ಗುರುವಾರ , ಮಾರ್ಚ್ 4, 2021
23 °C

ಎಲ್‌ಪಿಜಿ ದರ ಏರಿಕೆ: ಪ್ರತಿ ಸಿಲಿಂಡರ್‌ಗೆ ₹144.5 ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ಎಲ್‌ಪಿಜಿ ಸಿಲಿಂಡರ್‌

ನವದೆಹಲಿ: ಅಡುಗೆ ಅನಿಲ ಎಲ್‌ಪಿಜಿ ದರ ಬುಧವಾರ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್‌ ಬೆಲೆ ₹144.5 ಹೆಚ್ಚಳ ಮಾಡಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಇಂಧನ ದರ ಭಾರೀ ಏರಿಕೆಯಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಲ್‌ಪಿಜಿ ಸಿಲಿಂಡರ್‌ ಬಳಕೆದಾರರಿಗೆ ಅನುವಾಗುವ ನಿಟ್ಟಿನಲ್ಲಿ ಸರ್ಕಾರ ನೀಡುವ ಸಬ್ಸಿಡಿ ಬಹುತೇಕ ದುಪ್ಪಟ್ಟುಗೊಳಿಸಿದೆ. ಇದರಿಂದಾಗಿ ದರ ಹೆಚ್ಚಳವಾದರೂ ಸಾರ್ವಜನಿಕರಿಗೆ ಹೊರೆಯಾಗುವುದಿಲ್ಲ.

ದರ ಹೆಚ್ಚಳದ ಬಳಿಕ ಪ್ರತಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹ 714ರಿಂದ ₹ 858.50 ಆಗಿದೆ. 2014ರ ನಂತರ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಏರಿಕೆ ಮಾಡಲಾಗಿದೆ. ಆಗ ₹220 ಹೆಚ್ಚಳದೊಂದಿಗೆ ಪ್ರತಿ ಸಿಲಿಂಡರ್‌ ಬೆಲೆ ₹1,241 ತಲುಪಿತ್ತು. 

ಸಬ್ಸಿಡಿ ಸಹ ಹೆಚ್ಚಿಸಿರುವುದರಿಂದ ಸಾರ್ವಜನಿಕರಿಗೆ ಹೊರೆಯಾಗುವುದಿಲ್ಲ. ವರ್ಷಕ್ಕೆ 14.2 ಕೆಜಿಯ 12 ಸಿಲಿಂಡರ್‌ ವರೆಗೂ ಸಬ್ಸಿಡಿ ಅನ್ವಯವಾಗುತ್ತದೆ. ಪ್ರತಿ ಸಿಲಿಂಡರ್‌ಗೆ ಸರ್ಕಾರ ನೀಡುತ್ತಿದ್ದ ₹153.86 ಸಬ್ಸಿಡಿಯನ್ನು ₹291.48ಕ್ಕೆ ಏರಿಕೆ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. 

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಬ್ಸಿಡಿ ₹174.86 ರಿಂದ ₹312.48ಕ್ಕೆ ಹೆಚ್ಚಳ ಮಾಡಲಾಗಿದೆ. 

ಎಂದಿನಂತೆ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಪಡೆಯುವ ಗ್ರಾಹಕರ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಜಮೆಯಾಗಲಿದೆ. ಸಬ್ಸಿಡಿ ಅನ್ವಯವಾದ ನಂತರ ಸಾಮಾನ್ಯ ಬಳಕೆದಾರರಿಗೆ ಪ್ರತಿ ಸಿಲಿಂಡರ್‌ಗೆ ₹567.02 ಹಾಗೂ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ₹546.02 ಆಗಲಿದೆ. 

ಪರಿಸರ ಸ್ನೇಹಿ ಇಂಧನ ವ್ಯವಸ್ಥೆಯನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ಸರ್ಕಾರ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 8 ಕೋಟಿ ಬಡ ಮಹಿಳೆಯರ ಮನೆಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಿದೆ. 

ಸಾಮಾನ್ಯವಾಗಿ ತಿಂಗಳ ಮೊದಲ ದಿನವೇ ಎಲ್‌ಪಿಜಿ ದರ ಪರಿಷ್ಕರಿಸಲಾಗುತ್ತದೆ. ಆದರೆ, ಇದೇ ಮೊದಲ ಬಾರಿಗೆ ಎರಡು ವಾರಗಳ ಕಾಲಾವಕಾಶ ಪಡೆಯಲಾಗಿದೆ. ಅತಿ ಹೆಚ್ಚು ದರ ಏರಿಕೆಯ ಕಾರಣದಿಂದಾಗಿ ಅನುಮತಿ ಪಡೆಯಲು ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರ ಪ್ರಕಾರ, ದೆಹಲಿ ವಿಧಾನಸಭಾ ಚುನಾವಣೆಯ ಕಾರಣಗಳಿಂದಾಗಿ ಬೆಲೆ ಏರಿಕೆಯನ್ನು ಮುಂದೂಡಲಾಗಿತ್ತು. ಫೆಬ್ರುವರಿ 8ರಂದು ದೆಹಲಿ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು