ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಜೆಟ್‌ ಮಾಹಿತಿ ಅಧಿಕೃತವಾಗಿದೆ’

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟನೆ
Last Updated 10 ಜುಲೈ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ‘ಕೇಂದ್ರ ಬಜೆಟ್‌ನಲ್ಲಿ ಮಂಡಿಸಲಾಗಿರುವ ಎಲ್ಲಾ ಮಾಹಿತಿಗಳೂ ಅಧಿಕೃತವಾಗಿವೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

‘ಬಜೆಟ್‌ನಲ್ಲಿ ನೀಡಿರುವ ಪ್ರತಿಯೊಂದು ಅಂಕಿ–ಅಂಶ ಮತ್ತು ಲೆಕ್ಕಾಚಾರಗಳು ಅಧಿಕೃತವಾಗಿವೆ. ಈ ಬಗ್ಗೆ ಯಾವುದೇ ರೀತಿಯ ವದಂತಿಗೆ ಕಿವಿಗೊಡುವ ಅಗತ್ಯ ಇಲ್ಲ’ ಎಂದು ಅವರು ಲೋಕಸಭೆಗೆ ತಿಳಿಸಿದ್ದಾರೆ.

ಆರ್ಥಿಕ ಸಮೀಕ್ಷೆ ಮತ್ತು ಬಜೆಟ್‌ನಲ್ಲಿ ನೀಡಿರುವ ಮಾಹಿತಿಗಳಲ್ಲಿ ವ್ಯತ್ಯಾಸವಿದೆ ಎಂದು ವಿಶ್ಲೇಷಕರು ಹೇಳುತ್ತಿರುವ ಕುರಿತು ಅವರು ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.

‘ಸದ್ಯದ ಮಾರುಕಟ್ಟೆ ದರ ಆಧರಿಸಿದ ಆರ್ಥಿಕ ವೃದ್ಧಿ ದರ 2019–20ರಲ್ಲಿ ಶೇ 11ರಷ್ಟಾಗಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಆದರೆ ಫೆಬ್ರುವರಿಯಲ್ಲಿ ಮಂಡನೆಯಾದ ಮಧ್ಯಂತರ ಬಜೆಟ್‌ನಲ್ಲಿ ಮಾಡಿರುವ ಅಂದಾಜಿನ ಆಧಾರದ ಮೇಲೆ ಶೇ 12ರಷ್ಟು ವೃದ್ಧಿ ದರ ಸಾಧಿಸುವ ಸಾಮರ್ಥ್ಯವಿದೆ ಎಂದು ಸಚಿವಾಲಯ ಪರಿಗಣಿಸಿದೆ’ ಎಂದು ಹೇಳಿದ್ದಾರೆ.

ವಿತ್ತೀಯ ಶಿಸ್ತಿಗೆ ಬದ್ಧ:‘ಸಾರ್ವಜನಿಕ ವೆಚ್ಚದಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳದೆ ವಿತ್ತೀಯ ಶಿಸ್ತು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ’ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.

‘ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಶೇ 3.4ರಷ್ಟಾಗಲಿದೆ ಎಂದು ಮಧ್ಯಂತರ ಬಜೆಟ್‌ನಲ್ಲಿ ಅಂದಾಜು ಮಾಡಲಾಗಿತ್ತು. ಆದರೆ, ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ವೇಳೆ ಅದನ್ನು ಶೇ 3.3ಕ್ಕೆ ನಿಗದಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

‘ವಿದ್ಯುತ್‌ ಚಾಲಿತ ವಾಹನಗಳ (ಇವಿ) ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಶೇ 12 ರಿಂದ ಶೇ 5ಕ್ಕೆ ತಗ್ಗಿಸುವಂತೆ ಜಿಎಸ್‌ಟಿ ಮಂಡಳಿಗೆ ಮನವಿ ಮಾಡಲಾಗುವುದು.

‘2024–25ರ ವೇಳೆಗೆ ದೇಶದ ಆರ್ಥಿಕತೆಯನ್ನು ₹ 350 ಲಕ್ಷ ಕೋಟಿಗೆ ತಲುಪಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಜನ ವಿರೋಧಿ ಬಜೆಟ್‌:ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಸುಂಕ ಹೆಚ್ಚಳ ನಿರ್ಧಾರ ಹಿಂದಕ್ಕೆ ಪಡೆಯುವಂತೆ ಪ್ರತಿಪಕ್ಷಗಳ ಸದಸ್ಯರು ಒತ್ತಾಯಿಸಿದರು. ಜನ ವಿರೋಧಿ ಬಜೆಟ್‌ ಎಂದು ಸದನದಲ್ಲಿ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT