ಬುಧವಾರ, ಆಗಸ್ಟ್ 4, 2021
23 °C
ಜೂನ್‌ನಲ್ಲಿ ಹೂಡಿಕೆದಾರರ ಸಂಪತ್ತು ₹ 8.96 ಲಕ್ಷ ಕೋಟಿ ಹೆಚ್ಚಳ

ಗೂಳಿ ಹಿಡಿತದಲ್ಲಿ ಷೇರುಪೇಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುತ್ತಿದ್ದು, ಮಾರುಕಟ್ಟೆ ಮೌಲ್ಯದಲ್ಲಿಯೂ ಚೇತರಿಕೆ ಕಂಡುಬರುತ್ತಿದೆ.

ಜೂನ್‌ನಲ್ಲಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 8.96 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದ್ದು, ಮುಂಬೈ ಷೇರುಪೇಟೆಯ (ಬಿಎಸ್‌ಇ) ಬಂಡವಾಳ ಮೌಲ್ಯ ₹ 130.19 ಲಕ್ಷ ಕೋಟಿಗಳಿಂದ ₹ 139.15 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಬಿಎಸ್ಇ ಸಂವೇದಿ ಸೂಚ್ಯಂಕ ಜೂನ್‌ನಲ್ಲಿ 1,613 ಅಂಶಗಳಷ್ಟು ಹಾಗೂ ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 476 ಅಂಶಗಳಷ್ಟು ಏರಿಕೆ ಕಂಡಿವೆ.

ಎಫ್‌ಪಿಐ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜೂನ್‌ನಲ್ಲಿ ಷೇರುಗಳ ಖರೀದಿಗೆ ಗಮನ ನೀಡಿರುವುದು ಸಹ ಸಕಾರಾತ್ಮಕ ವಹಿವಾಟಿಗೆ ಕಾರಣವಾಗಿದೆ. ಜೂನ್ 1 ರಿಂದ 26ರವರೆಗಿನ ವಹಿವಾಟಿನಲ್ಲಿ ₹ 21,235 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಮಾರ್ಚ್‌ನಿಂದ ಏಪ್ರಿಲ್‌ವರೆಗೆ ಷೇರುಗಳನ್ನು ಮಾರಾಟ ಮಾಡಿದ್ದರು.

ವಾರದ ವಹಿವಾಟು: ಜೂನ್‌ 29 ರಿಂದ ಜುಲೈ 3ರವರೆಗೆ ನಡೆದ ವಾರದ ವಹಿವಾಟಿನಲ್ಲಿ ಬಿಎಸ್‌ಇ 850 ಅಂಶ ಹೆಚ್ಚಾಗಿದ್ದರೆ, ನಿಫ್ಟಿ 224 ಅಂಶ ಏರಿಕೆ ಕಂಡಿದೆ. ಬಿಎಸ್‌ಇ ಮಾರುಕಟ್ಟೆ ಮೌಲ್ಯವು ವಾರದ ವಹಿವಾಟಿನ ಅಂತ್ಯಕ್ಕೆ ₹ 142.51 ಲಕ್ಷ ಕೋಟಿಗೆ ತಲುಪಿದೆ.

ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುತ್ತಿದೆ. ಕೋವಿಡ್‌–19ಗೆ ಲಸಿಕೆ ಕಂಡುಹಿಡಿಯು ಪ್ರಯತ್ನಕ್ಕೆ ವೇಗ ದೊರೆತಿದ್ದು, ಮನುಷ್ಯರ ಮೇಲೆ ಪ್ರಯೋಗಿಸಲು ಅನುಮತಿ ದೊರೆತಿದೆ. ದೇಶದಲ್ಲಿ ಅನ್‌ಲಾಕ್‌ 2.0 ಜಾರಿಗೊಂಡಿದ್ದು, ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಹಳಿಗೆ ಮರಳುತ್ತಿವೆ. ಈ ಎಲ್ಲಾ ಬೆಳವಣಿಗೆಗಳು ಹೂಡಿಕೆದಾರರ ಮೇಲೆ ಪ್ರಭಾವ ಬೀರಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ: ವಿದೇಶಿ ವಿನಿಮಯ ಮೀಸಲು ಸಂಗ್ರಹವು ಜೂನ್‌ 26ಕ್ಕೆ ಕೊನೆಗೊಂಡ ವಾರದಲ್ಲಿ ₹9,525 ಕೋಟಿ ಹೆಚ್ಚಾಗಿ ₹38.02 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಅದಕ್ಕೂ ಹಿಂದಿನ ವಾರ ₹15,600 ಕೋಟಿ ಕಡಿಮೆಯಾಗಿ ₹ 37.95 ಲಕ್ಷ ಕೋಟಿಗಳಿಗೆ ತಲುಪಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು