ಬುಧವಾರ, ಮೇ 25, 2022
29 °C

ಹಿಂದಿನ ಸರ್ಕಾರಗಳು ತೈಲ ಆಮದು ತಗ್ಗಿಸಬೇಕಿತ್ತು: ಪ್ರಧಾನಿ ನರೇಂದ್ರ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಟ್ರೋಲ್ ಬೆಲೆಯು ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಲೀಟರ್‌ಗೆ ₹ 100ರ ಗಡಿ ದಾಟಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ‘ಹಿಂದಿನ ಸರ್ಕಾರಗಳು ಇಂಧನ ಆಮದು ಪ್ರಮಾಣ ತಗ್ಗಿಸುವತ್ತ ಗಮನ ನೀಡಿದ್ದಿದ್ದರೆ ಮಧ್ಯಮ ವರ್ಗಕ್ಕೆ ಹೊರೆ ಆಗುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

2019–20ರಲ್ಲಿ ಭಾರತಕ್ಕೆ ಅಗತ್ಯವಿದ್ದ ತೈಲದ ಪೈಕಿ ಶೇಕಡ 85ಕ್ಕಿಂತ ಹೆಚ್ಚಿನ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳಲಾಯಿತು, ನೈಸರ್ಗಿಕ ಅನಿಲದ ಅಗತ್ಯತೆಯ ಶೇ 53ರಷ್ಟನ್ನು ಆಮದು ಮಾಡಿಕೊಳ್ಳಲಾಯಿತು ಎಂದು ಪ್ರಧಾನಿ ಹೇಳಿದರು. ಅವರು ತಮ್ಮ ಮಾತಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಳ ಆಗುತ್ತಿರುವುದನ್ನು ಉಲ್ಲೇಖಿಸಲಿಲ್ಲ.

‘ನಮ್ಮಷ್ಟು ವೈವಿಧ್ಯತೆ ಹೊಂದಿರುವ, ಇಷ್ಟೊಂದು ಪ್ರತಿಭೆ ಹೊಂದಿರುವ ದೇಶವು ಇಂಧನದ ಅಗತ್ಯಗಳಿಗೆ ಈ ಪರಿಯಲ್ಲಿ ಆಮದನ್ನು ಅವಲಂಬಿಸಿರಬೇಕೇ’ ಎಂದು ಅವರು ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ಆನ್‌ಲೈನ್‌ ಮೂಲಕ ಪಾಲ್ಗೊಂಡು ಪ್ರಶ್ನಿಸಿದರು.

‘ನಾನು ಯಾರನ್ನೂ ಟೀಕಿಸಲು ಬಯಸುವುದಿಲ್ಲ. ಆದರೆ, ಈ ವಿಚಾರವಾಗಿ ನಾವು ಹಿಂದೆಯೇ ಗಮನ ನೀಡಿದ್ದಿದ್ದರೆ ನಮ್ಮ ಮಧ್ಯಮ ವರ್ಗದ ಮೇಲೆ ಹೊರೆ ಬೀಳುತ್ತಿರಲಿಲ್ಲ’ ಎಂದು ಹೇಳಿದರು. ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಪೆಟ್ರೋಲ್ ಬೆಲೆಯಲ್ಲಿ ಶೇಕಡ 60ರಷ್ಟು ಹಾಗೂ ಡೀಸೆಲ್ ಬೆಲೆಯಲ್ಲಿ ಶೇ 54ರಷ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸಿರುವ ವಿವಿಧ ಸುಂಕ, ತೆರಿಗೆಗಳಿಗೆ ಪಾವತಿ ಆಗುತ್ತವೆ.

ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ಮೋದಿ ಅವರು ಹೇಳಿದರು. ‘ಮಧ್ಯಮ ವರ್ಗದವರ ಬಗ್ಗೆ ನಮ್ಮ ಸರ್ಕಾರ ಸಂವೇದನಾಶೀಲವಾಗಿದೆ. ಹಾಗಾಗಿಯೇ ಭಾರತವು ಇಂದು ಎಥೆನಾಲ್ ಬಳಕೆಗೆ ಆದ್ಯತೆ ನೀಡುತ್ತಿದೆ. ಇದು ಗ್ರಾಹಕರಿಗೂ ರೈತರಿಗೂ ಸಹಾಯ ಮಾಡುತ್ತದೆ’ ಎಂದರು. ಇಂಧನ ಆಮದನ್ನು ತಗ್ಗಿಸಲು ದೇಶ ಯತ್ನಿಸುತ್ತಿದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು