ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ| ಹಣಕಾಸು ಉಳಿತಾಯಕ್ಕೆ ತಜ್ಞರ ಸಲಹೆ

Last Updated 28 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಭಾಗೀರಥಿ, ಕೊಡಗು

l ಪ್ರಶ್ನೆ: ನಾನು ನನ್ನ ಗೆಳತಿ 2014ರಲ್ಲಿ ಜಂಟಿಯಾಗಿ ₹ 33 ಲಕ್ಷ ಕೊಟ್ಟು ನಿವೇಶನ ಕೊಂಡೆವು. ಈ ವರ್ಷ (2021ರಲ್ಲಿ) ₹ 54 ಲಕ್ಷಕ್ಕೆ ಮಾರಾಟ ಮಾಡಿದೆವು. ಬಂದ ಲಾಭದಿಂದ ಮನೆ ಮೇಲೊಂದು ಸಣ್ಣ ಮನೆ ನಿರ್ಮಿಸಿದರೆ ಬಂಡವಾಳ ವೃದ್ಧಿ ತೆರಿಗೆಯಿಂದ ವಿನಾಯಿತಿ ಪಡೆಯಬಹುದೇ? ನಾನು ನಿವೃತ್ತ ಮುಖ್ಯೋಪಾಧ್ಯಾಯಿನಿ. ಓದಿರುವುದು ಇಂಗ್ಲಿಷ್‌ ಸಾಹಿತ್ಯ. ನನಗೆ ಬ್ಯಾಂಕಿಂಗ್‌, ಕಾಮರ್ಸ್‌ ಬಗ್ಗೆ ಅಷ್ಟು ಅನುಭವ ಇಲ್ಲ. ನಿಮ್ಮ ಅಂಕಣದಿಂದ ಸ್ವಲ್ಪಮಟ್ಟಿಗೆ ತಿಳಿದುಕೊಳ್ಳುತ್ತಿದ್ದೇನೆ. ನೀವು ಪ್ರಶ್ನೆ ಕೇಳಿದವರಿಗೆ ಉತ್ತರದ ಜೊತೆಗೆ ಅವರ ಆಪ್ತಸಮಾಲೋಚಕರ ರೀತಿಯಲ್ಲಿಯೂ ಕೆಲವು ಮಾತುಗಳನ್ನು ಹೇಳುತ್ತೀರಿ. ಮುಖ್ಯವಾಗಿ ನಿಮಗೆ ಜನಸಾಮಾನ್ಯರ ಬಗ್ಗೆ ಇರುವ ಕಾಳಜಿ ಉತ್ತರದಲ್ಲಿ ಕಂಡುಬರುತ್ತದೆ.

ಯು.ಪಿ. ಪುರಾಣಿಕ್
ಯು.ಪಿ. ಪುರಾಣಿಕ್

ಉತ್ತರ: ಸೆಕ್ಷನ್‌ 48ರ ಆಧಾರದ ಮೇಲೆ ಬಂಡವಾಳವೃದ್ಧಿ ಬರುವ ಮೊತ್ತದಲ್ಲಿ ಮನೆ ಕಟ್ಟಿಸಬಹುದು. ಹಾಗೂ ಸೆಕ್ಷನ್‌ 54ಇಸಿ ಆಧಾರದ ಮೇಲೆ ₹ 50 ಲಕ್ಷದ ತನಕ ಎನ್‌ಎಚ್‌ಎಐ/ಆರ್‌ಇಸಿ ಬಾಂಡ್‌ಗಳಲ್ಲಿ ಕೂಡ ಹಣ ತೊಡಗಿಸಬಹುದು. ನಿಮಗೆ ಬಂದಿರುವ ಒಟ್ಟು ಲಾಭ ₹ 21 ಲಕ್ಷ. ಹಣದುಬ್ಬರ ಕಳೆದರೆ ಇಬ್ಬರಿಂದ ₹ 9 ಲಕ್ಷ ಬರಬಹುದು. ಗಳಿಸಿದ ಲಾಭಕ್ಕಿಂತ ಮನೆ ಮೇಲೊಂದು ಕಟ್ಟಡ ನಿರ್ಮಿಸಲು ಇನ್ನೂ ಹೆಚ್ಚಿನ ಹಣ ಬೇಕಾಗುವುದರಿಂದ ನಿಮಗೆ ಬಂಡವಾಳ ವೃದ್ಧಿ ತೆರಿಗೆ ಬರುವುದಿಲ್ಲ.

ಮಾಧವಮೂರ್ತಿ, ಊರುಬೇಡ

l ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ವಯಸ್ಸು 62 ವರ್ಷ. ನೀರು, ವಿದ್ಯುತ್‌, ಫೋನ್‌ ಬಿಲ್‌ ತುಂಬಲು ಆಯಾ ಕಚೇರಿಗೆ ಹೋಗಿ ಸರತಿಯಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಆನ್‌ಲೈನ್‌ನಲ್ಲಿ ತುಂಬಲು ನನಗೆ ಬರುವುದಿಲ್ಲ. ಇದಕ್ಕೆ ಸುಲಭ ಮಾರ್ಗ ತಿಳಿಸಿ.

ಉತ್ತರ: ನಿಮ್ಮ ಪ್ರಶ್ನೆ ಅರ್ಥಪೂರ್ಣವಾಗಿದೆ. ಮುಖ್ಯವಾಗಿ ಹಿರಿಯ ನಾಗರಿಕರಿಗೆ ಕಚೇರಿ ಮುಂದೆ ಸರತಿಯಲ್ಲಿ ನಿಂತು ತಿಂಗಳ ಬಿಲ್‌ಗಳನ್ನು ಪಾವತಿಸುವುದು ಸುಲಭದ ಕೆಲಸವಲ್ಲ. ನೀರು, ವಿದ್ಯುತ್‌ ಹಾಗೂ ಫೋನ್‌ ಬಿಲ್‌ ಮೊತ್ತ ಆಯಾ ಸಂಸ್ಥೆಗೆ ಸಕಾಲದಲ್ಲಿ ಪಾವತಿಯಾಗಲು ಬ್ಯಾಂಕ್‌ನಲ್ಲಿ ಇಸಿಎಸ್‌ (ಎಲೆಕ್ಟ್ರಾನಿಕ್‌ ಕ್ಲಿಯರಿಂಗ್‌ ಸಿಸ್ಟಂ) ಮಾಡಿಸಿರಿ. ಇಸಿಎಸ್‌ ಮಾಡಲು ನೀವು ಆಯಾ ಕಚೇರಿಗೆ ಹೋಗಿ ಅವರು ಪ್ರಸ್ತುತಪಡಿಸಿದ ಫಾರಂ ತುಂಬಬೇಕು. ನಿಮ್ಮ ಬ್ಯಾಂಕ್‌ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್‌ ಇತ್ಯಾದಿ ಫಾರಂನಲ್ಲಿ ಭರ್ತಿ ಮಾಡಬೇಕು. ಇದು ಸುಲಭದ ಕೆಲಸ. ಮುಂದೆ, ಈ ಸಂಸ್ಥೆಗಳು ನಿಮ್ಮ ತಿಂಗಳ ಬಿಲ್‌ ಮೊತ್ತವನ್ನು ಬ್ಯಾಂಕ್‌ಗೆ ಕಳುಹಿಸಿ ನಿಮ್ಮ ಖಾತೆಗೆ ಖರ್ಚು ಹಾಕಿಸಿ ನೇರವಾಗಿ ಬಿಲ್ ಮೊತ್ತ ಪಡೆಯುತ್ತವೆ. ಹೀಗೆ ಮಾಡಿದಲ್ಲಿ ನೀವು ಕಚೇರಿಗಳಲ್ಲಿ ಸರತಿಯಲ್ಲಿ ನಿಲ್ಲುವುದು ತಪ್ಪಲಿದೆ. ಇಸಿಎಸ್‌ ಬೇಡವಾದಲ್ಲಿ ರದ್ದುಪಡಿಸುವ ಹಕ್ಕೂ ನಿಮಗಿರುತ್ತದೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಕರೆ ಮಾಡಿರಿ.

ರಶ್ಮಿ ರಾಘವೇಂದ್ರ, ಚಾಮರಾಜಪೇಟೆ, ಬೆಂಗಳೂರು

l ಪ್ರಶ್ನೆ: ನಾನು ಸರ್ಕಾರಿ ಉದ್ಯೋಗಿ. ವಯಸ್ಸು 52 ವರ್ಷ. ತಿಂಗಳ ಸಂಬಳ ₹ 72,200. ತೆರಿಗೆ ಉಳಿಸಲು ಸೆಕ್ಷನ್‌ 80ಸಿ ಆಧಾರದ ಮೇಲೆ ಸಹಕಾರ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಬಹುದೇ? ಭದ್ರತೆ, ಅವಧಿ, ಬಡ್ಡಿದರ ಎಲ್ಲವನ್ನೂ ವಿವರವಾಗಿ ತಿಳಿಸಿ.

ಉತ್ತರ: ಸೆಕ್ಷನ್‌ 80ಸಿ ಆಧಾರದ ಮೇಲೆ ₹ 1.50 ಲಕ್ಷ ಬ್ಯಾಂಕ್‌ ಠೇವಣಿ ಮಾಡಬಹುದು. ಅವಧಿ 5 ವರ್ಷ. ಈ ಅವಧಿಯಲ್ಲಿ ಠೇವಣಿ ಮುರಿದು ವಾಪಸ್‌ ಪಡೆಯುವಂತಿಲ್ಲ ಹಾಗೂ ಠೇವಣಿ ಮೇಲೆ ಸಾಲ ಪಡೆಯುವಂತಿಲ್ಲ. ಬಡ್ಡಿ ದರವನ್ನು ಆಯಾ ಬ್ಯಾಂಕ್‌ಗಳು ನಿರ್ಧರಿಸುತ್ತವೆ. ತೆರಿಗೆ ವಿನಾಯಿತಿ ಪಡೆಯಲು ಕಡ್ಡಾಯವಾಗಿ ಶೆಡ್ಯೂಲ್ಡ್‌ ಬ್ಯಾಂಕ್‌ಗಳಲ್ಲಿಯೇ ಠೇವಣಿ ಮಾಡಬೇಕು. ಸಹಕಾರ ಬ್ಯಾಂಕ್‌ಗಳಲ್ಲಿಯೂ ಶೆಡ್ಯೂಲ್ಡ್‌ ಬ್ಯಾಂಕ್‌ಗಳಿವೆ. ಉದಾ: ಸಹಕಾರ ಅಪೆಕ್ಸ್‌ ಬ್ಯಾಂಕ್‌, ಶ್ಯಾಮರಾವ್ ವಿಠಲ್‌ ಬ್ಯಾಂಕ್‌ ಇತ್ಯಾದಿ. ಠೇವಣಿದಾರರು ವಾಣಿಜ್ಯ ಅಥವಾ ಸಹಕಾರ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸುವಾಗ ಓರ್ವ ವ್ಯಕ್ತಿಯ ಹೆಸರಿನಲ್ಲಿ ಗರಿಷ್ಠ ₹ 5 ಲಕ್ಷದವರೆಗೆ ಇರಿಸಲು ಭಯಪಡುವ ಅವಶ್ಯಕತೆ ಇಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿ, ಠೇವಣಿ ಮೇಲಿನ ವಿಮೆ ಮೊತ್ತವನ್ನು ₹ 5 ಲಕ್ಷಕ್ಕೆ ಹೆಚ್ಚಿಸಿದೆ. ಒಂದು ವೇಳೆ ಯಾವುದೇ ಬ್ಯಾಂಕ್‌ ದಿವಾಳಿ ಆದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮೊರಟೋರಿಯಂ ವಿಧಿಸಿದಲ್ಲಿ, ಠೇವಣಿದಾರರಿಗೆ 90 ದಿನಗಳಲ್ಲಿ ₹ 5 ಲಕ್ಷಗಳ ತನಕ ‘ಡಿಐಸಿಜಿಸಿ’ಯಿಂದ ಪರಿಹಾರ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT