ಗುರುವಾರ , ನವೆಂಬರ್ 21, 2019
24 °C
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸುಳಿವು

ರಿಯಲ್‌ ಎಸ್ಟೇಟ್‌ಗೆ ಉತ್ತೇಜನ: ನಿರ್ಮಲಾ ಸೀತಾರಾಮನ್‌ ಸುಳಿವು

Published:
Updated:
Prajavani

ಮುಂಬೈ: ‘ರಿಯಲ್‌ ಎಸ್ಟೇಟ್‌ ವಲಯವು ಎದುರಿಸುತ್ತಿರುವ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಕಾರ್ಯಪ್ರವೃತ್ತವಾಗಿವೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

‘ಈಗಾಗಲೇ ಘೋಷಿಸಿರುವ ಆರ್ಥಿಕ ಸುಧಾರಣಾ ಕ್ರಮಗಳಿಂದ ರಿಯಲ್‌ ಎಸ್ಟೇಟ್‌ ವಲಯವನ್ನು ಹೊರಗಿಡಲಾಗಿತ್ತು. ಆರ್ಥಿಕತೆಗೆ ಉತ್ತೇಜನೆ ನೀಡಲು ಘೋಷಿಸಿರುವ ಕೊಡುಗೆಗಳಿಂದ ಈ ವಲಯಕ್ಕೆ ಯಾವುದೇ ಪ್ರಯೋಜನವೂ ದೊರೆತಿಲ್ಲ. ಹೀಗಾಗಿ ಮೂಲಸೌಕರ್ಯ ವಲಯದ ಮೇಲೆ ಈ ವಲಯದಲ್ಲಿನ ಬಿಕ್ಕಟ್ಟಿನ ಪರಿಣಾಮ ಹೆಚ್ಚಿಗೆ ಇದೆ.

ರಾಷ್ಟ್ರೀಯ ಷೇರುಪೇಟೆಯ ಬೆಳ್ಳಿ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ವಲಯದಿಂದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಸಹಾಯ ಆಗುವಂತೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನುವ ಬಗ್ಗೆ ಪರಾಮರ್ಶೆ ನಡೆಯುತ್ತಿದೆ’ ಎಂದಿದ್ದಾರೆ.

‘ಬಹಳಷ್ಟು ಪರ್ಯಾಯ ನಿಧಿಗಳು ಈ ವಲಯದಲ್ಲಿ ಹಣ ಹೂಡಿಕೆ ಮಾಡಲು ಮುಂದೆ ಬಂದಿವೆ. ಈ ಸಂಬಂಧ ಅನೇಕ ನಿಧಿಗಳು ಸರ್ಕಾರವನ್ನು ಸಂಪರ್ಕಿಸಿವೆ. ಅವರಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಬೆಂಬಲ ಬೇಕಾಗಿದೆ. ನೋಟು ರದ್ದತಿ, ಜಿಎಸ್‌ಟಿ ಮತ್ತು ‘ರೇರಾ’ದಿಂದಾಗಿ ಈ ವಲಯವು ಬಹಳಷ್ಟು ಸಂಕಷ್ಟಕ್ಕೆ ಒಳಗಾಗಿದ್ದು ಇನ್ನೂ ಚೇತರಿಸಿಕೊಂಡಿಲ್ಲ. ಎನ್‌ಬಿಎಫ್‌ಸಿ ವಲಯದಲ್ಲಿನ ನಗದು ಬಿಕ್ಕಟ್ಟೂ ಸಹ ನಕಾರಾತ್ಮಕ ಪರಿಣಾಮ ಬೀರಿದೆ’ ಎಂದು ಅವರು ವಿವರಿಸಿದ್ದಾರೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ (ಎನ್‌ಬಿಎಫ್‌ಸಿ) ನಗದು ಬಿಕ್ಕಟ್ಟು ಕೂಡ ಈ ವಲಯದಲ್ಲಿನ ಹೊಸ ನಿರ್ಮಾಣ ಚಟುವಟಿಕೆ ಮತ್ತು ಫ್ಲ್ಯಾಟ್‌ಗಳ ಖರೀದಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಪ್ರತಿಕ್ರಿಯಿಸಿ (+)