ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

99 ಡಾಲರ್‌ಗೆ ತಗ್ಗಿದ ಕಚ್ಚಾ ತೈಲ ದರ, ಇಂಧನ ಬೆಲೆ ಹೆಚ್ಚಳ ಸದ್ಯಕ್ಕಿಲ್ಲ: ವರದಿ

Last Updated 16 ಮಾರ್ಚ್ 2022, 3:45 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಮಂಗಳವಾರ 100 ಡಾಲರ್‌ಗಿಂತಲೂ ಕಡಿಮೆಯಾಗಿದೆ. ಹೀಗಾಗಿ ದೇಶದ ಮಾರುಕಟ್ಟೆಯಲ್ಲಿ ತೈಲ ಬೆಲೆ ಸದ್ಯಕ್ಕೆ ಏರಿಕೆಯಾಗದು ಎಂದು ವರದಿಯಾಗಿದೆ.

ಮಾರ್ಚ್ 7ರ ವೇಳೆಗೆ ಬ್ರೆಂಟ್ ಕಚ್ಚಾ ತೈಲ ಬೆಲೆ 139 ಡಾಲರ್‌ಗೆ ಏರಿಕೆಯಾಗಿತ್ತು. ಮಂಗಳವಾರ 99.84 ಡಾಲರ್‌ಗೆ ಇಳಿಕೆಯಾಗಿದೆ. ಇದು ದೇಶದ ತೈಲ ಕಂಪನಿಗಳ ಮೇಲಿನ ಹೊರೆ ಇಳಿಕೆಯಾಗುವಂತೆ ಮಾಡಿದೆ.

ಫೆಬ್ರುವರಿ 28ರಂದು ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ ಇದ್ದ ಬ್ರೆಂಟ್ ಕಚ್ಚಾ ತೈಲ ಬೆಲೆ ಬಳಿಕ ಗಣನೀಯ ಏರಿಕೆ ದಾಖಲಿಸಿತ್ತು. ಮಾರ್ಚ್ 7ಕ್ಕೆ 14 ವರ್ಷಗಳ ಗರಿಷ್ಠ ಮಟ್ಟ ತಲುಪಿತ್ತು.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದ ಬಳಿಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ವಿಪರೀತ ಏರಿಳಿಕೆ ಕಾಣುತ್ತಿದೆ. ಉಕ್ರೇನ್–ರಷ್ಯಾ ಯುದ್ಧ ಆರಂಭವಾದ ಬಳಿಕ ವಾರದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಸುಮಾರು 40 ಡಾಲರ್‌ ಹೆಚ್ಚಾಗಿತ್ತು.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಸೇರಿದಂತೆ ದೇಶದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಳೆದ 131 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಬದಲಾವಣೆ ಮಾಡಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಹೆಚ್ಚಾದ ಕಾರಣ ದೇಶದಲ್ಲಿಯೂ ದರ ಹೆಚ್ಚಳ ಮಾಡಬಹುದು ಎಂದು ವರದಿಯಾಗಿತ್ತು.

ಈ ಮಧ್ಯೆ, ಜನಸಾಮಾನ್ಯರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಇಂಧನ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸಲು ಜಾಗರೂಕತೆಯಿಂದ ಮಧ್ಯಪ್ರವೇಶ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT