ನವದೆಹಲಿ: ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) 2023–24ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹3,010 ಕೋಟಿ ನಿವ್ವಳ ಲಾಭ ಗಳಿಸಿದೆ.
2022–23ನೇ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕ್ ₹1,159 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಮೂರು ಪಟ್ಟು ಏರಿಕೆಯಾಗಿದೆ.
ಒಟ್ಟು ವರಮಾನವು ₹27,269 ಕೋಟಿಯಿಂದ ₹32,361 ಕೋಟಿಗೆ ಹೆಚ್ಚಳವಾಗಿದೆ. ವಸೂಲಾಗದ ಸಾಲಗಳಿಗೆ ತೆಗೆದಿರಿಸಬೇಕಿರುವ ಮೊತ್ತ ಕೂಡ ತಗ್ಗಿದೆ ಎಂದು ಬ್ಯಾಂಕ್, ಗುರುವಾರ ಷೇರುಪೇಟೆಗೆ ತಿಳಿಸಿದೆ.
ನಿವ್ವಳ ಬಡ್ಡಿ ವರಮಾನವು ₹9,499 ಕೋಟಿಯಿಂದ ₹10,363 ಕೋಟಿಗೆ (ಶೇ 9ರಷ್ಟು) ಹೆಚ್ಚಳವಾಗಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಎನ್‌ಪಿಎ) ಶೇ 8.74ರಿಂದ ಶೇ 5.73ಕ್ಕೆ ಕುಸಿದಿದೆ. ನಿವ್ವಳ ಎನ್‌ಪಿಎ ಶೇ 2.72ರಿಂದ ಶೇ 0.73ಕ್ಕೆ ಇಳಿಕೆಯಾಗಿದೆ.
‘ನಿವ್ವಳ ಬಡ್ಡಿ ವರಮಾನ ಮತ್ತು ಎನ್‌ಪಿಎ ಇಳಿಕೆಯಾಗಿರುವುದರಿಂದ ಕೊನೆಯ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಅತುಲ್ ಕುಮಾರ್ ಗೋಯೆಲ್ ತಿಳಿಸಿದ್ದಾರೆ.