ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉದ್ದಿಮೆಗಳು, ಮಹಿಳೆಯರಿಗೆ ತ್ವರಿತ ಸಾಲಕ್ಕೆ ಕೇಂದ್ರದ ಚಿಂತನೆ : ಗಡ್ಕರಿ

Last Updated 7 ಆಗಸ್ಟ್ 2020, 14:53 IST
ಅಕ್ಷರ ಗಾತ್ರ

ಮುಂಬೈ: ಮಹಿಳಾ ಉದ್ಯಮಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ₹ 10 ಲಕ್ಷದವರೆಗಿನ ಸಾಲವನ್ನು ತಕ್ಷಣಕ್ಕೆ ನೀಡಲು ‘ಸಾಮಾಜಿಕ ಕಿರು ಹಣಕಾಸು ಸಂಸ್ಥೆ’ಗಳನ್ನು ಸೃಷ್ಟಿಸುವ ಆಲೋಚನೆ ಸರ್ಕಾರಕ್ಕೆ ಇದೆ ಎಂದು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.

ನೊಬೆಲ್ ಪ್ರಶಸ್ತಿ ಪುರಸ್ಕೃತ, ಗ್ರಾಮೀಣ ಬ್ಯಾಂಕ್ ಸಂಸ್ಥಾಪಕ ಮೊಹಮ್ಮದ್ ಯೂನಸ್ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಈ ಆಲೋಚನೆ ಮೂಡಿದೆ, ಕೇಂದ್ರ ಹಣಕಾಸು ಸಚಿವಾಲಯದ ಜೊತೆ ಮಾತುಕತೆಯ ನಂತರ ಇದರ ಬಗ್ಗೆ ಖಚಿತ ವಿವರ ನೀಡಲಾಗುವುದು ಎಂದು ಗಡ್ಕರಿ ಹೇಳಿದರು.

‘ಫಿಕ್ಕಿ’ಯ ಮಹಿಳಾ ವಿಭಾಗ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಡ್ಕರಿ, ‘ಮಹಿಳಾ ಉದ್ಯಮಿಗಳಿಗೆ ಮೂರು ದಿನಗಳಲ್ಲಿ ₹ 10 ಲಕ್ಷದವರೆಗೆ ಸಾಲ ನೀಡುವ ವ್ಯವಸ್ಥೆ ರೂಪಿಸುವ ಆಲೋಚನೆ ಸರ್ಕಾರಕ್ಕೆ ಇದೆ’ ಎಂದರು.

ಇಂಥದ್ದೊಂದು ವ್ಯವಸ್ಥೆ ಹೇಗಿರುತ್ತದೆ ಎಂಬುದನ್ನು ವಿವರಿಸಿದ ಗಡ್ಕರಿ, ‘ಸಾಲ ನೀಡುವ ಸಂಸ್ಥೆಯು ನೋಂದಣಿ ಮಾಡಿಸಿಕೊಳ್ಳಬೇಕು, ಅದಕ್ಕೆ ಆರ್‌ಬಿಐನಿಂದ ಪರವಾನಗಿ ದೊರೆಯುತ್ತದೆ. ಈ ಸಂಸ್ಥೆಯು ಠೇವಣಿಗಳನ್ನು ಸ್ವೀಕರಿಸಲು ಹಾಗೂ ಸಾಲ ನೀಡಲು ಆರಂಭಿಸಬಹುದು. ಇಂತಹ ವ್ಯವಸ್ಥೆಯನ್ನು ನಾವು ಅತ್ಯಂತ ಸರಳ ಪ್ರಕ್ರಿಯೆಗಳೊಂದಿಗೆ ಸಣ್ಣ ಹಾಗೂ ಅತಿಸಣ್ಣ ಸಾಮಾಜಿಕ ಉದ್ಯಮಗಳಿಗಾಗಿ ಆರಂಭಿಸಲು ಉದ್ದೇಶಿಸಿದ್ದೇವೆ’ ಎಂದರು.

ಈ ವಿಚಾರವಾಗಿ ನೀತಿ ಆಯೋಗವು ಮುಂದಡಿ ಇರಿಸಿದೆ. ಅವರು ನೀಡುವ ಮಾಹಿತಿ ಆಧರಿಸಿ, ನೀತಿ ರೂಪಿಸಲಾಗುವುದು. ‘ಸಣ್ಣ ಪ್ರಮಾಣದ ಉದ್ಯಮಿಗಳಿಗೆ ಇದರ ಮೂಲಕ ಸಾಲ ಸಿಗಲಿದೆ’ ಎಂದು ಅವರು ಹೇಳಿದರು.

‘ನಗರೀಕರಣದಿಂದ ಸೃಷ್ಟಿಯಾಗಿರುವ ಸಮಸ್ಯೆಗಳು ನಮ್ಮೆದುರು ಇವೆ. ಗ್ರಾಮೀಣ ಪ್ರದೇಶಗಳಲ್ಲಿನ ಜೀವನ ಮಟ್ಟವನ್ನು ನಾವು ಸುಧಾರಿಸಬೇಕು. ಸ್ಮಾರ್ಟ್‌ ಹಳ್ಳಿಗಳನ್ನು ನಾವು ಹೊಂದಬೇಕು’ ಎಂದರು. ‘ಸಣ್ಣ ಉದ್ದಿಮೆಗಳಿಗೆ ಸರ್ಕಾರದ ವಿವಿಧ ಸಂಸ್ಥೆಗಳಿಂದ ಆಗಬೇಕಿರುವ ಪಾವತಿಯು ಸಕಾಲದಲ್ಲಿ ಆಗುವಂತೆ ನೋಡಿಕೊಳ್ಳಲು ಕಾನೂನು ರೂಪಿಸುವ ಆಲೋಚನೆ ಕೂಡ ಸರ್ಕಾರಕ್ಕಿದೆ’ ಎಂದು ಗಡ್ಕರಿ ತಿಳಿಸಿದರು.

ಸರ್ಕಾರದ ಖಾತರಿ ಅಡಿ ವಿತರಣೆ ಮಾಡಲು ಉದ್ದೇಶಿರುವ ಒಟ್ಟು ₹ 3 ಲಕ್ಷ ಕೋಟಿ ಮೊತ್ತದ ಸಾಲದಲ್ಲಿ, ₹ 1.2 ಲಕ್ಷ ಕೋಟಿಯನ್ನು ಸಣ್ಣ ಉದ್ದಿಮೆಗಳಿಗೆ ನೀಡಲಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯುವಲ್ಲಿ ಬ್ಯಾಂಕುಗಳಲ್ಲಿ ತೊಂದರೆ ಆಗುತ್ತಿದ್ದರೆ ಆ ಬಗ್ಗೆ ದೂರು ಸಲ್ಲಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT