ಗುರುವಾರ , ಆಗಸ್ಟ್ 11, 2022
21 °C

ಒಂದು ದೇಶ ಒಂದು ಪಡಿತರ: ಹೆಚ್ಚುವರಿ ಸಾಲಕ್ಕೆ ಅನುಮತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಒಂದು ದೇಶ ಒಂದು ಪಡಿತರ ಚೀಟಿ ಸುಧಾರಣೆಯನ್ನು ಇದುವರೆಗೆ ಒಂಬತ್ತು ರಾಜ್ಯಗಳು ಪೂರ್ಣಗೊಳಿಸಿದ್ದು, ಈ ರಾಜ್ಯಗಳಿಗೆ ಒಟ್ಟು ₹ 23,523 ಕೋಟಿಯನ್ನು ಹೆಚ್ಚುವರಿಯಾಗಿ ಸಾಲವಾಗಿ ಪಡೆಯಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಒಂಬತ್ತು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು.

ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಕೇರಳ, ತೆಲಂಗಾಣ, ತ್ರಿಪುರ ಮತ್ತು ಉತ್ತರ ಪ್ರದೇಶ ಈ ಸುಧಾರಣೆಯನ್ನು ಪೂರ್ಣಗೊಳಿಸಿರುವ ಇತರ ರಾಜ್ಯಗಳು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕರ್ನಾಟಕಕ್ಕೆ ಹೆಚ್ಚು ವರಿಯಾಗಿ ₹ 4,509 ಕೋಟಿ ಯನ್ನು ಸಾಲವಾಗಿ ಪಡೆಯಲು ಅನುಮತಿ ನೀಡಲಾಗಿದೆ ಎಂದು ಅದು ಹೇಳಿದೆ.

ಹೆಚ್ಚುವರಿ ಸಾಲ ಪಡೆಯಲು ಅರ್ಹತೆ ಗಳಿಸಬೇಕು ಎಂದಾದರೆ ರಾಜ್ಯ ಗಳು ಡಿಸೆಂಬರ್‌ 31ಕ್ಕೆ ಮೊದಲು ಸುಧಾರಣೆಗಳನ್ನು ಪೂರ್ಣಗೊಳಿಸಬೇಕು. ನಿಗದಿತ ದಿನದೊಳಗೆ ಹಲವು ರಾಜ್ಯಗಳು ಈ ಸುಧಾರಣೆಗಳನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ‘ಒಂದು ದೇಶ ಒಂದು ಪಡಿತರ ಚೀಟಿ’ ಸುಧಾರಣೆ ಮಾತ್ರವೇ ಅಲ್ಲದೆ, ಹೆಚ್ಚುವರಿ ಸಾಲ ಪಡೆಯಲು ರಾಜ್ಯಗಳು ಸುಲಲಿತ ವಾಣಿಜ್ಯ ವಹಿವಾಟು ಸುಧಾರಣೆ, ಇಂಧನ ವಲಯದಲ್ಲಿ ಸುಧಾರಣೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಕೆಲವು ಸುಧಾರಣೆಗಳನ್ನೂ ಜಾರಿಗೆ ತರಬಹುದು.

ಕೋವಿಡ್‌–19 ಸಾಂಕ್ರಾಮಿಕದ ಆರ್ಥಿಕ ಪರಿಣಾಮ ನಿಭಾಯಿಸಲು ಕೇಂದ್ರವು ರಾಜ್ಯಗಳಿಗೆ ಜಿಎಸ್‌ಡಿಪಿಯ (ರಾಜ್ಯದ ಒಟ್ಟು ಆಂತರಿಕ ಉತ್ಪನ್ನ) ಶೇಕಡ 2ರಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ಸಾಲವಾಗಿ ಪಡೆಯಲು ಅವಕಾಶ ನೀಡಿದೆ. ಆದರೆ, ಸಾಲದ ಕಾರಣದಿಂದಾಗಿ ಭವಿಷ್ಯದಲ್ಲಿ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ರಾಜ್ಯಗಳು ನಾಗರಿಕರಿಗೆ ಒದಗಿಸುವ ಕೆಲವು ಸೇವೆಗಳಲ್ಲಿ ಸುಧಾರಣೆ ತಂದರೆ ಮಾತ್ರ ಸಾಲ ಮಾಡಬಹುದು ಎಂಬ ನಿಯಮ ರೂಪಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು