ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಪೇಮೆಂಟ್: ಸ್ವಯಂಚಾಲಿತ ಪಾವತಿ ವ್ಯವಸ್ಥೆ ಕೊನೆ

Last Updated 30 ಸೆಪ್ಟೆಂಬರ್ 2021, 15:55 IST
ಅಕ್ಷರ ಗಾತ್ರ

ನವದೆಹಲಿ: ಪೋಸ್ಟ್‌ಪೇಯ್ಡ್‌ ಮೊಬೈಲ್‌ ಬಿಲ್‌, ಒಟಿಟಿ ಚಂದಾದಾರಿಕೆ ಮೊತ್ತ ಸೇರಿದಂತೆ ಹಲವು ಸೇವೆಗಳಿಗೆ ಕಾಲಕಾಲಕ್ಕೆ ಪಾವತಿ ಮಾಡಬೇಕಿರುವ ಮೊತ್ತವು ₹ 5,000ಕ್ಕಿಂತ ಹೆಚ್ಚಿದ್ದರೆ ಅದು ಗ್ರಾಹಕರ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತವಾಗುವ ವ್ಯವಸ್ಥೆ ಕೊನೆಗೊಂಡಿದೆ. ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಇಂತಹ ಪಾವತಿಗಳನ್ನು ಸ್ವಯಂಚಾಲಿತ ಆಗಿಸಿಕೊಂಡಿದ್ದವರು ಇನ್ನು ಮುಂದೆ ಒಪ್ಪಿಗೆ ನೀಡಿದ ನಂತರವಷ್ಟೇ ಪಾವತಿ ಪೂರ್ಣಗೊಳ್ಳಲಿದೆ.

ಈ ನಿಯಮವು ಶುಕ್ರವಾರದಿಂದ ಜಾರಿಗೆ ಬರುತ್ತಿದೆ. ಮಾರ್ಚ್‌ 31ರಿಂದಲೇ ಇದು ಜಾರಿಗೆ ಬರಬೇಕಿತ್ತು. ಆದರೆ ಇಂತಹ ಸೇವೆಗಳನ್ನು ಒದಗಿಸುವ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಇದನ್ನು ಜಾರಿಗೊಳಿಸಲು ಸಿದ್ಧತೆ ಮಾಡಿಕೊಂಡಿರಲಿಲ್ಲ. ಹಾಗಾಗಿ ಆರ್‌ಬಿಐ, ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶ ನೀಡಿತ್ತು.

ಕಾರ್ಡ್‌ ಬಳಸಿ ನಡೆಸುವ ಪಾವತಿಗಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆರ್‌ಬಿಐ ಈ ಕ್ರಮ ಕೈಗೊಂಡಿದೆ. ಪುನರಾವರ್ತನೆ ಆಗುವ ಪಾವತಿಗಳ ಬಗ್ಗೆ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂದು ಹೊಸ ನಿಯಮಗಳಲ್ಲಿ ಹೇಳಲಾಗಿದೆ. ಗ್ರಾಹಕರು ಒಪ್ಪಿಗೆ ನೀಡಿದರೆ ಮಾತ್ರ, ಪಾವತಿಯನ್ನು ಮಾಡಬೇಕು. ಅಂದರೆ, ಪುನರಾವರ್ತನೆ ಆಗುವ ಪಾವತಿಗಳು ಸ್ವಯಂಚಾಲಿತವಾಗಿ ನಡೆಯುವುದಿಲ್ಲ. ಬದಲಿಗೆ, ಅವು ಗ್ರಾಹಕರ ಪೂರ್ವಾನುಮತಿಯೊಂದಿಗೆ ಮಾತ್ರ ನಡೆಯಲಿವೆ.

₹ 5,000 ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳಿಗೆ ಬ್ಯಾಂಕ್‌ಗಳು ಗ್ರಾಹಕರಿಗೆ ಒಂದು ಬಾರಿ ಬಳಕೆಯಾಗುವ ಗುಪ್ತಸಂಖ್ಯೆಯನ್ನು (ಒಟಿಪಿ) ರವಾನಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ. ಭಾರತೀಯ ಸ್ಟೇಟ್‌ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳು ಹೊಸ ನಿಯಮಗಳ ಬಗ್ಗೆ ತಮ್ಮ ಗ್ರಾಹಕರಿಗೆ ಮಾಹಿತಿ ನೀಡಿವೆ. ಹೊಸ ನಿಯಮಗಳು ಯುಪಿಐ ವ್ಯವಸ್ಥೆಯ ಮೂಲಕ ನಡೆಸುವ ಪಾವತಿಗಳಿಗೂ ಅನ್ವಯ ಆಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT