ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳಲ್ಲಿ ಗರಿಷ್ಟ ಮಟ್ಟಕ್ಕೆ ಎನ್‌ಪಿಎ: ರಾಜನ್ ಎಚ್ಚರಿಕೆ

Last Updated 15 ಜುಲೈ 2020, 12:52 IST
ಅಕ್ಷರ ಗಾತ್ರ

ನವದೆಹಲಿ: ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣವುಬ್ಯಾಂಕಿಂಗ್‌ ವಲಯದಲ್ಲಿ ಮುಂದಿನ ಆರು ತಿಂಗಳುಗಳಲ್ಲಿ ಹಿಂದೆಂದೂ ಕಾಣದಂತಹ ಮಟ್ಟಕ್ಕೆ ಏರಿಕೆಯಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್‌ ರಘುರಾಂ ರಾಜನ್ ಎಚ್ಚರಿಸಿದ್ದಾರೆ. ಇದನ್ನು ಮೊದಲೇ ಗುರುತಿಸಿದರೆ ಒಳಿತು ಎಂದೂ ಅವರು ಕಿವಿಮಾತು ಹೇಳಿದ್ದಾರೆ.

ಕೋವಿಡ್–19 ಸಾಂಕ್ರಾಮಿಕ ಹಾಗೂ ಲಾಕ್‌ಡೌನ್‌ನ ಪರಿಣಾಮವಾಗಿ ವಾಣಿಜ್ಯೋದ್ಯಮಗಳು ತೀವ್ರ ನಷ್ಟಕ್ಕೆ ಗುರಿಯಾಗಿವೆ. ಹಲವಾರು ಉದ್ಯಮಗಳಿಗೆ ಸಾಲ ಮರುಪಾವತಿ ಕಷ್ಟವಾಗುತ್ತಿದೆ.

‘ಎನ್‌ಪಿಎಗಳ ನಿಜವಾದ ಪ್ರಮಾಣವನ್ನು ನಾವು ಗುರುತಿಸಿದ್ದೇ ಆದಲ್ಲಿ, ಮುಂದಿನ ಆರು ತಿಂಗಳುಗಳ ಅವಧಿಯಲ್ಲಿ ಎನ್‌ಪಿಎ ಪ್ರಮಾಣ ಹಿಂದೆಂದೂ ಕಾಣದ ಮಟ್ಟವನ್ನು ತಲುಪಲಿದೆ. ಅದನ್ನು ಎಷ್ಟು ಬೇಗ ಗುರುತಿಸುತ್ತೇವೋ ಅಷ್ಟು ಒಳ್ಳೆಯದು. ಏಕೆಂದರೆ ನಾವು ಸಮಸ್ಯೆಯನ್ನು ಬಗೆಹರಿಸಲು ಏನಾದರೂ ಮಾಡಬೇಕು’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬರೆದ ಲೇಖನವೊಂದನ್ನು ಉಲ್ಲೇಖಿಸಿ ರಾಜನ್ ಅವರು, ‘ಲೇಖನವು ಜನಧನ್‌ ಯೋಜನೆಯ ಯಶಸ್ಸಿನ ಬಗ್ಗೆ ಮಾತನಾಡುತ್ತದೆ. ಆದರೆ, ಕೆಲವು ಅರ್ಥಶಾಸ್ತ್ರಜ್ಞರು ಇದರ ವಿಚಾರದಲ್ಲಿ ಭಿನ್ನ ಅಭಿಪ್ರಾಯ ಹೊಂದಿದ್ದಾರೆ’ ಎಂದು ಹೇಳಿದ್ದಾರೆ. ‘ಜನಧನ್ ಯೋಜನೆಯು ಹೇಳಿಕೊಂಡ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ’ ಎಂದೂ ರಾಜನ್ ಹೇಳಿದ್ದಾರೆ.

ಸರ್ಕಾರವು ಕೆಲವು ಸುಧಾರಣೆಗಳನ್ನು ಪ್ರಕಟಿಸಿದೆ. ಬಹಳ ದಿನಗಳಿಂದ ಈ ಸುಧಾರಣೆಗಳ ಬಗ್ಗೆ ಮಾತುಗಳು ಇದ್ದವು. ಅವುಗಳೆಲ್ಲ ಅನುಷ್ಠಾನಕ್ಕೆ ಬಂದರೆ ಅರ್ಥವ್ಯವಸ್ಥೆಯ ದೊಡ್ಡ ವರ್ಗಕ್ಕೆ ಪ್ರಯೋಜನ ಆಗುತ್ತದೆ ಎನ್ನುವುದು ರಾಜನ್ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT