ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಅವಧಿ ವಿಮೆ

Last Updated 3 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮೊದಲ ತಿಂಗಳ ವೇತನ ಪಡೆದಾಗಿನ ಅನುಭವ, ಸಂಭ್ರಮ ದೀರ್ಘಕಾಲದವರೆಗೂ ನೆನಪಿನಲ್ಲಿ ಉಳಿಯುವಂಥದ್ದು. ಸಾಮಾನ್ಯವಾಗಿ ಮೊದಲ ತಿಂಗಳ ವೇತನದಿಂದ ನಮ್ಮ ಆತ್ಮೀಯರಿಗೆ ಏನಾದರೂ ಉಡುಗೊರೆಗಳನ್ನು ಖರೀದಿಸುತ್ತೇವೆ. ಆದರೆ, ಗಳಿಕೆ ಆರಂಭಿಸಿದೆವೆಂದರೆ, ಕುಟುಂಬದ ಕಡೆಗಿನ ನಮ್ಮ ಜವಾಬ್ದಾರಿಗಳೂ ಹೆಚ್ಚಿವೆ ಎಂದೂ ಅರ್ಥ. ಮನೆ, ವಾಹನ ಖರೀದಿ, ಪ್ರವಾಸ ಹೋಗುವುದೇ ಮುಂತಾದ ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಯೋಜನೆಗಳನ್ನು ರೂಪಿಸಿ ಉಳಿತಾಯ ಮತ್ತು ಹೂಡಿಕೆಗಳನ್ನೂ ಆರಂಭಿಸುತ್ತೇವೆ.

ಈ ಸಂದರ್ಭದಲ್ಲೇ ನಾವು ಒಂದು ಕ್ಷಣ ಎಲ್ಲಾ ಯೋಜನೆಗಳನ್ನು ಬದಿಗಿಟ್ಟು, ದುರದೃಷ್ಟಕರ ಸನ್ನಿವೇಶದ (ಉದಾಹರಣೆಗೆ ಸಾವು) ಬಗ್ಗೆಯೂ ಚಿಂತಿಸಬೇಕು. ಹಾಗೇನಾದರೂ ಸಂಭವಿಸಿದರೆ ನಮ್ಮ ಕುಟುಂಬದ ಗಳಿಕೆಯು ಒಮ್ಮೆಗೇ ಸ್ಥಗಿತಗೊಂಡಂತಲ್ಲವೇ? ಕುಟುಂಬದವರಿಗೆ ನಮ್ಮನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ, ಆದಾಯವೂ ಸ್ಥಗಿತಗೊಂಡು ಜೀವನ ಕಷ್ಟವಾಗಬಹುದಲ್ಲ. ಕೇವಲ ಒಂದಿಷ್ಟು ಉಳಿತಾಯ ಮಾಡುವುದರಿಂದ ಕುಟುಂಬದ ಆರ್ಥಿಕ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಲಾರದು. ಇದರ ಜೊತೆಗೆ ನೀವು ಗಳಿಕೆಯನ್ನು ಆರಂಭಿಸಿದ ಕೂಡಲೇ ಜೀವವಿಮೆಯನ್ನು ಮಾಡಿಸಿಕೊಳ್ಳುವುದೂ ಅತಿ ಮುಖ್ಯ.

ಒಂದು ಉದಾಹರಣೆ: ನೀವು ಮಾಸಿಕ ₹ 5,000 ಉಳಿತಾಯ ಮಾಡುತ್ತೀರಿ ಎಂದಿಟ್ಟುಕೊಳ್ಳೋಣ. ಅದಕ್ಕೆ ವಾರ್ಷಿಕ ಶೇ 8ರಷ್ಟು ಬಡ್ಡಿ ಬರುತ್ತಿದ್ದರೂ ನಿಮ್ಮ ಉಳಿತಾಯವು ₹ 50 ಲಕ್ಷ ಆಗಬೇಕಾದರೆ ಕನಿಷ್ಠ 25 ವರ್ಷಗಳು ಬೇಕಾಗುತ್ತವೆ. ಆದರೆ, ವಾರ್ಷಿಕ ₹ 5,000 ಕಂತು ಪಾವತಿ ಮಾಡುವ ವಿಮೆ ಮಾಡಿಸಿಕೊಂಡರೆ ಮರು ಕ್ಷಣದಿಂದಲೇ ನಿಮಗೆ ₹ 50 ಲಕ್ಷದ ರಕ್ಷಣೆ ಲಭಿಸುತ್ತದೆ. ಅದೂ ಸುಮಾರು 35 ವರ್ಷಗಳ ಅವಧಿಗೆ. ಜೀವ ವಿಮೆಯಲ್ಲಿನ ‘ಅವಧಿ ಯೋಜನೆ’ಗಳು (term insurance) ಜೀವ ವಿಮೆ ಒದಗಿಸುವುದರ ಜೊತೆಗೆ, ವಿಮೆಯ ಅವಧಿಯಲ್ಲಿ ವಿಮೆದಾರರಿಗೆ ಯಾವುದೇ ತೊಂದರೆ ಆಗಿರದಿದ್ದಲ್ಲಿ ವಿಮಾ ಅವಧಿ ಮುಗಿದ ನಂತರ ಅದುವರೆಗೂ ಪಾವತಿಸಿದ್ದ ಕಂತಿನ ಹಣವನ್ನು ಗ್ರಾಹಕರಿಗೆ ವಾಪಸ್‌ ನೀಡುತ್ತವೆ. ಇಂಥ ಯೋಜನೆಗಳ ಇನ್ನೊಂದು ಲಾಭ ಏನೆಂದರೆ ಇವುಗಳಿಗೆ ಹೆಚ್ಚುವರಿಯಾಗಿ ಷರತ್ತುಗಳನ್ನು (insurance riders) ಸೇರಿಸುವ ಮೂಲಕ ಹೆಚ್ಚಿನ ಲಾಭವನ್ನೂ ವಿಮಾದಾರರು ಮಾಡಿಕೊಳ್ಳಬಹುದು.

ವಿಮಾ ಕಂಪನಿ, ವಿಮೆ ಮಾಡಿಸುವವರು ಮಹಿಳೆಯೋ, ಪುರುಷರೋ ಎಂಬುದರ ಮೇಲೆ, ವಿಮಾದಾರರ ಆರೋಗ್ಯ ಮುಂತಾದವುಗಳ ಆಧಾರದಲ್ಲಿ ಕಂತಿನ ಪ್ರಮಾಣ ಸ್ವಲ್ಪು ಹೆಚ್ಚು ಕಡಿಮೆ ಆಗುತ್ತದೆ. ವಿಮೆದಾರರ ವಯಸ್ಸಿಗೆ ಅನುಗುಣವಾಗಿ ಕಂತಿನ ಪ್ರಮಾಣ ನಿರ್ಧಾರವಾಗುತ್ತದೆ. ಸಣ್ಣ ವಯಸ್ಸಿನಲ್ಲೇ ವಿಮೆ ಮಾಡಿಸಲು ಮುಂದಾದರೆ ವೈದ್ಯಕೀಯ ತಪಾಸಣೆ ಮುಂತಾದ ಪ್ರಕ್ರಿಯೆಯ ಅಗತ್ಯವೂ ಇರುವುದಿಲ್ಲ. ಆದ್ದರಿಂದ ವಿಮೆ ಮಾಡಿಸುವುದು ಸರಳವಾಗಿರುತ್ತದೆ. ಆದರೆ ಯಾವ ವಿಮೆ ಸೂಕ್ತ ಎಂಬುದನ್ನು ನಿರ್ಧರಿಸುವುದಕ್ಕೂ ಮುನ್ನ, ವಿಮೆಯ ಬಗ್ಗೆ ಒಂದಿಷ್ಟು ಮಾಹಿತಿ ಹೊಂದುವುದೂ ಅಗತ್ಯ.

ಎಷ್ಟು ವಿಮೆ ಮಾಡಿಸಬೇಕು?

ಇದು ಎಲ್ಲರಿಗೂ ಎದುರಾಗುವ ಸಾಮಾನ್ಯ ಪ್ರಶ್ನೆ. ವಿಮೆಯ ಮೊತ್ತವನ್ನು ನಿರ್ಧರಿಸಲು ಸರಳ ವಿಧಾನವೆಂದರೆ, ನಿಮ್ಮ ವಾರ್ಷಿಕ ಆದಾಯದ 10 ರಿಂದ 15 ಪಟ್ಟು ಮೊತ್ತಕ್ಕೆ ವಿಮೆ ಮಾಡಿಸಬೇಕು. ಹಾಗೆ ಮಾಡಿದರೆ ಮಾತ್ರ ಯಾವುದೇ ಅವಘಡ ಸಂಭವಿಸಿದರೆ ನಿಮ್ಮ ಕುಟುಂಬಕ್ಕೆ ಆರ್ಥಿಕ ರಕ್ಷಣೆ ನೀಡಲು ಸಾಧ್ಯ.

ಅವಧಿ ಎಷ್ಟು ದೀರ್ಘವಾಗಿರಬೇಕು?

ಸಾಮಾನ್ಯವಾಗಿ ನಿವೃತ್ತಿ ಹೊಂದುವ ವರ್ಷದವರೆಗೂ (60 ವರ್ಷ ತುಂಬುವವರೆಗೆ) ವಿಮೆಯ ಅವಧಿಯನ್ನು ನಿರ್ಧರಿಸುವುದು ಸೂಕ್ತ. ಅಂದರೆ ನೀವು ನಿಮ್ಮ 28ನೇ ವರ್ಷದಲ್ಲಿ ವಿಮೆ ಮಾಡಿಸುತ್ತೀರಿ ಎಂದರೆ, 32 ವರ್ಷಗಳ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಹೆಚ್ಚುವರಿ ರಕ್ಷಣೆ

ಗಂಭೀರ ಕಾಯಿಲೆ, ಅಪಘಾತದಲ್ಲಾದ ಸಾವಿಗೆ ಪರಿಹಾರ... ಮುಂತಾಗಿ ಜೀವವಿಮೆಗಳು ಇತ್ತೀಚೆಗೆ ಕೆಲವು ಹೆಚ್ಚುವರಿ ರಕ್ಷಣಾ ಸೌಲಭ್ಯಗಳನ್ನು (ರೈಡರ್‌) ಒದಗಿಸುತ್ತಿವೆ. ಸ್ವಲ್ಪ ಹೆಚ್ಚು ಪ್ರೀಮಿಯಂ ಪಾವತಿಸುವ ಮೂಲಕ ಇಂಥ ಹೆಚ್ಚುವರಿ ರಕ್ಷಣೆಯನ್ನು ಪಡೆಯಬಹುದು. ಜೀವವಿಮೆ ಮಾಡಿಸುವುದೂ ಈಗ ಸರಳ ವಿಧಾನವಾಗಿದೆ. ಆನ್‌ಲೈನ್‌ನಲ್ಲಿ ಯಾವುದೇ ವಸ್ತುವನ್ನು ಖರೀದಿಸಿದಂತೆ ಇಂದು ಆನ್‌ಲೈನ್‌ನಲ್ಲೇ ವಿಮೆಯನ್ನೂ ಮಾಡಿಸಬಹುದಾಗಿದೆ. ಬೇರೆ ಬೇರೆ ವಿಮೆ ಸಂಸ್ಥೆಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಆಕರ್ಷಕ ಯೋಜನೆಗಳನ್ನು ನೀಡುತ್ತಿವೆ. ಆನ್‌ಲೈನ್‌ನಲ್ಲೇ ಇಂಥ ಯೋಜನೆಗಳನ್ನು ತಾಳೆಮಾಡಿ, ನಿಮಗೆ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಬಹುದಾಗಿದೆ. ವಿಳಂಬ ಮಾಡದೆ, ಈಗಲೇ ಇಂಥ ಸೌಲಭ್ಯಗಳ ಲಾಭ ಪಡೆದು ಸುರಕ್ಷಿತವಾಗಿರುವುದು ಬುದ್ಧಿವಂತಿಕೆ.

ಪ್ರಯೋಜನಗಳು

lವಾರ್ಷಿಕ ₹ 5 ಸಾವಿರ ಕಂತಿನ ಅವಧಿ ವಿಮೆಗೆ (Term Insurance) ದೊಡ್ಡ ಮೊತ್ತದ ವಿಮೆ ಪರಿಹಾರ

lಲಿಂಗ, ವಯಸ್ಸು, ಆರೋಗ್ಯ ಆಧರಿಸಿ ಕಂತಿನ ‍ಪ್ರಮಾಣ ನಿಗದಿ

lಚಿಕ್ಕ ವಯಸ್ಸಿನಲ್ಲಿ ಪಾಲಿಸಿ ಖರೀದಿಸಿದರೆ ವೈದ್ಯಕೀಯ ತಪಾಸಣೆಯ ಅಗತ್ಯ ಇರಲಾರದು

lವಾರ್ಷಿಕ ಆದಾಯದ 10 ರಿಂದ 15 ಪಟ್ಟು ವಿಮೆ

lನಿವೃತ್ತಿ ವಯಸ್ಸಿನವರೆಗೆ ವಿಮೆ

lಹೆಚ್ಚು ಪ್ರೀಮಿಯಂ ಪಾವತಿಸಿದರೆ ಹೆಚ್ಚುವರಿ ರಕ್ಷಣೆ

lಆನ್‌ಲೈನ್‌ನಲ್ಲಿಯೂ ಪಾಲಿಸಿ ಖರೀದಿ ಸುಲಭ

(ಲೇಖಕ: ಎಸ್‌ಬಿಐ ಲೈಫ್‌ ಇನ್ಶುರೆನ್ಸ್‌ನ ಬಿಸಿನೆಸ್‌ ಸ್ಟ್ರಾಟಜಿ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT