನಾ ದಿನಾಚರಣೆಯನ್ನು ‘ಜಲಾನಯನ ಯೋಜನೆಗಳ ಮೂಲಕ ಅಭಿವೃದ್ಧಿ’ ಎಂದು ಆಚರಿಸಲಾಯಿತು.

ಜಲಾನಯನ ಅಭಿವೃದ್ಧಿ ನಿಧಿ ಅಡಿಯಲ್ಲಿ, ರಾಜ್ಯದಲ್ಲಿ ಇದುವರೆಗೂ 298 ಜಲಾನಯನ ಯೋಜನೆಗಳನ್ನು ಉತ್ತೇಜಿಸಿ ₹ 221.89 ಕೋಟಿಗಳ ಅನುದಾನ ನೀಡಲಾಗಿದೆ.3.04 ಲಕ್ಷ ಹೆಕ್ಟೇರ್ ಪ್ರದೇಶವನ್ನು ಅಭಿವೃದ್ಧಿಗೊಳಿಸುವ ಮೂಲಕ 66,500 ಕುಟುಂಬಗಳು ಇದರ ಲಾಭ ಪಡೆದುಕೊಂಡಿವೆ. ಈ ಯೋಜನೆಗಳಿಂದ ಬೆಳೆ ಇಳುವರಿ ಹೆಚ್ಚಾಗಿದೆ, ಪರ್ಯಾಯ ಬೆಳೆಗಳೂ ಹೆಚ್ಚಿವೆ, ಮಣ್ಣು ಮತ್ತು ಜಲ ಸಂರಕ್ಷಣೆಯಾಗಿದೆ ಹಾಗೂ ಫಲಾನುಭವಿಗಳ ಸಾಮಾಜಿಕ ಮತ್ತು ಆರ್ಥಿಕ ಮಟ್ಟವೂ ಸುಧಾರಿಸಿದೆ.

ರಾಜ್ಯದಲ್ಲಿ ‘ಕೋವಿಡ್-19’ನಿಂದ ಗ್ರಾಮೀಣ ಜನರ ಮೇಲೆ ಆಗಿರುವ ಪರಿಣಾಮಗಳನ್ನು ಎದುರಿಸುವ ಸಲುವಾಗಿ, ಬ್ಯಾಂಕುಗಳಿಗೆ ಹೆಚ್ಚಿನ ಸಾಲ ಒದಗಿಸಲು ಈ ವರ್ಷ ₹ 2,200 ಕೋಟಿಗಳನ್ನು ವಿಶೇಷ ಸಾಲ ಯೋಜನೆಯಡಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಗೆ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಬಿಡುಗಡೆ ಮಾಡಿದೆ. ಈ ಮೊತ್ತವು ಬ್ಯಾಂಕೇತರ ಮತ್ತು ಕಿರು ಹಣಕಾಸು ಸಂಸ್ಥೆಗಳಿಗಿಂತಲೂ ಹೆಚ್ಚಿಗೆ ಇದೆ.

ನಬಾರ್ಡ್ ಸಂಸ್ಥೆಯು ಕೃಷಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸಾಲ ಕೊಡುವುದಲ್ಲದೇ, ರೈತ ಉತ್ಪಾದಕ ಸಂಘಗಳ ಸ್ಥಾಪನೆ,ಬುಡಕಟ್ಟು ಅಭಿವೃದ್ಧಿ ಯೋಜನೆಗಳು, ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಸ್ವ-ಸಹಾಯ ಸಂಘಗಳು ಹಾಗೂ ಜಂಟಿ ಬಾಧ್ಯತಾ ಗುಂಪುಗಳ ಸ್ಥಾಪನೆಗೂ ಆದ್ಯತೆ ನೀಡುತ್ತಿದೆ. ‘ಕೋವಿಡ್-19’ನಿಂದಾಗಿ ತಮ್ಮ ಸ್ವಗ್ರಾಮಗಳಿಗೆ ಹಿಂತಿರುಗಿದ ಗ್ರಾಮೀಣ ಯುವಕರಿಗೆಸಂಸ್ಥೆಯ ಹಲವು ಅಭಿವೃದ್ಧಿಪರ ಯೋಜನೆಗಳು ನೆರವಾಗಿದ್ದು, ಉದ್ಯೋಗ ಹಾಗೂ ಜೀವನಾಧಾರ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT